ಧೈರ್ಯ ಮಾಡಿ ಬಿಜೆಪಿಗೆ ಬನ್ನಿ ಎಂದು ಮಾಲೀಕಯ್ಯ ಗುತ್ತೇದಾರ್ ಕರೆ ನೀಡಿದ್ಯಾರಿಗೆ?
-ಮಲ್ಲಿಕಾರ್ಜುನ ಮುದನೂರ್
ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲ್ಲೂಕಿ ಸ್ವಗ್ರಾಮ ಸ್ಟೇಷನ್ ಗಾಣಗಾಪುರದಲ್ಲಿ ಬೆಂಬಲಿಗರ ಸಭೆ ನಡೆಸಿದ ಮಾಲೀಕಯ್ಯ ಗುತ್ತೇದಾರ ಬಿಜೆಪಿ ಸೇರುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಸಭೆಯಲ್ಲಿ ಎದುರಾದ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿದ್ದಾರೆ. ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ನಂದು. ನಿಮ್ಮ ಸಹೋದರ ಚುನಾವಣೆಗೆ ನಿಂತಿದ್ದಾನೆ ಎಂದು ಬೆಂಬಲಿಸಿ ಎಂದು ಅಲ್ಪಸಂಖ್ಯಾತರಿಗೆ ಗುತ್ತೇದಾರ್ ಮನವಿ ಮಾಡಿದ್ದಾರೆ.
ಬಿಜೆಪಿ ಸೇರುವ ನಿರ್ಧಾರ ತಪ್ಪು ಅನ್ನೋದಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನೀವು ಯಾರನ್ನಾದರೂ ಚುನಾವಣೆಗೆ ನಿಲ್ಲಿಸಿ ನಾನು ಬೆಂಬಲಿಸುತ್ತೇನೆ. ಯಾಕೆಂದರೆ ಕಾಂಗ್ರೆಸ್ ಸೋಲಿಸಲು ನಾನು ಬಿಜೆಪಿ ಸೇರುವುದು ಅನಿವಾರ್ಯ ಎಂದಿದ್ದಾರೆ. ಕಲಬುರಗಿ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲಿಸಿ ನನ್ನ ಶಕ್ತಿ ತೋರಿಸಬೇಕಿದೆ. ಕಲಬುರಗಿ ಕಾಂಗ್ರೆಸ್ ಅಂದರೆ ಖರ್ಗೆ ಎನ್ನುವವರಿಗೆ ಗುತ್ತೇದಾರ್ ಎಂಬ ನಾಯಕ ಇರೋದನ್ನು ತೋರಿಸಬೇಕಿದೆ ಎಂದಿದ್ದಾರೆ. ಇದೇ ವೇಳೆ ಖರ್ಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಚಿಹ್ನೆಯಿಂದ ಗೆದ್ದು ತೋರಿಸಲಿ ಎಂದು ಸವಾಲೆಸೆದಿದ್ದಾರೆ.
ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸತ್ತಿರುವ ಅನೇಕ ಶಾಸಕರು ಕಮಲ ಪಡೆಯತ್ತ ಮುಖ ಮಾಡಿದ್ದಾರೆ. ಇಷ್ಟರಲ್ಲೇ ಕೆಲವು ನಾಯಕರು ಬಿಜೆಪಿ ಸೇರಲಿದ್ದಾರೆ. ಅವರೆಲ್ಲರನ್ನೂ ದೈರ್ಯವಾಗಿ ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸುತ್ತೇನೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದರು. ಮಾಲೀಕಯ್ಯ ಗುತ್ತೇದಾರ್ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ನಾಯಕರ ನಿದ್ದೆಗೆಡಿಸಿದೆ.
ಯಾದಗಿರಿ ಮತಕ್ಷೇತ್ರದ ಹಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ, ಗುರುಮಿಠ್ಕಲ್ ಕ್ಷೇತ್ರದ ಶಾಸಕ ಬಾಬುರಾವ್ ಚಿಂಚನಸೂರ್ ಅವರೂ ಸಹ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಹೈದರಾಬಾದ್ ಕರ್ನಾಟಕದ ಇತರೆ ಶಾಸಕರು, ಮುಖಂಡರಲ್ಲೂ ಸಹ ಒಳ ಬೇಗುದಿ ಇದ್ದೇಇದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಖರ್ಗೆ ವಿರುದ್ಧ ಕೆಂಡವಾಗಿರುವ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಬುಡಮೇಲು ಮಾಡುವ ಆಪರೇಷನ್ ಕಮಲಕ್ಕೆ ಕೈ ಹಾಕುತ್ತಾರೆಯೇ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ನಾಯಕರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡತೊಡಗಿದ್ದಾರೆ. ರಾಜೀನಾಮೆ ಕೊಡುತ್ತೇನೆ ಅಂದಾಗ ಖುದ್ದು ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಅವರೇ ಮತ್ತೊಮ್ಮೆ ವಿಚಾರ ಮಾಡಿ ಎಂದಿದ್ದರು. ಆದರೆ, ಕಲಬುರಗಿಯ ನಾಯಕರು ಮಾತ್ರ ಪ್ಲೆಸರ್ ಹಾಕಿ ನನ್ನನ್ನು ಉಚ್ಛಾಟನೆ ಮಾಡಿಸಿದ್ದಾರೆ. ನನ್ನನ್ನು ಸೋಲಿಸಲು ಖರ್ಗೆ ಶಪಥ ಮಾಡಿದ್ದಾರೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಗುತ್ತೇದಾರ್ ಕಿಡಿ ಕಾರುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಈಗಾಗಲೇ ಸೋತಿದ್ದಾರೆ ಎಂದಿರುವ ಗುತ್ತೇದಾರ್ ಕಾಂಗ್ರೆಸ್ಸಿನ ಪ್ರಭಾವಿ ನಾಯಕರಲ್ಲಿ ಸೋಲಿನ ಭೀತಿ ಸೃಷ್ಠಿಸಿ ಸ್ವಕ್ಷೇತ್ರದಲ್ಲಿ ಕಟ್ಟಿ ಹಾಕುವುದಂತೂ ಗ್ಯಾರಂಟಿ. ಖರ್ಗೆ ಅವರಂಥ ಖರ್ಗೆ ಅವರೇ ಸ್ವಕ್ಷೇತ್ರದ ಗೆಲುವಿಗಾಗಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾದಾಗ ಸಹಜವಾಗಿಯೇ ಕಾಂಗ್ರೆಸ್ ಈ ಭಾಗದಲ್ಲಿ ವೀಕ್ ಆಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.
ಮಲ್ಲಿಕಾರ್ಜುನ್ ಖರ್ಗೆ ಅವರೊಬ್ಬ ಅನುಭವಿ ರಾಜಕಾರಣಿ, ರಾಷ್ಟ್ರಮಟ್ಟದ ನಾಯಕರೂ ಹೌದು. ಹೀಗಾಗಿ, ಮಲ್ಲಿಕಾರ್ಜುನ್ ಖರ್ಗೆ ಅವರನ್ನಾಗಲಿ, ಪ್ರಿಯಾಂಕ ಖರ್ಗೆ ಅವರನ್ನಾಗಲಿ ಸೋಲಿಸುವುದು ಸುಲಭದ ಮಾತಲ್ಲ. ಗುತ್ತೇದಾರ್ , ಖರ್ಗೆ ವಿರುದ್ಧ ಗುಡುಗುತ್ತಿರುವುದೇ ಚುನಾವಣೆಯಲ್ಲಿ ಮಾಲೀಕಯ್ಯಗೆ ತಿರುಗುಬಾಣವಾದರೂ ಅಚ್ಚರಿ ಪಡಬೇಕಿಲ್ಲ. ಕಮಲಪಡೆ ಸೇರಿರುವ ಮಾಲೀಕಯ್ಯ ಗುತ್ತೇದಾರ್ ಗೆ ಸೋಲಿನ ರುಚಿ ತೋರಿಸಲು ಖರ್ಗೆ ಅವರೂ ಸಹ ಮೌನ ತಂತ್ರ ರೂಪಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಒಟ್ಟಾರೆಯಾಗಿ ಬಿಸಿಲನಾಡಿನಲ್ಲಿಗ ಬಿಸಿಲಿಗಿಂತಲೂ ರಾಜಕೀಯದೇ ಕಾವೇ ಹೆಚ್ಚಾಗಿದೆ. ಅದರಲ್ಲೂ ಮಾಲೀಕಯ್ಯ ವರ್ಸೆಸ್ ಖರ್ಗೆ ಜಟಾಪಟಿ ಜೋರಾಗಿದೆ. ರಾಜಕೀಯ ಚದುರಂಗದಾಟದಲ್ಲಿ ಯಾರ ಕೈ ಮೇಲಾಗಲಿದೆ. ಯಾರ ಮುಖ ಅರಳಲಿದೆ ಎಂಬ ಕನ್ನಡಿ ನೋಡಲು ಮೇ 15ರವರೆಗೆ ಕಾಯಲೇಬೇಕಿದೆ.