ಅಂಕಣಸಾಹಿತ್ಯ

ಸಾಹಿತ್ಯ ಲೋಕ ಪ್ರವೇಶಿಸಿದ ಜ್ಯೋತಿ ನಾಯ್ಕರ “ಬೆಳಕಿನ ಹನಿ”

ಸಾಹಿತ್ಯ ಲೋಕ ಪ್ರವೇಶಿಸಿದ ಜ್ಯೋತಿ ನಾಯ್ಕರ “ಬೆಳಕಿನ ಹನಿ”

ರಾಘವೇಂದ್ರ ಹಾರಣಗೇರಾ.

” ಎಲ್ಲಾ ಅನುಭವಗಳು ಕಾವ್ಯಕ್ಕೆ ವಸ್ತುವಾಗುವುದಿಲ್ಲ. ಯಾವುದು ಪ್ರಜ್ಞೆಯ ವಸ್ತುವಾಗುತ್ತದೆಯೋ, ನಮ್ಮ ಸಂವೇದನೆಯ ಒಂದಂಶವಾಗುತ್ತದೋ ಅದು ಕಾವ್ಯ ವಸ್ತುವಾಗುತ್ತದೆ. ಭವದ ಸೆಳೆತವಿಲ್ಲದ ಕಾವ್ಯ ಹುಟ್ಟದೆಂಬುದು ನಿಜ. ಆದರೆ ಅಷ್ಟೇ ನಿಜ ಇದರಿಂದ ಬಿಡುಗಡೆ ಪಡೆದು ದೂರ ನಿಂತು ಪರಿಭಾವಿಸುವ ಶಕ್ತಿ ಕಾವ್ಯ ಸೃಷ್ಟಿಯ ರಹಸ್ಯವೆಂಬುದು”.

ಕನ್ನಡದ ಪ್ರಮುಖ ಸಾಹಿತಿ ಪು.ತಿ.ನ ಅವರ ಈ ಚಿಂತನೆಯ ಸಾಲುಗಳು ಹೊಸ ತಲೆಮಾರಿನ ಬರಹಗಾರರಿಗೆ ತುಂಬಾ ಮಾರ್ಗದರ್ಶಿಯಾಗುತ್ತವೆ. – ಇತ್ತೀಚೆಗೆ ಸಮಾನ ಮನಸ್ಕ ಗೆಳೆಯ, ಶಿಕ್ಷಕ, ಯುವ ಕವಿ ಜ್ಯೋತಿ ನಾಯ್ಕ ಅವರ ಚೊಚ್ಚಲ ಹನಿಗವನ ಸಂಕಲನ “ಬೆಳಕ ಹನಿ” ಸಾಹಿತ್ಯ ಲೋಕವನ್ನು ಪ್ರವೇಶಿದ್ದು ಸಾಹಿತ್ಯ ಓದುಗ ಹಾಗೂ ಆಸಕ್ತನಾದ ನನಗೆ ತುಂಬಾ ಸಂತೋಷ ತಂದುಕೊಟ್ಟಿತು.

ಜ್ಯೋತಿ ನಾಯ್ಕ ಅವರು ಕಳೆದ 4,5 ವರ್ಷಗಳಿಂದ ಸ್ನೇಹಿತರು, ಸೌಮ್ಯ ಸ್ವಭಾವದ, ಸರಳ, ಸಹೃದಯಿಗಳಾದ ಅವರು ಸದಾ ಉತ್ಸಾಹಿಗಳು. ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಒಲವು ಇಟ್ಟುಕೊಂಡು ಶಿಕ್ಷಕ ವೃತ್ತಿಯೊಂದಿಗೆ ಸೃಜನಶೀಲ ಮನಸ್ಸಿನಿಂದ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಹಿತ್ಯದ ಪರಂಪರೆ, ಓದು, ಸಾಹಿತ್ಯ ಕ್ಷೇತ್ರದಲ್ಲಿನ ಹಲವು ಬೆಳವಣಿಗೆಗಳು, ವೈರುದ್ಯತೆಗಳು, ಅಸಹಿಷ್ಣುತೆಗಳು ಮುಂತಾದವು ಕುರಿತು ಬೇಟಿಯಾದಗೊಮ್ಮೆ ಚರ್ಚೆ ಮಾಡುತ್ತ ಹಂಸ ಕ್ಷೀರ ನ್ಯಾಯದಂತೆ ಅವುಗಳಲ್ಲಿನ ಮೌಲಿಕವಾದವುಗಳನ್ನು ಸ್ವಿಕರಿಸಿದ್ದೇವೆ.

ಮೂಲತಃ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ತಾಣವಾದ ಕೊಟ್ಟೂರು ತಾಲೂಕಿನ ಕೆ.ಬಿ. ತಾಂಡಾದ ಕೊಟ್ರ ನಾಯ್ಕ ಮತ್ತು ಚಂದ್ರಮ್ಮ ಸುಸಂಸ್ಕೃತ ದಂಪತಿಗಳ ಮಗನಾದ ಜ್ಯೋತಿ ನಾಯ್ಕ ಅವರು ಪ್ರಸ್ತುತವಾಗಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕುರಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಬದ್ದತೆ, ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಕ ವೃತ್ತಿಯ ಜೊತೆಗೆ ಯಾವದೇ ಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳದೆ ತಣ್ಣಗೆ ಸಾಹಿತ್ಯ ಬರಹ ಕೃಷಿ ಮಾಡುತ್ತ ಸಾಮಾಜಿಕ ಚಿಂತನೆಯಲ್ಲಿ ತೊಡಗಿರುವ ಅವರು ಭಾರತದ ಹಾಗೂ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಸಮುದಾಯಗಳಲ್ಲಿ ಒಂದಾದ ಲಂಬಾಣಿ ಬಂಜಾರ ಸಮುದಾಯದ ಸಂಸ್ಕೃತಿ ಅಧ್ಯಯನದಲ್ಲಿ ನಿರತರಾಗಿದ್ದಾರೆ.

ಈ ಬಂಜಾರ ಸಂಸ್ಕೃತಿಯ ಕುರಿತು ಅನೇಕ ಬರಹಗಳ ಮೂಲಕ ಆ ಸಮುದಾಯದ ಜನರ ಬದುಕು, ಭಾಷೆ, ಸಂಸ್ಕೃತಿ, ಸ್ಥಿತ್ಯಂತರಗಳು, ಸಮಸ್ಯೆಗಳು, ಬದಲಾವಣೆ, ಅಭಿವೃದ್ಧಿ ಮುಂತಾದವುಗಳ ಮೇಲೆ ಬೆಳಕು ಚೆಲ್ಲಲು ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ.

ಸಾಹಿತ್ಯದ ಓದು, ಬರಹದಲ್ಲಿ ಒಲವು, ಅದಮ್ಯವಾದ ಉತ್ಸಾಹ ಹೊಂದಿರುವ ಜ್ಯೋತಿ ನಾಯ್ಕ ಅವರು ಸಾಹಿತ್ಯಕ್ಕೆ ಏನಾದರೂ ಹೊಸತನವನ್ನು ನೀಡಬೇಕೆಂಬ ತುಡಿತ ಇದೆ. ಇದರ ಫಲವೇ “ಬೆಳಕ ಹನಿ” ಬೆಳಕು ಕಂಡಿದೆ.

“ಬೆಳಕ ಹನಿ” ಕೃತಿಯಲ್ಲಿನ ಹನಿಗವನಗಳು ಓದುತ್ತಾ ಹೋದಂತೆಲ್ಲಾ ಓದುಗನಿಗೆ ಖುಷಿ ಕೊಡುತ್ತವೆ, ಚಿಂತನೆಗೆ ಹಚ್ಚುತ್ತವೆ. ಸರಳ, ಸಹಜವಾಗಿ, ಜಾಣ್ಮೆಯಿಂದ ಮೂಡಿಬಂದಿರುವ ‘ ಸಂಕಷ್ಟ’ ವಿಶ್ವಾಸ, ವ್ಯತ್ಯಾಸ, ಕ(ಖ)ರೆ, ಮೋಸ ಮುಂತಾದ ಹನಿಗವಿತೆಗಳು ಮನುಷ್ಯ ಸಮಾಜದ ವಿವಿಧ ಮುಖಗಳನ್ನು ತಿಳಿಸುತ್ತವೆ.

ಶರೀರ, ಸಲಹೆ, ಹೆಣ್ಣು, ತಾಳ್ಮೆ, ಜೀವನ, ಮಾತೃಭಾಷೆ, ದುರಂತ, ವಂಚನೆ, ಕಾವ್ಯ, ಬಣ್ಣದ ಬದುಕು, ಧ್ಯೆಯ, ಸಹನೆ ಇತರ ಅನೇಕ ಹನಿಗವನಗಳು ಉತ್ತಮ ಕವಿಯಾಗಿ ಜ್ಯೋತಿ ನಾಯ್ಕ ಅವರು ಬೆಳೆಯಬಲ್ಲರು ಎಂಬುದಕ್ಕೆ ಸಾಕ್ಷಿ ಒದಗಿಸುತ್ತವೆ.

ಪ್ರೀತಿ, ಪ್ರೇಮ, ವಿರಹ, ರೈತನ, ದುಡಿಯುವ ವರ್ಗದವರ ಆತಂಕ, ನಾಡು- ನುಡಿಯ ಪ್ರೇಮ, ಸಮುದಾಯದ ಕಾಳಜಿ, ಮನುಷ್ಯನ ಮುಖವಾಡಗಳು, ಸಮಾಜದ ವೈರುದ್ಯತೆಗಳು, ಮೋಸ, ವಂಚನೆ, ಭ್ರಷ್ಟಾಚಾರ ಮುಂತಾದವುಗಳು ಹನಿಗವನ ಸಂಕಲನದಲ್ಲಿ ಚೆನ್ನಾಗಿ ಮೂಡಿಬಂದಿವೆ.

ಕೃತಿಯಲ್ಲಿ ಜೀವನ ಪ್ರೀತಿ, ಅನುಭವಗಳು ಹುಡುಕಾಟ, ಸಾಮಾಜಿಕ ಸ್ವಾಸ್ಥ್ಯ, ಕಾಳಜಿ, ವ್ಯವಸ್ಥೆಯೊಳಗಿನ ಲೋಪಗಳು ಇತ್ಯಾದಿ ಅಂಶಗಳನ್ನು ಕಾಣಬಹುದಾಗಿದೆ. ಸಾಹಿತ್ಯದ ವಿಸ್ತಾರವಾದ, ಶ್ರದ್ಧೆಯ ಓದು ಪ್ರತಿಭೆಯನ್ನು ಅರಳಿಸುತ್ತದೆ. ಬರಹ ಗಟ್ಟಿಯಾಗಿಸುತ್ತದೆ, ಮೌಲಿಕತೆಯನ್ನು ಪಡೆದುಕೊಳ್ಳುತ್ತದೆ.

ಬರಹ ಮತ್ತು ಬರಹದ ಭಾಷೆಯ ಮೇಲೆ ಹಿಡಿತ ಬರುತ್ತದೆ. ಬರಹಗಾರನ ಭಾವದ ಅರಿವು ಹೆಚ್ಚಾಗಿ ಭಾವ ಬಂಧುರದ ಗಟ್ಟಿಕಾಳುಗಳಾಗುತ್ತವೆ. ಹೃದಯದೊಂದಿಗೆ ಒಡಮಿಡಿಯುತ್ತವೆ. ಈ ಹಿನ್ನೆಲೆಯಲ್ಲಿ ಕವಿ ಜ್ಯೋತಿ ನಾಯ್ಕ ಅವರು ಸಾಹಿತ್ಯದ ವ್ಯವಸಾಯ ಮಾಡುತ್ತ ವಿಶಿಷ್ಠವಾದ, ಮೌಲಿಕವಾದ ಸಾಹಿತ್ಯ ಕೃತಿಗಳನ್ನು ನೀಡಲಿ ಎಂದು ಆಶಿಸುವೆ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ. ಮೊ. ನಂ 9901559873.

Related Articles

Leave a Reply

Your email address will not be published. Required fields are marked *

Back to top button