ಬದುಕಿಗೆ ಬೆಳಕಾದ ಗೃಹಲಕ್ಷ್ಮಿ: ಸರ್ಕಾರ ಕೊಟ್ಟ ಹಣದಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ರಾಜ್ಯದ ಮಹಿಳೆಯರಿಗೆ ಸಾಕಷ್ಟು ಉಪಯೋಗವಾಗುತ್ತಿದ್ದು, ಅನೇಕರು ಜೀವನ ಮಟ್ಟ ಸುಧಾರಿಸಲು ಇದು ನೆರವಾಗಿದೆ. ಕಳೆದ ಒಂದು ವರ್ಷದಿಂದ ಸರ್ಕಾರದಿಂದ ಬರುತ್ತಿರುವ ಉಚಿತ ಯೋಜನೆಗಳು ಹಾಗೂ ಗೃಹಲಕ್ಷ್ಮಿ ಯೋಜನೆ ಜೀವನ ನಡೆಸಲು ನೆರವಾಗುತ್ತಿದ್ದು, ರಾಜ್ಯದ ಮಹಿಳೆಯರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ ನೀಡಿದ ಹಣವನ್ನು ಸದುಪಯೋಗಪಡಿಸಿಕೊಂಡ ಬೆಳಗಾವಿಯ ಮಹಿಳೆಯೊಬ್ಬರು ರಾಜ್ಯ ಸರ್ಕಾರಕ್ಕೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಮಹಿಳೆ ಸಕ್ಕುಬಾಯಿ ಕರದಿನ ಎನ್ನುವವರು ಧೀರ್ಘ ಕಾಲದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದ ಕಾರಣ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದ ಕಾರಣ ಸಕ್ಕುಬಾಯಿ ಅವರ ಕಣ್ಣಿನಲ್ಲಿ ಪೊರೆ ಬಂದಿತ್ತು. ನೋವು ಕೂಡ ಹೆಚ್ಚಾಗಿತ್ತು. ಆದರೆ ವಿಧಾನಸಭಾ ಚುನಾವಣೆ ಬಳಿಕ ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಹಣ ಬರಲು ಆರಂಭವಾಯಿತು. ಸಕ್ಕುಬಾಯಿ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 10 ತಿಂಗಳುಗಳ ಕಾಲ ಕೂಡಿಟ್ಟು ಒಟ್ಟು 20 ಸಾವಿರ ರೂಪಾಯಿಗಳು ಸಂಗ್ರಹಿಸಿಕೊಂಡಿದ್ದಾರೆ.
ಬಳಿಕ ರಾಮದುರ್ಗ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 26 ಸಾವಿರ ರೂಪಾಯಿ ಖರ್ಚಾಗಿದ್ದು, ಇದರಲ್ಲಿ 20 ಸಾವಿರ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಸಕ್ಕುಬಾಯಿ ಅವರ ಕಣ್ಣಿನ ಸಮಸ್ಯೆ ನಿವಾರಣೆಯಾಗಿದೆ. ಸದ್ಯ ಖುಷಿಯಾಗಿರುವ ಸಕ್ಕುಬಾಯಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.