ಸಮಸ್ಯೆಗಳ ಸುಳಿಯಲ್ಲಿ ಬದುಕು ಸವೆಸುತ್ತಿರುವ ಬುಡ್ಗ ಜಂಗಮ ಮಹಿಳೆಯರು
ನಮ್ಮ ದೇಶದಲ್ಲಿ ನಿರ್ಲಕ್ಷಕ್ಕೆ ಒಳಗಾದ ಹಲವಾರು ಅಲೆಮಾರಿ ಸಮುದಾಯಗಳಲ್ಲಿ ಬುಡ್ಗಜಂಗಮ್ ಅಲೆಮಾರಿ ಸಮುದಾಯವು ಒಂದಾಗಿದೆ. ಈ ಅಲಕ್ಷಿತ ಬುಡ್ಗಜಂಗಮ್ ಸಮುದಾಯದವರನ್ನು ಬೈರಾಗಿಗಳೆಂದು, ಹಗಲುವೇಷಗಾರರೆಂದು, ಬಹುರೂಪಿಗಳೆಂದು ಮುಂತಾದ ಹೆಸರುಗಳಿಂದ ಕರಯಲಾಗುತ್ತದೆ.
ಅಲೆಮಾರಿಗಳಾಗಿ ಊರೂರು ಅಲೆದಾಡುತ್ತಾ ಬಂದಿರುವ ಬುಡ್ಗಜಂಗಮರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರÀಗಳಲ್ಲಿ ಬಹಳಷ್ಟು ಹಿಂದುಳಿದ ಈ ಸಮುದಾಯಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಸೇರಿಸಿದೆ.
ಸುಮಾರು 40 ವರ್ಷಗಳಿಂದೆ ಬದುಕನ್ನು ಕಟ್ಟಿಕೊಳ್ಳಲು ಆಂದ್ರಪ್ರದೇಶದಿಂದ ಊರೂರು ಅಲೆಯುತ್ತಾ ಯಾದಗಿರಿ ಜಿಲ್ಲೆಯ ಶಹಾಪುರ ನಗರಕ್ಕೆ ಬಂದ ಬುಡ್ಗಜಂಗಮರ ಹಲವು ಕುಟುಂಬಗಳು ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ಡೀಪೋದ ಹಿಂದುಗಡೆ ಸರ್ಕಾರದಿಂದ ಪಡೆದ ನೀವೇಶನದಲ್ಲಿ ಗುಡಿಸಲು ಮತ್ತು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.
ವಿಶಿಷ್ಟ ಸಂಪ್ರದಾಯ, ನಂಬಿಕೆಗಳು, ಆಚರಣೆಗಳು, ವಿಶಿಷ್ಟ ಭಾಷೆ, ಮದುವೆ, ಬಹುರೂಪಿ ಕಲೆ ಮುಂತಾದ ತಮ್ಮದೇಯಾದ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ಈ ಜನಾಂಗ ಇಂದಿಗೂ ಅದನ್ನು ಉಳಿಸಿಕೊಂಡು ಬಂದಿದೆ.
ಆದರೆ ಬುಡ್ಗಜಂಗಮ್ ಸಮುದಾಯದ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು, ಪೋಷಿಸಿಕೊಂಡು ಬಂದಿರುವ ಮಹಿಳೆಯರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ.
ಕುಟುಂಬದ ಗಂಡ ಮತ್ತು ಮಕ್ಕಳಿಗಾಗಿ, ಸದಸ್ಯರಿಗಾಗಿ ಬಸ್ಸ್ ನಿಲ್ದಾಣ, ಬಾಜಾರುಗಳಲ್ಲಿ, ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ, ಚಿಂದಿ ಆಯುವ, ಮದುವೆ ಮುಂಜಿಗಳಲ್ಲಿ ಮುಸರಿ, ಬಾಂಡೆ ತೊಳೆಯುವ ಹಾಗೂ ಇಡೀ ಕುಟುಂಬದ ಹೊರೆ ಹೊತ್ತು ನಲಗುತ್ತಿರುವ, ಪ್ರತಿನಿತ್ಯ ಕುಡಿದು ಬಂದ ಗಂಡನಿಂದ ದೈಹಿಕ, ಮಾನಸಿಕ ಹೊಡೆತಗಳಿಂದ ನಿರಂತರ ಅವಮಾನ, ಕಳಂಕ, ಹಿಂಸೆಯನ್ನು ಅನುಭವಿಸುತ್ತಿರುವ ಬುಡ್ಗ ಜನಾಂಗದ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ.
ಅಸಮಾನತೆ, ಅನಾರೋಗ್ಯ, ಅಪೌಷ್ಠಿಕತೆ, ಅನಕ್ಷರತೆ, ಅನ್ಯಾಯ, ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹ, ವಿಧವಾ ಸಮಸ್ಯೆ, ಭಿಕ್ಷಾಟನೆ ಮುಂತಾದ ಸಮಸ್ಯೆಗಳಲ್ಲಿ ಆತಂತ್ರದ ಬದುಕು ಸಾಗಿಸುತ್ತಿದ್ದಾರೆ.
ಬುಡ್ಗ ಜಂಗಮ ಸಮುದಾಯದ ಮಹಿಳೆಯರ ಮೇಲೆ ಪುರುಷರ ಸಂಪೂರ್ಣ ಹಿಡಿತ ಇರುವುದರಿಂದ ಈ ಮಹಿಳೆಯರು ನಿರಂತರ ಶೋಷಣೆ ಅನುಭವಿಸುತ್ತಿದ್ದಾರೆ. ಜೀವನ ಪರ್ಯಂತ ದುಡಿದರೂ ಆ ದುಡಿಮೆಗೆ ಮೂರು ಕಾಸಿನ ಬೆಲೇ ಸಿಗದ, ಎಷ್ಟೇ ದುಡಿದರೂ ಹೊಟ್ಟೆ ತುಂಬಾ ಉಣ್ಣಲಾಗದ, ಕೂಲಿ ನಾಲಿ ಮಾಡಿ, ಬಿಕ್ಷೆ ಬೇಡಿ ಬದುಕುವ ತಳಮಟ್ಟದ, ಕೆಳವರ್ಗದ ಇಂತಹ ಬುಡ್ಗ ಜಂಗಮರಂತಹ ಹಲವಾರು ಸಮುದಾಯಗಳ ಮಹಿಳೆಯರನ್ನು ಬಿಟ್ಟು ಮಹಿಳಾ ಅಭಿವೃದ್ಧಿ ಕುರಿತು ವ್ಯಾಖ್ಯಾನ ಮಾಡಿದರೆ, ಅದು ಅಪೂರ್ಣವಾಗುತ್ತದೆ ಎಂದು ಹೇಳಬಹುದು.
ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ, ದೂಷಣೆಗೆ ಗುರಿಯಾಗುವ ಬುಡ್ಗ ಜಂಗಮ ಮಹಿಳೆಯರ ನೋವಿನ ಮತ್ತು ಸಂಕಟದ ಕೂಗೂ ಆಕೆಯ ಕುಟುಂಬದ ಒಳಗಡೆ ಇರುವಂತಹ ಅಸಮಾನವಾದ ಸಂಬಂಧಗಳ ಪ್ರತಿಬಿಂಬ ಎಂದು ಹೇಳಬಹುದು.
ಈ ಮಹಿಳಾ ಲೋಕದಲ್ಲಿ ಹಾಡುಗಳಿವೆ, ಕತೆಗಳಿವೆ, ಮಹಾಕಾವ್ಯಗಳಿವೆ ಜೊತೆಗೆ ಹಸಿವು, ಕೀಳಿರಿಮೆ, ಹಿಂಜರಿಕೆ, ಬಡತನ, ನಿರುದ್ಯೋಗ, ಬಿಕ್ಷಾಟನೆ, ಶೋಷಣೆ, ಹಿಂಸೆಗಳಿವೆ ಎಂಬುದನ್ನು ನಾಗರಿಕ ಸಮಾಜ ತಿಳಿದುಕೊಳ್ಳಬೇಕಾಗಿದೆ. ಪುರುಷಾಧಿಕಾರದ ಹಿಂಸೆಯನ್ನು ನಿರಂತರವಾಗಿ ಈ ಮಹಿಳೆಯರು ಅನುಭವಿಸುತ್ತಿದ್ದಾರೆ.
ಬುಡ್ಗ ಜಂಗಮರ ಕುಟುಂಬಗಳಲ್ಲಿ ಮಹಿಳೆಯರು ಮೊದಲು ಹಗಲುವೇಷ ಕಲೆಯನ್ನು ಪ್ರಸ್ತುತಪಡಿಸುತ್ತಾ , ಊರೂರು ತಿರುಗುತ್ತಾ, ಜಾನಪದ ಗೀತೆ, ಕಥನಗೀತೆಗಳು, ರಾಮಾಯಣ, ಮಹಾಭಾರತ, ಬುರ್ರ ಕಥೆಗಳನ್ನೆಳುತ್ತಾ, ನಾಟಕವಾಡುತ್ತಾ ತಮ್ಮ ಕುಟುಂಬದ ಯಜಮಾನರಿಗೆ ಸಹಾಯ ಸಹಕಾರ ನೀಡುತ್ತಾ ಅವುಗಳಿಂದ ಜನರು ನೀಡುವ ಧವಸ ಧಾನ್ಯಗಳ ಮೂಲಕ ಜೀವನ ನಡೆಸುತ್ತಿದ್ದರು.
ಟಿವಿ, ಸಿನಿಮಾ, ನಾಟಕ, ಮಾಧ್ಯಮಗಳ ಭರಾಟೆಗಳ ನಂತರ ಇವರ ಹಗಲುವೇಷಗಾರಿಕೆಯ ಬಹುರೂಪಿಯ ಕಲೆಗೆ ಮಹತ್ವ ಕಡಿಮೆಯಾಯಿತು. ಬದುಕಿಗಾಗಿ, ಹೊಟ್ಟೆಪಾಡಿಗಾಗಿ, ಭಿಕ್ಷೆ ಬೇಡಲು, ಚಿಂದಿ ಹಾಯಲು, ಜಾತ್ರೆಗಳಲ್ಲಿ ದೇವರ ಪೋಟೊಗಳನ್ನು, ವಿವಿಧ ಮಕ್ಕಳ ಆಟಿಕೆ ಸಾಮಾನುಗಳನ್ನು ಮತ್ತು ವಸ್ತುಗಳನ್ನು ಮಾರಾಟ ಮಾಡುವುದು, ಮದುವೆ ಮುಂಜಿಗಳಲ್ಲಿ ಮುಸರಿ ಬಾಂಡೆಗಳನ್ನು ತೊಳೆಯುವುದು ಪ್ರಾರಂಭಿಸಿದರು.
ಇವುಗಳಿಂದ ಬರುವ ಅಲ್ಪ ಸ್ವಲ್ಪ ಆದಾಯದಲ್ಲಿ ಬದುಕು ಸಾಗಿಸುತ್ತಿದ್ದೇವೆ ಎಂದು ಈ ಜನಾಂಗದ ಮಹಿಳೆ ಅನುಸೂಯಾಬಾಯಿ ತಮ್ಮ ಬದುಕಿನ ವೃತ್ತಾಂತವನ್ನು ತಿಳಿಸುತ್ತಾಳೆ.
ಗಂಡುಮಕ್ಕಳು ದುಡಿಯುವುದು ಬಹಳ ಕಡಿಮೆ ನಾವು ದುಡಿದು ತಂದುದರಲ್ಲಿಯೇ ತಿಂದು ನಮ್ಮಿಂದಲೆ ಹಣ ತೆಗೆದುಕೊಂಡು ಸಂಜೆ ಕುಡಿದು ಬಂದು ಜಗಳವಾಡುತ್ತಾರೆ. ಅವರಿಂದ ಪ್ರತಿನಿತ್ಯ ಹೊಡೆತ, ಬಡಿತ ತಿನ್ನುವುದು ತಪ್ಪುವುದಿಲ್ಲ. ನಮ್ಮ ಜನಾಂಗದಲ್ಲಿ ಇದು ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ ಎಂದು ಶಾಂತಮ್ಮ ನೋವಿನಿಂದ ಹೇಳುತ್ತಾಳೆ. ಈ ಜನಾಂಗದಲ್ಲಿ ಇಂದಿಗೂ ಬಹುಪತ್ನಿತ್ವ, ಬಾಲ್ಯವಿವಾಹ ಪದ್ದತಿ ಇದೇ ಎಂದು ಹೆಳಲಾಗುತ್ತದೆ.
ಹಲವಾರು ಜನ ವಿಧವೆಯರಿಗೆ ಮಾಶಾಸನ ಸೌಲಭ್ಯ ದೊರೆತಿಲ್ಲ. ಮತ್ತು ಹಲವಾರು ಜನ ತಮ್ಮ ಪತಿ ತಮ್ಮನ್ನು ಬಿಟ್ಟು ಮತ್ತೊಂದು ಮದುವೆ ಮಾಡಿಕೊಂಡು ಬೇರೆ ಬೇರೆ ಕಡೆ ವಾಸಮಾಡುತ್ತಿದ್ದಾರೆ. ಕೂಲಿ ನಾಲಿ ಮಾಡುತ್ತಾ ಮಕ್ಕಳನ್ನು ಸಾಕಿ ಬೆಳೆಸಿದ್ದೇವೆ ಎಂದು ಗೃಹಣಿಯೊಬ್ಬಳು ಮನದಾಳದ ನೋವನ್ನು ತೋಡಿಕೊಂಡಳು.
ಹಲವಾರು ಭಾರಿ ಉಪವಾಸ, ವನವಾಸ ಬಿದ್ದು ಬದುಕಿದ್ದೇವೆ. ಈಗೀಗ ಸರಕಾರ ನಮಗೆ ಸ್ವಲ್ಪ ಸಹಾಯ ಸಹಕಾರ ಮಾಡಿ ಅನೇಕ ಸೌಕರ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರಿಂದ ನಮ್ಮ ಬದುಕು ಉಸಿರಾಡುವಂತಾಗಿದೆ. ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತೆ ಬುಡ್ಗ ಜಂಗಮ ಸಮುದಾಯದ ಜಾನಪದ ಕಲಾವಿದೆ ಲಕ್ಷ್ಮಿಬಾಯಿ ರೇವಲ್ ಅಭಿಪ್ರಾಯ ವ್ಯಕ್ತಪಡಿಸುತ್ತಾಳೆ.
ಪುರುಷರ ಅಧಿಕಾರ ಹಾಗೂ ಅವರ ಪ್ರಾಬಲ್ಯದಿಂದ ಅಕ್ಷರ ದೊರಕಿಸಿಕೊಂಡು ಅಜ್ಞಾನದಿಂದ ಹೊರಬರಲು ಈ ಸಮುದಾಯದ ಮಹಿಳೆಯರಿಗೆ ಇಂದಿಗೂ ಸಾಧ್ಯವಾಗಿಲ್ಲ. ಇದರಿಂದ ಈ ಮಹಿಳೆಯರು ಸಾಮಾಜಿಕ ಶೈಕ್ಷಣಿಕ ಹಕ್ಕುಗಳಿಂದ, ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಕಳೆದ 4-5 ವರ್ಷಗಳಿಂದ ಹೆಣ್ಣು ಮಕ್ಕಳು ಸಾಲಿ ಕಲ್ಯಾಕ ಹೊಗುತ್ತಿದ್ದಾರೆ. ಅವರ ಬದುಕು ನಮ್ಮದಾದಂಗ ಆಗಬಾರದು. ಚೆಂದ ಓದಿ, ನೌಕರಿ ಮಾಡಿ ಚಂದ ಬದುಕು ಮಾಡಬೇಕೆಂಬ ಆಸೆ ನಮ್ಮದಾಗಿದೆ ಎಂದು ಗುಂಡಮ್ಮ ಆಶಾಭಾವನೆ ವ್ಯಕ್ತಪಡಿಸುತ್ತಾಳೆ.
ಈಗಲೂ ಸಹ ಈ ಜನಾಂಗದ ಚಿಕ್ಕ ಹೆಣ್ಣು ಮಕ್ಕಳು ಪಟ್ಟಣದ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವುದು, ಚಿಂದಿ ಹಾಯುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಬಹಳಷ್ಟು ನಿರ್ಲಕ್ಷಕ್ಕೆ ಒಳಗಾಗಿರುವ ಮತ್ತು ಹಲವಾರು ಶೋಷಣೆ, ಅಸಮಾನತೆ, ದೌರ್ಜನ್ಯ, ಬಿಕ್ಷಾಟನೆ, ಬಾಲ್ಯವಿವಾಹ ಮುಂತಾದ ಸಮಸ್ಯೆಗಳಲ್ಲಿ, ತಲ್ಲಣಗಳಲ್ಲಿ ಬದುಕು ಸವೇಸುತ್ತಿರುವ ಇಂತಹ ಅಲಕ್ಷಿತ ಸಮುದಾಯಗಳ ಮಹಿಳೆಯರ ಪರಿಸ್ಥಿತಿ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಈ ಜನಾಂಗದ ಮಹಿಳೆಯರ ಕುರಿತು ವಿಶ್ವವಿದ್ಯಾಲಯಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಶ್ರಮಿಸಬೇಕು.
ಸ್ತ್ರೀಯರ ಮೇಲೆ ಪುರುಷರ ಸಂಪೂರ್ಣ ಹಿಡಿತ ಇರುವುದು ಅಷ್ಟೇ ಅಲ್ಲದೆ ಸ್ತ್ರೀ ಆತನ ಸಂತತಿಯನ್ನು ಮುಂದುವರೆಸುವಳು ಅಷ್ಟೇ ಎಂಬುದಾಗಿದೆ. ಮಾನವ ಸಂಬಂಧಗಳು ಹಾಗೂ ಮೌಲ್ಯಗಳು ಕ್ಷಿಣಿಸುತ್ತಿರುವುದರಿಂದ ಮಹಿಳೆಯರ ವಿರುದ್ಧ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂಬುದನ್ನು ಸಮಾಜ ವಿಜ್ಞಾನಿಗಳು, ಸರ್ಕಾರ ಜೊತೆಜೊತೆಯಾಗಿ ಚಿಂತನ-ಮಂಥನ ನಡೆಸುವ ಅಗತ್ಯವಿದೆ.
– ರಾಘವೇಂದ್ರ ಹಾರಣಗೇರಾ.