ದಿಬ್ಬಣದಲ್ಲಿ ಮಿಂಚಿದಳು ತುಂಬುಗೆನ್ನೆಯ ಚಲುವೆ “ಹಿಂದಿರುಗಿದಾಗ” ಪಾಟೀಲರ ಕಾದಂಬರಿ
“ಹಿಂದಿರುಗಿದಾಗ” ಪಾಟೀಲರ ಕಾದಂಬರಿ ಸರಣಿ -8
ಗ್ರಾಮೀಣ ಸೊಗಡಿನ ಗಂಧ ಸೂಸುವ ಕಾದಂಬರಿ…
ಇರುಳು ಚಂದಿರನ ತಂಗಿರಣ, ಹಗಲು ರವಿಯ ಹೊಂಗಿರಣ ಇವುಗಳನ್ನು ಮೀರಿಸುವ ಕಿರಣದಂತೆ ಕಾವ್ಯ ಸಸಿಯ ಚಿಪ್ಪನ್ನು ಹಿಡಿದುಕೊಂಡು ಗುಂಪನ್ನು ಸೇರಿಕೊಂಡಳು. ನಾವಿರುವಲ್ಲಿಗೆ ಹಲಿಗೆ ವಾದ್ಯವನ್ನು ಬಡಿಯುತ್ತ ಕೇರಿಯ ದಂಡಪ್ಪ ಬಂದನು.
ಈ ಕಾರ್ಯಕ್ರಮಕ್ಕೆ ಮುಖ್ಯಸ್ಥರೆಂದರೆ ನಮ್ಮ ಗುಂಪಿನವರೆ. ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ, ಸಂಪ್ರದಾಯ ಬದ್ಧವಾಗಿ ನಡೆಸುವುದರಲ್ಲಿ ಎತ್ತಿದ ಕೈ ನಮ್ಮದು. ಐದಾರು ವರ್ಷಗಳಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದ ಕೀರ್ತಿ ನಮಗಿತ್ತು. ಎಲ್ಲರೂ ನಮ್ಮ ಮುಖ್ಯಸ್ಥ ಗೌಡಪ್ಪನ ಅಪ್ಪಣೆಗಾಗಿ ಕಾದು ನಿಂತೇವು “ಯಾರು ಸಣ್ಣವರಿಗಾಗಿ ನೂಕೋದಾಗ್ಲಿ, ಹೊಡಿಯೋದಾಗ್ಲಿ, ಸಸಿ ಕಿತ್ತು ಬಿಸಾಡೋದಾಗ್ಲಿ ಮಾಡಬಾರ್ದು, ಎಲ್ಲರೂ ಒಟ್ಟಾಗಿ ಜಗಳಗಿಗಳ ಆಡದೆ, ನಕ್ಕೂ ನಲಿಯುತ್ತಾ ಬರ್ಬೇಕು, ತಿಳಿತಾ ಎಂದರು. ಎಲ್ಲರೂ ಒಟ್ಟಾಗಿ “ಆಯ್ತು” ಎಂದೇವು. ಹೊರಡಲು ಅಪ್ಪಣೆಕೊಟ್ಟ ಎಲ್ಲರೂ ಹಾಡು ಹಾಡುತ್ತ, ನಡು ನಡುವೆ ಬೊಬ್ಬೆ ಹೊಡೆಯುತ್ತ (ಬಾಯಿ ಬಡಿಯುತ್ತಾ, ಹೋಯಿಕೊಳ್ಳುತ್ತಾ ) ನಗುತ್ತಾ ಮುಂದೆ ಸಾಗಿದೇವು. ಹೊರಟ ಮಕ್ಕಳ ದಿಬ್ಬಣವನ್ನು ಕಂಡು, ಗಿಡಮರ ಬಳ್ಳಿಗಳು ನಿಬ್ಬೆರಗಾದವು. ನಮ್ಮ ದಿಬ್ಬಣದಲ್ಲಿ ತುಂಬಗನ್ನೆಯ ಚೆಲುವೆಯನ್ನೆ ನೋಡುವವರೆ ಜಾಸ್ತಿಯಾಗಿದ್ದರು. ಇದುವರೆಗೂ ನಮ್ಮೊಂದಿಗೆ ಸಸಿ ಹೊಗೆಯಲು ಬರುತ್ತಿದ್ದ, ಚೆಂದುಳ್ಳಿ ಹುಡುಗಿಯರು ಇಂದು ಬಂದಿದ್ದಾರೆ.
ಆದರೆ ಈ ಚೆಲುವೆಯ ಮುಂದೆ ಕುರೂಪಿಗಳಂತೆ ಕಾಣುತ್ತಿದ್ದಾರೆ. ನಾನು ಅವಳನ್ನು ಆಗಾಗ ಕದ್ದು ನೋಡುತ್ತ ಕವನ ಕಟ್ಟುತ್ತಿದ್ದೆ.
‘ಕಾವ್ಯ ಕನ್ನಿಕೆ ನಿನ್ನ ನಗುವೆಂತ ಚೆನ್ನ
ಬಿರಿದ್ಹಾಂಗ ದಾಳಿಂಬೆ ಹಣ್ಣ
ಅವರೆಯ ಬಣ್ಣ ತಾವರೆಯ ಕಣ್ಣ
ಬ್ರಹ್ಮ ನೋಡಿದರೆ ಬಿಡಲಾರ ನಿನ್ನ’
ಬಂದ ಮಕ್ಕಳೆಲ್ಲ ಸಸಿಯ ಚಿಪ್ಪುಗಳನ್ನು ಹಳ್ಳದಲ್ಲಿ ಎಸೆದೇವು. ಮನೆಯಿಂದ ತಂದ ಬುತ್ತಿಯನ್ನು ಗುಂಪಾಗಿ ಕುಳಿತು ಬಿಚ್ಚಿದೇವು. ಎಲ್ಲರೂ ತಂದ ಬುತ್ತಿಯಲ್ಲಿ ಸ್ವಲ್ಪ ಸ್ವಲ್ಪ, ಹಲಗೆ ಬಡಿಯಲು ಬಂದ ದಂಡಪ್ಪನಿಗೆ ಊಣ್ಣಲು ನೀಡಿ, ಒಟ್ಟಾಗಿ ಊಟ ಮುಗಿಸಿ, ಹಳ್ಳದಲ್ಲಿ ಕೈ ತೊಳೆದೇವು. ಎಲ್ಲರೂ ಊಟಮಾಡಿ ಉಳಿದ ಅನ್ನ ಮತ್ತು ಹೋಳಿಗೆಯನ್ನು ಒಟ್ಟಾಗಿ ಸೇರಿಸಿ ಉಂಡೆಯನ್ನು ಕಟ್ಟಿದೇವು. ಆ ಉಂಡೆಯಲ್ಲಿ ಒಂದು ಅಣಕು ಮದುವೆ ಊಟವಾಗಿತ್ತು. ಸಸಿ ಹೊಗೆಯಲು ಬಂದ ಮಕ್ಕಳೆಲ್ಲ ಎರಡು ಗುಂಪುಗಳಾದೇವು. ನಮ್ಮ ಎದುರೂ ಕುಳಿತ ಗುಂಪಿನಲ್ಲಿ ಚಿಕ್ಕ ಹುಡುಗ ರಾಮುಗೆ ಮದುವೆ ಗಂಡೆಂದು ಆಯ್ಕೆ ಮಾಡಿದರು. ನಮ್ಮ ಗುಂಪಿನಲ್ಲಿ ಪುಟಾಣಿ ಕಾವೇರಿಯನ್ನು ಮಧುಮಗಳಾಗಿ ಮಾಡಿದೇವು.
ನಿಂಗಮ್ಮ ಮತ್ತು ಸಂಗಪ್ಪ ಹುಡುಗಿಯ ತಾಯಿ ತಂದೆಯಾದರು. ಕಾವ್ಯ ಹುಡುಗಿಯ ಅಕ್ಕನಾದಳು. ಬೀರಪ್ಪ ಮತ್ತು ಜಕ್ಕಮ್ಮ ಹುಡುಗನ ತಾಯಿ ತಂದೆಯಾದರು. ಸಂಗಪ್ಪ ಅಂಚೆಯ ಪೇದೆಯಾದನು. ಮೊದಲಿಗೆ ಅಂಚೆ ಸಂಗಪ್ಪ ನಮ್ಮ ಗುಂಪಿಗೆ ಎದುರು ಗುಂಪಿನವರು ಬರೆದ ಪತ್ರ ಓದಿ ತಂದು ಕೊಟ್ಟನು.
ಗುಂಪಿನ ಹಿರಿಯ ಗೌಡಪ್ಪ ಕಾಗದ ಓದಿ ನಾಳೆ ಗಂಡಿನ ಕಡೆಯವರು ನಮ್ಮೂರಿಗೆ ಹೆಣ್ಣು ನೊಡಲು ಬರುತ್ತಾರೆ ಎಂದು ತಿಳಿಸಿದ. ಅದರಂತೆ ಗಂಡಿನ ಕಡೆಯವರು ಹೆಣ್ಣು ನೋಡಲು ಬಂದರು. ಬಂದವರಿಗೆ ನಮ್ಮ ಗುಂಪಿನಿಂದ ಉಪಚಾರ ಮಾಡಿದೇವು. ಸೀರೆಯುಡಿಸಿ ಕಾವೇರಿಯನ್ನು ಅವರ ಇದಿರು ಕುಳ್ಳಿರಿಸಿದೇವು. ನಮ್ಮ ಗುಂಪಿನ ಹೆಣ್ಣು ಮಕ್ಕಳು ಬೀಗರು ತಂದ ತಟ್ಟೆಯನ್ನು ಪಡೆದುಕೊಂಡು, ಅದರಲ್ಲಿ ಹಣ್ಣುಗಳನ್ನು ಅಂದರೆ ಜಾಲಿಕಾಯಿಗಳನ್ನು ಉಡಿಯಲಿಟ್ಟು, ಅಂಬರಿ ಕಟ್ಟೆಯ ಹೂಗಳನ್ನು ಮುಡಿಯಲ್ಲಿಟ್ಟಿದ್ದರು.
ಆ ಗುಂಪಿನಲ್ಲಿನ ಯಜಮಾನ ಹುಡುಗಿಗೆ ಮಾತನಾಡಿಸಿದ.
ಯಜಮಾನ ಃ ನಿಮ್ಮ ಮನೆಯ ದೇವರ ಹೆಸರೇನು..?
ಕಾವೇರಿ ಃ ಬಯಲು ಭೂತಾಳಿ ಸಿದ್ದ.
ಯಜಮಾನ ಃ ನಿನ್ನ ಹೆಸರೇನು..?
ಕಾವೇರಿ ಃ ಕಾವೇರಿ.
ಯಜಮಾನ ಃ ನಿಮ್ಮ ತಂದೆ ತಾಯಿ ಹೆಸರೇನು..?
ಕಾವೆರಿ ಃ ಸಂಗಪ್ಪ, ನಿಂಗಮ್ಮ.
ಯಜಮಾನ ಃ ಸಾಲಿ ಏಟು ಓದಿದಿ..?
ಕಾವೇರಿ ಃ ಮ್ಯಾಟ್ರಿಕ್ ಫೇಲ್ ಆಗಿನ್ರೀ.
ಯಜಮಾನ ಃ ಸರಿ ಸ್ವಲ್ಪ ಆತತ ಹೋಗಿ, ಇತಾತ ಬಾರವ್ವ.
ಹುಡುಗಿಯನ್ನು ತಿರುಗಾಡಿಸಿ, ಅವಳ ಕಾಲು ಸರಿಯಾಗಿದೆಯೆಂದು ಪರೀಕ್ಷಿಸಿದರು.
ಹುಡುಗಿ ಸ್ವಲ್ಪ ಅವರ ಮುಂದೆ ನಡೆದು ಬಂದು ಮತ್ತೆ ತನ್ನ ಜಾಗದಲ್ಲಿ ಕುಳಿತಳು.
ಯಜಮಾನ ಃ ಸರಿ, ಹೋಗವ ಒಳಗ ಹೋಗಿ ಜಗುಲಿಗಿ ಸನ್ಮಾಡು.
ಸಂಗಪ್ಪ ಃ ಜಗುಲಿಗಿ ಸನ್ಮಾಡಿ ಬಂದು, ಹಿರ್ಯಾರಿಗಿ ಸನ್ಮಾಡು. ಕಾವೇರಿ ಜಗುಲಿಗೆ ಸಮಸ್ಕಾರ ಮಾಡಿ ಬಂದು ಗುಂಪಿನಲ್ಲಿ ಕುಳಿತ ಗಂಡಿನ ಕಡೆಯ ಹಿರಿಯರಿಗೆ ಸಮಸ್ಕಾರ ಮಾಡುವಳು. ಗಂಡಿನ ಕಡೆಯವರು ಊರಿಗೆ ಹೋಗಿ ವಿಷಯ ತಿಳಿಸುತ್ತೇವೆ ಎಂದು ಹೊರಟು ನಿಂತರು.. (ಮುಂದುವರೆಯುವುದು.)
ಲೇಖಕರು