TP, ZP ಚುನಾವಣೆಗೆ ಈಗಿಂದಲೇ ಸನ್ನದ್ಧರಾಗಲು ಹನುಮೇಗೌಡ ಕರೆ
ಯಾದಗಿರಿ; ಮುಂಬರುವ ಜಿಲ್ಲಾ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಅಣಿಯಾಗುವಂತೆ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಕರೆ ನೀಡಿದರು.
ನಗರದ ಚಿತ್ತಾಪೂರ ರಸ್ತೆಯಲ್ಲಿನ ಸರ್ಕಾರಿ ಪದವಿ ಕಾಲೇಜು ಸಮೀಪದಲ್ಲಿ ನೂತನವಾಗಿ ಆರಂಭಗೊಂಡ ಜೆಡಿಎಸ್ ಜಿಲ್ಲಾ ಘಟಕದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿ ಪಕ್ಷದ ಸಂಘಟನೆ ಚುರುಕಾಗಿದ್ದು, ಜಿಲ್ಲೆಯಲ್ಲಿಯೂ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ಪಕ್ಷ ಸಂಘಟಿಸಬೇಕು, ಕಾರ್ಯಕರ್ತರ ಹಿತದೃಷ್ಟಿ ಹಾಗೂ ಜಿಲ್ಲೆಯ ಜನತೆಯ ಹಿತಕ್ಕಾಗಿ ನೂತನ ಕಾರ್ಯಾಲಯ ಆರಂಭಿಸಲಾಗಿದ್ದು, ಜಿಲ್ಲೆಯ ಜೆಡಿಎಸ್ ಇತಿಹಾಸದಲಿಲ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದರು. ಇನ್ನು ಮುಂದೆ ಕಾರ್ಯಕರ್ತರು ಜಿಲ್ಲಾ ಕಚೇರಿಯಲ್ಲಿ ಸೇರುವುದರ ಮೂಲಕ ಪಕ್ಷ ಸಂಘಟನೆಗೆ ತೊಗಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಜೆಡಿಎಸ್ ಜಿಲ್ಲಾ ಕಚೇರಿ ಉದ್ಘಾಟನೆ ನೆರವೇರಿಸಿದ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ ಮಾತನಾಡಿ ಪಕ್ಷ ಸಂಘಟನೆಗೆ ಜಿಲ್ಲಾ ಕೇಂದ್ರದಲ್ಲಿ ಸ್ವತಂತ್ರ ಕಚೇರಿ ಇಲ್ಲದೇ ಸಮಸ್ಯೆಯಾಗಿತ್ತು ಇದನ್ನು ಮನಗಂಡ ಹೈಕಮಾಂಡ್ ಜಿಲ್ಲಾ ಕೇಂದ್ರದಲ್ಲಿ ಕಚೇರಿ ಆರಂಭಿಸುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಶಿವಶಂಕರ ಮೋಟಗಿ, ನಗರಾಧ್ಯಕ್ಷ ವಿಶ್ವನಾಥ ಸಿರವಾರ, ಶರಣಪ್ಪ ಗುಳಗಿ, ನಾಗರತ್ನಾ ಅನಪೂರ, ಬಾಲಪ್ಪ ಚಿಕ್ಕಮೇಟಿ, ಎಂ.ಕೆ. ಬೀರನೂರು, ತಿಮ್ಮಯ್ಯ ಪುರ್ಲೆ ಇನ್ನಿತರರು ಮಾತನಾಡಿ ಪಕ್ಷ ಸಂಘಟನೆಗೆ ಜಿಲ್ಲಾ ಕೇಂದ್ರದಲ್ಲಿ ಕಚೇರಿ ಆರಂಭಗೊಂಡಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಾಜಶೇಖರ ದೊರೆ ಅನವಾರ, ಹಣಮಂತ್ರಾಯಗೌಡ ತೇಕರಾಳ, ದಂಡಪ್ಪಗೌಡ ಉಳ್ಳೆಸುಗೂರು, ರಫೀಕ್ ಉಳ್ಳೆಸುಗೂರು, ಮಲ್ಲಿಕಾರ್ಜುನ ಮೇಟಿ ಇಬ್ರಾಹಿಂಪುರ, ಅನ್ಸರ್ ಹೊಟೆಲ್, ಪ್ರಕಾಶ ಸ್ವಾಮಿ, ಮಹೇಶಗೌಡ ಬೀರನಕಲ್ ಸೇರಿದಂತೆ ಇನ್ನಿತರರು ಇದ್ದರು.