ಸರ್ವಧರ್ಮಿಯರು ಒಗ್ಗಟ್ಟಾಗಿರುವ ಶ್ರೇಷ್ಠ ಭಾರತ-ಥಾಮಸ್ ದೊಡ್ಮನಿ
ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮರ ಸ್ಮರಣೆ ಅಗತ್ಯ
yadgiri,ಶಹಾಪುರಃ ಭಾರತದಲ್ಲಿ ಸರ್ವಧರ್ಮಿಯರು ವಾಸವಿದ್ದು, ಆಚರಣೆ ಪದ್ಧತಿಗಳು ಭಿನ್ನ ವಿಭಿನ್ನವಾಗಿದ್ದರೂ ದೇಶ ಎಂದಾಗ ನಾವೆಲ್ಲ ಒಗ್ಗಟ್ಟಾಗಿರುವದು ಇಡಿ ಪ್ರಪ್ರಂಚಕ್ಕೆ ಮಾದರಿಯಾಗಿದ್ದೇವೆ. ಇಂತಹ ವೈಶಿಷ್ಠ್ಯ ಹೊಂದಿರಲು ಭಾರತದಲ್ಲಿ ಮಾತ್ರ ಸಾಧ್ಯ ಎಂದು ನಿವೃತ್ತ ಸಿಡಿಪಿಓ ಥಾಮಸ್ ದೊಡ್ಮನಿ ತಿಳಿಸಿದರು.
ನಗರದ ಸೈಂಟ್ ಪೀಟರ್ಸ್ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಭಾರತದಲ್ಲಿ ಶರಣರು, ಸಂತ, ಸೋಫಿಗಳು ಜನ್ಮಿಸಿ ಬೆಳೆದು ಅಪಾರ ಜ್ಞಾನಾಮೃತವನ್ನು ಕೊಡುಗೆಯಾಗಿ ನೀಡಿ ಹೋಗಿದ್ದು, ಅವರ ದಿವ್ಯ ಶಕ್ತಿಯಿಂದಲೇ ಭಾರತ ಇಂದು ವಿಶ್ವಮಟ್ಟದಲ್ಲಿ ಕಂಗೊಳಿಸುತ್ತಿದೆ. ಕೊರೊನಾ ಎಂಬ ಮಹಾಮಾರಿಗೆ ಹಲವಾರು ರಾಷ್ಟ್ರಗಳು ನಲುಗಿ ಹೋಗಿವೆ. ಆದರೆ ನೂರ ನಲವತ್ತು ಕೋಟಿ ಜನಸಂಖ್ಯೆ ಹೊಂದಿದ ನಮ್ಮ ಭಾರತ ಊಹಿಸಲಾಸಾಧ್ಯವಾದ ದೊಡ್ಡ ಮಟ್ಟದ ಅನಾಹುತವೇ ಸೃಷ್ಟಿಯಾಗುತ್ತೆ ಎನ್ನೋ ಭಯವಿತ್ತು.
ಆದರೆ ಮಾನವೀಯತೆ ನೆಲೆಗಟ್ಟಿನಲ್ಲಿ ಪೂರ್ವಜರ ಪುಣ್ಯಫಲದಿಂದ ಸ್ವಾತಂತ್ರ್ಯಕ್ಕಾಗಿ ಜೀವನ ಮುಡಿಪಾಗಿಟ್ಟು ಬಲಿದಾನಗೈದ ಮಹಾತ್ಮರ ಆಶಯ ಮೇರೆಗೆ ಭಾರತಕ್ಕೆ ಅಂತಹ ದುಸ್ಥಿತಿ ಬರಲಿಲ್ಲ ಎಂದರೆ ಅಚ್ಚರಿ ಪಡಬೇಕಿಲ್ಲ. ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಸುಭಾಷಚಂದ್ರ ಬೋಸ್ ಇತರರು ಸಮೃದ್ಧ ಭಾರತ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೆ ಸವೆಸಿದವರು. ಅವರ ಆಶೀರ್ವಾದದಿಂದ ಇಂದು ನಾವೆಲ್ಲ ಸ್ವಾತಂತ್ರ್ಯರಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇಂದು ರಾಷ್ಟ್ರೀಯ ಹಬ್ಬದ ದಿನವಾಗಿದ್ದರಿಂದ ನಾವೆಲ್ಲ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರನ್ನು ಸ್ಮರಿಸಬೇಕಿದೆ ಎಂದರು.
ಶಾಲಾ ವ್ಯವಸ್ಥಾಪಕರಾದ ಫಾದರ್ ಕ್ಲೀವನ್ ಬೋನ್ಸ್, ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಮಾತನಾಡಿದರು. ಅತಿಥಿಗಳಾಗಿ ಸುನೀತಾ ಟಿ.ದೊಡ್ಮನಿ, ಪತ್ರಕರ್ತರ ಮಲ್ಲಿಕಾರ್ಜುನ ಮುದ್ನೂರ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅನುಷಾ ಸಿಸ್ಟರ್, ಸುನೀತಾ, ರೋನಿಕಾ ಸೇರಿದಂತೆ ದೈಹಿಕ ಶಿಕ್ಷಕ ಶಿವಕುಮಾರ ಭಾಗವಹಿಸಿದ್ದರು. ಶಿಕ್ಷಕ ಪ್ರಶಾಂತ ನಿರೂಪಿಸಿ ವಂದಿಸಿದರು.