ಸಿರಿಧಾನ್ಯ ಸೇವನೆಯಿಂದ ಆರೋಗ್ಯ ಸಮೃದ್ಧಿ-ಡಾ.ಹಿರೇಮಠ
ಸಿರಿಧಾನ್ಯ ಪೂರ್ವಿಕರ ಆಹಾರ-ಮೋಹನ್
ಯಾದಗಿರಿ, ಶಹಾಪುರಃ ಸಿರಿಧಾನ್ಯ ನಿತ್ಯ ಆಹಾರವಾಗಿ ಸ್ವೀಕರಿಸಿದ್ದಲ್ಲಿ ಮಾರಕ ರೋಗಗಳನ್ನು ತಡೆಗಟ್ಟಬಹುದು. ಸಿರಿ ಧಾನ್ಯವೆಂದರೆ ರಾಗಿ, ನವಣೆ, ಸಜ್ಜೆ ಊದಲು ಬರಗು, ಕೊರಲೆ ಇತ್ಯಾದಿ ಇವುಗಳನ್ನು ಆಹಾರವಾಗಿ ನಿತ್ಯ ಬಳಸಿದಲ್ಲಿ ಸಮೃದ್ಧಿ ಆರೋಗ್ಯ ಪಡೆಯಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಬಸಯ್ಯ ಹಿರೇಮಠ ಹೇಳಿದರು.
ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಆಯೋಜಿಸಿದ್ದ ಸಿರಿ ಧಾನ್ಯ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದರು.
ಸಿರಿ ಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯ ಪೌಷ್ಠಿಕಾಂಶ, ಜೀವಸತ್ವವನ್ನು ಒದಗಿಸುತ್ತವೆ. ಇವುಗಳ ಸೇವನೆಯಿಂದ ಮನುಷ್ಯ ಸಮರ್ಪಕ ಆರೋಗ್ಯ ವೃದ್ಧಿ ಹೊಂದುತ್ತಾನೆ. ದಿನ ನಿತ್ಯ ಬಳಸುವ ಅಕ್ಕಿ ಮತ್ತು ಗೋದಿಗೆ ಹೋಲಿಸಿದ್ದಲ್ಲಿ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರೋಟೀನ್, ಕೊಬ್ಬು, ಸುಣ್ಣ, ನಾರು, ಖನಿಜ ಮತ್ತು ರಂಜಕ ಹೆಚ್ಚು ಪ್ರಮಾಣ ಕಂಡು ಬರುತ್ತದೆ. ಸಿರಿಧಾನ್ಯದಲ್ಲಿ ಅತಿಹೆಚ್ಚು ನಾರಿನಾಂಶವಿರುವದಿಂದ ಕೊಲೆಸ್ಟ್ರಾಲ್ ಮತತು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವದಕ್ಕೆ ಸಹಕಾರಿಯಾಗಲಿದೆ. ಅಲ್ಲದೆ ಹೃದಯ ರೋಗ ಮತ್ತು ಹೆಚ್ಚಿನ ತೂಕದ ಸಮಸ್ಯೆಯನ್ನು ಸಿರಿಧಾನ್ಯ ಸೇವನೆಯಿಂದ ನಿವಾರಣೆಯಾಗಲಿದೆ ಎಂದರು.
ಯೋಜನಾಧಿಕಾರಿ ಕೆ.ಮೋಹನ್ ಮಾತನಾಡಿ, ಸಿರಿಧಾನ್ಯ ಪೂರ್ವಿಕರ ಆಹಾರವಾಗಿದ್ದು, ಆಗಿನ ಕಾಲದಲ್ಲಿ ಸಿರಿಧಾನ್ಯಗಳ ಸೇವನೆ ಅತ್ಯಧಿಕವಗಿರುದರಿಂದಲೇ ಮನುಷ್ಯರು ಅಷ್ಟೊಂದು ಗಟ್ಟಿಯಾಗಿದ್ದರು. ಸಿರಿಧಾನ್ಯಗಳಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಮನುಷ್ಯರಲ್ಲದೆ ಪ್ರಾಣಿಗಳಿಗೂ ಸಹ ಈ ಆಹಾರ ಅತ್ಯುತ್ತಮ. ಸಕ್ಕರೆ ಕಾಯಿಲೆ, ಅಧಿಕ ರಕ್ತದ ಒತ್ತಡ, ಬೊಜ್ಜು ಮತತು ಕ್ಯಾನ್ಸರ್‍ನಂತಹ ಕಾಯಿಲೆಗಳಿಗೆ ಸಿರಿಧಾನ್ಯ ಬಳಕೆ ರಾಮಬಾಣವಾಗಿದೆ.
ಕಾರಣ ರೈತರು ಸಿರಿಧಾನ್ಯ ಬೆಳೆಯತ್ತ ಗಮನಹರಿಸಬೇಕಾಗಿದೆ. ಅಲ್ಲದೆ ಪ್ರಸ್ತುತ ದಿನಗಳಲ್ಲಿ ಮಾನವರಲ್ಲಿ ಆರೋಗ್ಯ ಕಾಳಜಿ ಅಧಿಕ ತಿಳುವಳಿಕೆ ಮೂಡತ್ತಲಿದೆ. ಸಿರಿಧಾನ್ಯಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ರೈತರು ಈ ವಿದ್ಯಾಮಾನಗಳನ್ನು ಅರಿತು ಸಿರಿಧಾನ್ಯ ಬೆಳೆ ಕುರಿತು ಸಮರ್ಪಕ ಮಾಹಿತಿ ಪಡೆದುಕೊಂಡು ಸಿರಿಧಾನ್ಯ ಬೆಳೆಯುವಲ್ಲಿ ಗಮನಹರಿಸಬೇಕು.
ಇದರಿಂದ ಸಾಕಷ್ಟು ಲಾಭವಿದೆ. ನಮ್ಮ ಸಂಸ್ಥೆ ನೀಡುವ ತರಬೇತಿ ಕಾರ್ಯಕ್ರಮ ಸೇರಿದಂತೆ ರೈತರಿಗಾಗಿ ನೀಡುವ ಹಲವು ಸವಲತ್ತುಗಳನ್ನು ಬಳಸಿಕೊಂಡು ಇಂತಹ ವಿನೂತನ ಕೃಷಿಯಲ್ಲಿ ರೈತರು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಸ್ಥಳೀಯ ಚಿಕ್ಕಮಠದ ಗುಂಡಪ್ಪ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ಶರಣು ಇತರರಿದ್ದರು. ಕೃಷಿ ಮೇಲ್ವಿಚಾರಕ ಪ್ರಕಾಶ ಜಿ.ನಿರೂಪಿಸಿ ವಂದಿಸಿದರು. ನೂರಾರು ಜನ ರೈತರು ಭಾಗವಹಿಸಿದ್ದರು.