ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಖ್ಯಾತ ಸಾಹಿತಿಯ ಪುತ್ರನ ಪ್ರೇಮ ವಿವಾಹ!
ಚಿತ್ರದುರ್ಗ : ಖ್ಯಾತ ಸಾಹಿತಿ, ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರ ಕೊನೆಯ ಪುತ್ರ , ಉಪನ್ಯಾಸಕ ಪ್ರವರ, ಹೊಸದುರ್ಗದ ಅಂಬಿಕಾ ಜತೆ ಪ್ರೇಮ ವಿವಾಹಕ್ಕೆ ಅಣಿಯಾಗಿದ್ದಾರೆ. ಜೂನ್ 5 ರಂದು ಮುರುಘಾಮಠದಲ್ಲಿ ನಡೆಯಲಿರುವ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಸರಳ ವಿವಾಹ ಆಗಲಿದ್ದಾರೆ. ಅಪ್ಪನ ಹಾದಿಯನ್ನೇ ತುಳಿದಿರುವ ಪ್ರವರ ಪಂಚಾಂಗದ ಮೊರೆ ಹೋಗದೆ ಪ್ರಗತಿಪರ ವಿಚಾರಧಾರೆಗಳನ್ನು ಮೈಗೊಂಡಿಸಿಕೊಂಡಿದ್ದಾರೆಂಬುದು ಸಾಬೀತಾಗಿದೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಸುದ್ದಿಗೋಷ್ಠಿ ನಡೆಸಿ ಮೂರನೇ ಪುತ್ರ ಪ್ರವರ ಉಪನ್ಯಾಸಕ ವೃತ್ತಿಯಲ್ಲಿದ್ದು ಪ್ರಗತಿಪರ ಆಲೋಚನೆ ಹೊಂದಿದ್ದು ಉತ್ತಮ ಬರವಣಿಗೆಯಲ್ಲಿ ತೊಡಗಿದ್ದಾನೆ. ಅಷ್ಟೇ ಅಲ್ಲದೆ ಫೋಟೋಗ್ರಫಿ ಮೂಲಕ ಕಲಾಲೋಕದಲ್ಲೂ ತನ್ನದೇ ಛಾಪು ಮೂಡಿಸಿದ್ದಾನೆ. ಮಗ ಪ್ರವರ ಪ್ರೀತಿಸಿ ಅಂತರ್ಜಾತಿ ವಿವಾಹ ಆಗುತ್ತಿರುವುದು ಖುಷಿ ತಂದಿದೆ. ಕೊನೆಯ ಪುತ್ರನ ವಿವಾಹ ಅದ್ಧೂರಿಯಾಗಿ ನೆರವೇರಿಸಬೇಕೆಂಬುದು ನನ್ನ ಪತ್ನಿಯ ಆಶಯ ಆಗಿತ್ತು. ಆದರೆ, ಪುತ್ರ ಪ್ರವರ ಹಾಗೂ ನಮ್ಮ ಕುಟುಂಬದವರೆಲ್ಲಾ ಸೇರಿ ಮುರುಘಾಮಠದಲ್ಲಿ ಸರಳ ವಿವಾಹ ಮಾಡಲು ನಿರ್ಧರಿಸಿದ್ದೇವೆ. ಮಂತ್ರ ಮಾಂಗಲ್ಯದಂತೆಯೇ ಮುರುಘಾಮಠದಲ್ಲಿ ಪ್ರತಿ ತಿಂಗಳ ಐದನೇ ತಾರೀಖು ವಚನ ಮಾಂಗಲ್ಯ ನಡೆಯುತ್ತಿದೆ. ಅದೇ ಸರಳ ಮಹೋತ್ಸವದಲ್ಲಿ ಪ್ರವರ-ಅಂಬಿಕಾ ನವದಾಂಪತ್ಯಕ್ಕೆ ಪಾದಾರ್ಪಣೆ ಮಾಡಲಿದ್ದಾನೆ ಎಂದರು.
ನಾನು ಸಹ ರಾಹು ಕಾಲದಲ್ಲಿ ಮದುವೆ ಆದವನು. ಮದುವೆಯಂಥ ಕಾರ್ಯಗಳಿಗಾಗಿ ದುಂದು ವೆಚ್ಚ ಮಾಡುವುದು ಆರ್ಥಿಕ ಭಯೋತ್ಪಾದನೆ ಆಗುತ್ತದೆ. ನಮ್ಮ ಕುಟುಂಬ ಮೌಢ್ಯ, ಕಂದಾಚಾರದ ವಿರುದ್ಧ ಹೋರಾಡುತ್ತಲೇ ಬಂದಿದೆ. ಜಾತಿ, ಧರ್ಮ ಬದಿಗೊತ್ತಿ ಹೆಜ್ಜೆ ಹಾಕುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವುದು, ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಕುಂ.ವೀರಭದ್ರಪ್ಪ ಅಭಿಪ್ರಾಯ ಪಟ್ಟರು.
ಜೈ ಭಜರಂಗ ಬಲಿ ಕೃತಿ ಲೋಕಾರ್ಪಣೆ
ಮುರುಘಾಮಠದಲ್ಲಿ ಜೂನ್ 5 ರ ಸಂಜೆ ಬಹು ನಿರೀಕ್ಷಿತ ಕೃತಿ ‘ಜೈ ಭಜರಂಗ ಬಲಿ’ ಬಿಡುಗಡೆ ಆಗಲಿದೆ. ಸತ್ಯವನ್ನು ಮರ್ಕಟದ ಮೂಲಕ ಹೇಳಿದ ಕಾದಂಬರಿ ಇದಾಗಿದ್ದು ವಿಡಂಬನೆ, ಹಾಸ್ಯ, ವಾಸ್ತವ ಸಂಗತಿಗಳನ್ನೊಳಗೊಂಡಿದೆ. ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದ್ದಾರೆ. ಸಮಾಜ ಸೇವಕ ಶೇಷಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.