ಗುರುವಿನ ಮಹತ್ವ ಸಾರುವ ಗುರು ಪೂರ್ಣಿಮಾ-ಹಾರಣಗೇರಾ ಬರಹ
ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ
-ರಾಘವೇಂದ್ರ ಹಾರಣಗೇರಾ
ಇಂದು ಗುರು ಪೂರ್ಣಿಮಾ. ಗುರುವನ್ನು ಸ್ಮರಿಸುವ, ಆರಾಧಿಸುವ, ಪೂಜಿಸುವ ದಿನ. ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಗುರುವಿನ ಸ್ಥಾನ ಮಹತ್ವದ್ದಾಗಿದೆ. ವೇದ ಉಪನಿಷತ್ತುಗಳಲ್ಲಿ, ಕೀರ್ತನೆಗಳಲ್ಲಿ, ರಾಮಾಯಣ ಮಹಾಭಾರತದಲ್ಲಿ, ಜಗತ್ತಿನ ವಿವಿಧ ಧರ್ಮ ಪರಂಪರೆಗಳಲ್ಲಿ ಗುರುವಿಗೆ ಮಹತ್ವಸ್ಥಾನವಿರುವುದನ್ನು ಕಾಣಬಹುದಾಗಿದೆ.
ನಮ್ಮ ದೇಶದಲ್ಲಿ ಗುರು ಪೂರ್ಣಿಮೆಯ ದಿನ ಭಗವಾನ ವೇದ ವ್ಯಾಸರ ಪೂಜೆಯನ್ನು ದೇಶಾದ್ಯಂತ ನೆರವೇರಿಸುತ್ತಾರೆ ಗುರು ಯಾವುದೇ ಜಾತಿ, ಪಂಥ, ಮತ ತಮ್ಮ ಪಂಗಡಗಳಿಗೆ ಸೀಮಿತವಲ್ಲ. ಗುರು, ಗುರುತತ್ವ ಕಾಲಾತೀತ ವಿಶ್ವಮಾನ್ಯವೆಂದು ಗುರುವಿನ ಮಹತ್ವವನ್ನು ಗುರು ಪೂರ್ಣಿಮೆ ಆಚರಣೆ ಸಾರುತ್ತದೆ.
ಗುರು ದೇವರಾಗಬಹುದು ಆದರೆ ದೇವರು ಗುರುವಾಗಲು ಸಾಧ್ಯವಿಲ್ಲ. ಆದ್ದರಿಂದ ದೇವರಿಗಿಂತ ಗುರು ದೊಡ್ಡವನು. ನಮ್ಮ ಜೀವನದ ಎಲ್ಲಾ ಮಗ್ಗಲುಗಳಲ್ಲಿ ಅಥವಾ ಮುಖಗಳಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕಲು, ಸನ್ಮಾರ್ಗವನ್ನು ತೋರುವಾ, ನಮ್ಮ ಮನಸ್ಸಿಗೆ ಶಾಂತಿ ನೀಡುವ, ಸರಳ ಸಚ್ಚಾರಿತ್ರೆ ಸಂಪನ್ನನೇ ನೀಡುವ ಗುರು ಕೃಪೆಯ ಅರ್ಹತೆಯನ್ನು ಪಡೆಯಲು ಶಿಷ್ಯನು ಹೃದಯ ವೈಶಾಲತೆಯಿಂದ, ಸರಳ ಸಜ್ಜನಿಕೆ, ವಿನಯ ಶೀಲತೆಯಿಂದ ಇರಬೇಕು.
ಇದನ್ನೆ ದಾಸರೋರ್ವರು ಗುರುವಿನ ಗುಲಾಮನಾಗುವ ತನಕ ದೋರೆಯದೆನ್ನ ಮುಕುತಿ ಎಂದು ಹೇಳಿದ್ದಾರೆ. ಗುರು ಉಪದೇಶವಿಲ್ಲದೆ ಜ್ಞಾನ, ಯೋಗ, ಕ್ರೀಯೆ ಇವೇಲ್ಲವೂ ಉರಗ (ಹಾವು)ನ ಉಪವಾಸವಿದ್ದಂತೆ ‘ ಗುರುವೇ ಪರದೈವ’ ಎಂದು ಗುರುವನ್ನು ಹೋಗಳಿದ್ದಾರೆ. ಗುರು ಜ್ಞಾನಾಭಿವೃದ್ಧಿಗೆ ನಿಮಿತ್ತವಾದ ಮಹಾ ಮೂರ್ತಿಯಾಗಿದ್ದಾನೆ. ಯಾರಿಂದಲೇ ಆಗಲಿ ಹೆಚ್ಚಿನ ಮಾರ್ಗದರ್ಶನ, ಜ್ಞಾನ ಆಗುವುದು ಅವರೇಲ್ಲ ಗುರುಗಳೇ ಸರಿ.
ಗುರುಗಳಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಗುರುಗಳೆಂದು ವಿಂಗಡಿಸಬಹುದು. ಗುರು ಶಬ್ದದ ಅರ್ಥ ಪೂಜ್ಯನೀಯವಾಗಿದೆ. ಅಜ್ಞಾನ ನಿವಾರಿಸುವನೆಂದಾಗುವುದು. “ ಹರ ಮುನಿದರೆ ಗುರು ಕಾಯುವನಯ್ಯ “ ಎಂಬ ಶರಣರ ಮಾತಿನಲ್ಲಿ ಗುರುವಿನ ಮಹತ್ವ ವ್ಯಕ್ತವಾಗುತ್ತದೆ. ಪ್ರಾಂಜಲ ಮನಸ್ಸಿನಿಂದ ದಾಸೋಹ ರೂಪವಾಗಿ ಮಾತೃಭಾವದಿಂದ, ಧರ್ಮದಿಂದ, ನೀತಿಯಿಂದ ಕೂಡಿದ ವಿಧ್ಯೆಯನ್ನು ಶಿಷ್ಯನಿಗೆ ಧಾರೆ ಎರೆದು ನೀಡುವವನೇ ನಿಜವಾದ ಗುರು.
ಪ್ರತಿಯೋಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಬ್ಬ ಗುರುವನ್ನು ನಂಬಿ ಮನೋಮಂದಿರಲ್ಲಿ ಸ್ಥಾಪಿಸಿಕೊಂಡು ಬಂದಿರುವಂತಹ ಸತ್ಪರಂಪರೆ ಬಹು ಹಿಂದಿನಿಂದಲೂ ನಮ್ಮ ಸಂಸ್ಕøತಿಯಲ್ಲಿ ಬೆಳೆದು ಬಂದಿರುವುದನ್ನು ಕಾಣಬಹುದು. ಧಾರ್ಮಿಕ ಗುರುವಾಗಿರಬಹುದು ಅಥವಾ ವಿದ್ಯಾ ಗುರುವಾಗಿರಬಹುದು. ಗುರುವಿನ ಬಗ್ಗೆ ಅತೀವ ಅಭಿಮಾನವನ್ನು ಇಟ್ಟುಕೊಂಡಿರುತ್ತಾರೆ.
ಶಿವಪಥವನ್ನರಿವೋಡೆ ಗುರು ಪಥವೇ ಮೊದಲು ಎಂದು ಬಸವಣ್ಣನವರು ತಿಳಿಸಿದಂತೆ ನಿಜಗುಣ ಶಿವಯೋಗಿಗಳು ಕೂಡ ಶ್ರೀ ಗುರು ವಚನದಿಂದಧಿಕ ಸುಧೆಯುಂಟೇ?. ಗುರುವಿನ ವಿಚಾರಗಳು, ಉಪದೇಶಗಳು ಜಿರಂತನವಾಗಿರುತ್ತವೆ ಎಂದು ತಿಳಿಸಿದ್ದಾರೆ. ಅದರಂತೆ ಸಂತ ಶಿಶುವಿನಾಳ ಶರೀಫರು ತನ್ನ ಅರಿವು ನನಗೆ ತೋರುವ, ಪರಮಾನಂದವನ್ನು ಹೊಂದಿದ, ಪರಮಾರ್ಥ ವಿದ್ಯೆಯನ್ನು ಹೇಳುವ ಗುರು ದೋರಕಿದ ಎಂದು ತನ್ನ ಗುರು ಗೋವಿಂದ ಭಟ್ಟರನ್ನು ಹೆಮ್ಮೆಯಿಂದ ನೆನೆಯುತ್ತಾರೆ.
ಗುರುವಿನ ವಾಕ್ಯವೇ ವೇದವಾಕ್ಯವೆಂದು ತಿಳಿದು ನಡೆದಂತಹ ಶಿಷ್ಯ ಪರಂಪರೆ ಇತಿಹಾಸ ಪ್ರಸಿದ್ದರಾಗಿದ್ದಾರೆ. ಅವರಲ್ಲಿ ಕೃಷ್ಣ-ಅರ್ಜುನ, ದ್ರೋಣಾಚಾರ್ಯ – ಏಕಲವ್ಯ, ರಾಮಕೃಷ್ಣ ಪರಮಹಂಸ – ಸ್ವಾಮಿ ವಿವೇಕಾನಂದ, ಗುರುಗೋವಿಂದ ಭಟ್ಟ – ಶಿಶುವಿನಾಳ ಶರೀಫ ನಮ್ಮ ಭಾಗದ ದಿಗ್ಗಿ ಸಂಗಮನಾಥ – ಗೋಗಿ ಚಂದಾ ಹುಸೇನ್ ಹೀಗೆ ಮುಂತಾದವರನ್ನು ಹೆಸರಿಸಬಹುದು.
ಸ್ವಾಮಿ ವಿವೇಕಾನಂದರು “ ಮಾನವ ಈ ದೇಹದಲ್ಲಿ ಪೂರ್ಣನಾಗಬಲ್ಲ ಎಂಬುದನ್ನು ನನ್ನ ಗುರುವಿನ ಸಾನಿಧ್ಯದಲ್ಲಿ ಕಲಿತಿದ್ದೇನೆ. ಮತ್ತು ಪ್ರಪಂಚದಲ್ಲಿ ಎಲ್ಲಿಯಾದರೂ ನಾನು ಒಂದು ಸತ್ಯವನ್ನು ಹೇಳಿದ್ದರೆ, ಆಧ್ಯಾತ್ಮೀಕ ಭಾವವನ್ನು ಬೀರಿದ್ದರೆ ಅದು ನನ್ನ ಗುರುವಿನ ಪ್ರಭಾವ. ತಪ್ಪುಗಳು ಮಾತ್ರ ನನ್ನವು” ಎಂದು ನಿರ್ಮಲ ಮನಸ್ಸಿನಿಂದ ತನ್ನ ಗುರು ರಾಮಕೃಷ್ಣ ಪರಮಹಂಸರನ್ನು ಹೃದಯ ತುಂಬಿ ಸ್ಮರಿಸಿದ್ದಾರೆ.
ಆದರೆ ಇಂದು ಗುರುವಿನ ಮಹತ್ವ ಕ್ಷಣಿಸುತ್ತೀದೆ. ಗುರು ಶಿಷ್ಯರ ಸಂಬಂಧಗಳು ಹದಗೆಟ್ಟಿವೆ. ಪರಸ್ಪರರು ತಮ್ಮ ತಮ್ಮ ಜವ್ದಾರಿಗಳನ್ನು ಮರೆತು ಆರೋಪ ಪ್ರತ್ಯಾರೋಪಗಳಲ್ಲಿ ತೋಡಗಿದ್ದಾರೆ. ಮೋಸ ವಂಚನೆಗಳಲ್ಲಿ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲಿ ಗುರು ಶಿಷ್ಯರು ಪಾಲ್ಗೋಂಡಿರುವ ಅನೇಕ ಉದಾಹರಣೆಗಳು ಪ್ರಸ್ತುತ ದಿನಗಳಲ್ಲಿ ಕಾಣಬಹುದಾಗಿದೆ.
ಇದರಿಂದ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದೇನೆ ಇರಲಿ ಗುರುವನ್ನು ಹೆಮ್ಮೆ ಹಾಗೂ ಗೌರವದಿಂದ ವಿಶ್ವಾಸದಿಂದ ಕಾಣಬೇಕು. ನಮ್ಮ ದೇಶ ಗುರು ಶಿಷ್ಯ ಪರಂಪರೆಯಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅದನ್ನು ಉಳಿಸಬೇಕಾಗಿದೆ.
ಗುರವಿನಿಂದ ಮೂಡಿಬಂದ ಜ್ಞಾನಾಕ್ಷರಗಳು ಬದುಕನ್ನು ಎತ್ತರಿಸಲು ಹಾಗೂ ಉದಾತ್ತ ಬದುಕನ್ನು ಸಾಗಿಸಲು ಸಹಕಾರಿಯಾಗುತ್ತದೆ. ಗುರುವಿನಿಂದ ಪಡೆಯುವ ವಿಧ್ಯೆಯ ಮಹತಿ ಅಪಾರವಾಗಿದೆ. ಇದನ್ನು ತಿಳಿದು ಎಲ್ಲರೂ ಗುರುವಿನಲ್ಲಿ ಯತಾರ್ಥ ಶ್ರದ್ಧೆ ಮಾಡಿ ಸೋಪನ ಕಲ್ಯಾಣಕ್ಕಾಗಿ ನಡೆದರೆ ಲೋಕ ಶಾಂತಿ ಸಾಧಿಸುವಲ್ಲಿ ಪ್ರತಿಯೊಬ್ಬರೂ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ.
ಗುರು ಪೂರ್ಣಿಮೆಯ ದಿನ ಮಠ ಮಾನ್ಯಗಳಲ್ಲಿ, ಆಧ್ಯಾತ್ಮಿಕ ಕೇಂದ್ರಗಳಲ್ಲಿ, ಸಾರ್ವಜನಿಕ ವಲಯಗಳಲ್ಲಿ ಗುರು ಕಾಣಿಕೆ, ಗುರುಪೂಜೆ, ಪ್ರಾರ್ಥನೆಗಳು, ಗುರುವಿನ ಮಹಿಮೆ ಸಾರುವ ಪುರಾಣ ಪ್ರವಚನಗಳು, ವೇದಪಠಣಗಳು, ಉಪನ್ಯಾಸಗಳು ನಡೆಯುತ್ತವೆ. ಸಮಸ್ತ ಗುರುವೃಂದಕ್ಕೆ ಗುರು ಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು.
-ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು
ಬಾಪುಗೌಡ ದರ್ಶನಾಪುರ ಸ್ಮಾರಕ
ಮಹಿಳಾ ಪದವಿ ಕಾಲೇಜು
ಶಹಾಪೂರ ಮೊ. 9901559873.