ಅವನು ನಾನು ಮತ್ತು ರೊಟ್ಟಿ – ಕವಿ ಹೊನ್ಕಲ್ ಬರೆದ ಕಾವ್ಯ
ಅವನು ಮತ್ತು ನಾನು & ರೊಟ್ಟಿ
ಅವನು ಹಸಿದವ
ನಾನು ಹಸಿದವ
ಅವನ ಹತ್ತಿರ
ರೊಟ್ಟಿ ಬುತ್ತಿ ಇಲ್ಲ
ನನ್ನ ಹತ್ತಿರ ಪತ್ನಿ
ಕಟ್ಟಿ ಕೊಟ್ಟಿದ್ದು
ಸ್ವಲ್ಪ ಜಾಸ್ತಿನೇ ಇತ್ತು……
ಎಂದಿನಂತೆ
ಇಬ್ಬರು ಅರ್ಧರ್ಧ
ಹಂಚಿಕೊಂಡು
ಉಂಡೆವು…
ಅವನು ಅದೇ ಸ್ಟೇಷನ್ ದ
ಆಕಾಶದಂಗಳದಲಿ
ತಣ್ಣಗೆ ಮಲಗಬಹುದು…
ನಾನು ಬರಲಿರುವ ಟ್ರೇನಿನ್
ಎಸಿ ಡಬ್ಬಿ ಹತ್ತಿ
ಮಲಗಬಹುದು
ಅವನಿಗೂ ನನಗೂ
ಯಾವ ವ್ಯತ್ಯಾಸವು ಇಲ್ಲ
ಒಂದರ್ಥದಲ್ಲಿ ….
ಅವನ ಬಟ್ಟೆ ಗಲೀಜಾಗಿವೆ
ನಮ್ಮ ಮನಸ್ಸಿನ
ಗಲೀಜಿಗಿಂತ
ಉತ್ತಮ ಅವನು…
ಅವನು ನನಗೆ ಬೇಡಲಿಲ್ಲ
ನೋಡಿದ
ಅವನು ಹಸಿದಿರಬಹುದು
ಎಂದು ಕರೆದೆ……
ಉಣ್ಣುತ್ತಿಯಾ ಅಂದೆ
ಹೂಂ…ಅಂದ
ಅಲ್ಲಿಗೆ ಮಾತು
ಮುಗಿದವು….
ಅವನ ದಾರಿ ಅವನಿಗೆ
ನನ್ನ ದಾರಿ ನನಗೆ
ಅವನು ಬಿಕ್ಷುಕ
ಒಂದರ್ಥದಲ್ಲಿ
ನಾವು ಬಿಕ್ಷುಕರೇ….
ಅವನಿಗೆ ಕೇವಲ
ಹೊಟ್ಟೆ ಹಸಿವು
ನಮ್ಮವೋ ತರಹಾವರಿ ಹಸಿವು
ನಮ್ಮ ಹಸಿವೆಗೆ ಕೊನೆ ಇಲ್ಲ…
ನಾನು ನನ್ನೊಡೆಯ
ನಿರಾಕಾರನಿಗೆ
ಬೇಡುತ್ತೇನೆ
ಅವನು ನನ್ನಂತಹವರಿಗೆ
ಬೇಡುತ್ತಾನೆ..
ನಾವು ಏನೋ
ಬೇಡಲೋ ಪಡೆಯಲೋ
ಎಲ್ಲೋ
ಹೋಗುತ್ತೇವೆ
ಅವನು ಇದ್ದಲ್ಲೆ ಬೇಡುತ್ತಾನೆ…
@-ಸಿದ್ಧರಾಮ ಹೊನ್ಕಲ್.
( ಯಾದಗಿರಿ ರೈಲ್ವೆ ಸ್ಟೇಷನ್ ದಲ್ಲಿಯ ಒಂದು ದಿನ.)
ಒಳ್ಳೆಯ ಕವಿತೆ ಸರ್. ಅಭಿನಂದನೆಗಳು