ಕಾವ್ಯ
‘ಹಿಂದಣದ ಬೆಳಕು’ ಬಡಿಗೇರ ರಚಿತ ಕಾವ್ಯ
ಹಿಂದಣದ ಬೆಳಕು
ನಡೆಯುವ ದಾರಿಯಲ್ಲಿ ಹೂವು ಹಣ್ಣಿತ್ತು
ದಾಹ ತೀರಿಸಲು ಹಳ್ಳದ ನೀರಿತ್ತು
ದಣಿವ ತಣಿಸಲು ಮರದ ನೆರಳಿತ್ತು
ಎಲ್ಲವೂ ಮರೆಯಾಗಿ ಹೋದವು
ಊರ ತೇರು ನೋಡಲು ಅಪ್ಪನ ಹೆಗಲಿತ್ತು
ಬಿಕ್ಕಳಿಸಿ ಅಳಲು ಅವ್ವನ ಮಡಿಲಿತ್ತು
ಆಟವಾಡಲು ಹುಡಿ ಮಣ್ಣಿನ ಅಂಗಳವಿತ್ತು
ಅವೆಲ್ಲವೂ ಮರೆಯಾಗಿ ಹೋದವು
ಶಾಲೆಯಲ್ಲಿ ಗುರುಗಳ ಭಯವಿತ್ತು
ಹಣ ಕದಿಯಲು ಅಜ್ಜನ ಜೇಬಿತ್ತು
ರಾತ್ರಿಯಲಿ ಕೇಳಲು ಅಜ್ಜಿಯ ಕಥೆಯಿತ್ತು
ಅವೆಲ್ಲವೂ ನೆನಪಿಗೆ ಉಳಿದವು
ಊರ ಜಾತ್ರೆಗೆ ಹಣ ಕೂಡಿಡುವ ಕಾಲವಿತ್ತು
ಬಾಲ್ಯದ ಗೆಳತಿಗೆ ಕೈಬಳೆ ಖರೀದಿಸುವ ಕನಸಿತ್ತು
ಊರ ದೇವರಿಗೆ ಹರಕೆ ಹೊರುವ ಮನಸಿತ್ತು
ಅವೆಲ್ಲವೂ ನೆನಪಿಗೆ ಉಳಿದವು
ಬದಲಾದ ಕಾಲದಲ್ಲಿ ಬದಲಾಗದ ನೆನಪನ್ನೊತ್ತು
ಬದುಕು ಸಾಗುತ್ತಿದೆ ಕನಸುಗಳ ನೆನೆಯುತ್ತಾ
ನಡೆದ ದಾರಿಯಲಿ ಅಳಿಸಿದ ಹೆಜ್ಜೆಯ ಗುರುತು
ಮೆಲುಕು ಹಾಕುತಿದೆ ಮನಸು ಕಣ್ಣೊರೆಸುತ್ತಾ!
-ಜಿ.ಬಿ.ಬಡಿಗೇರ
ಆಂಗ್ಲ ಭಾಷಾ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಕೊಳ್ಳೂರು ಎಂ.
ತಾ.ಶಹಾಪುರ. 9972348581.