ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ
ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ
yadgiri, ಶಹಾಪುರಃ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿದ ನಾಲ್ಕು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತಕ್ಷಣಕ್ಕೆ ಹಿಂಪಡೆಯಬೇಕೆಂದು ಆಗ್ರಹಿಸಿ ಗುರುವಾರ ಇಲ್ಲಿನ ಜೆಸಿಟಿಯು ಸಂಘಟನೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಜೈಲಾಲ ತೋಟದಮನಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೇಂದ್ರ ಸರ್ಕಾರ ಜಾರಿಗೊಳಿಸಿದ ನಾಲ್ಕು ಕಾಯ್ದೆಗಳು ಕಾರ್ಮಿಕ ವಿರೋಧಿಯಾಗಿದ್ದು, ಮಾಲೀಕರಿಗೆ ಮತ್ತು ಬಂಡವಾಳಶಾಹಿಗಳಿಗೆ ಬಲ ನೀಡಲಿವೆ. ಇದರಿಂದ ದುಡಿಯುವ ಕಾರ್ಮಿಕ ವರ್ಗಕ್ಕೆ ತೊಂದರೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಸಂಘಟಿತ ಕ್ಷೇತ್ರ ಕಾರ್ಮಿಕರಿಗೆ ಸಂಬಂಧಿಸಿದ ಸಾಮಾಜಿಕ ಸುರಕ್ಷತೆ ಬಗ್ಗೆ ಹೇಳುವ ಸರ್ಕಾರ, ಹಣಕಾಸು ಪೂರೈಕೆ ಕುರಿತು ಸ್ಪಷ್ಟ ಕ್ರಮಕೈಗೊಂಡಿಲ್ಲ. ಕನಿಷ್ಠ ವೇತನ ನಿಗಧಿಗೊಳಿಸುವ ಬದಲಿಗೆ ಬಿಜೆಪಿ ಸರ್ಕಾರ ತಜ್ಞರ ಸಮಿತಿ ಶಿಫಾರಸ್ಸಿನಂತೆ ತಳಮಟ್ಟದ ಕನಿಷ್ಠ ವೇತನ ನಿರ್ಧರಿಸಲು ಹೊರಟಿದೆ. ನೌಕರರು ಒಂದು ದಿನದ ಮುಷ್ಕರ ಕೈಗೊಂಡರೆ ಎಂಟು ದಿನದ ಸಂಬಳ ಕಡಿತ ಮಾಡಲಾಗುತ್ತಿದೆ. ಕಾರ್ಮಿಕ ಅಧಿಕಾರಿಗಳ ಕಾರ್ಯವ್ಯಾಪ್ತಿ ಮೊಟಕುಗೊಳಿಸಿ ಇನ್ಸೆಪೆಕ್ಟರ್ಗಳನ್ನು ಇನ್ಸ್ಪೆಕ್ಟರ್ ಕಮ್ ಫೆಸಿಲಿಟೇಟರ್ಗಳೆಂದು ಗುರುತಿಸಲಾಗುತ್ತಿದೆ.
ಅಲ್ಲದೆ ಇವರನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ತಪಾಸಣೆ ಮಾಡುವಂತಿಲ್ಲ. ಈ ನಾಲ್ಕು ಕಾಯ್ದೆ, ಸಂಹಿತೆಗಳು ಕೆಲಸಾರರನ್ನು ತೀವ್ರ ಶೋಷಿಸಲು ಅನುಕೂಲ ಮಾಡಿದಂತಿದೆ. ಉದಾರೀಕರಣ ನೀತಿಗಳಿಗೆ ಅನುಗುಣವಾಗಿ ಸಂಹಿತೆಗಳನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ಮಿಕ ಸಂಘಟನೆಗಳು ಇದನ್ನು ಒಪ್ಪುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರ ಸ್ಥಿತಿ ಇನ್ನಷ್ಟು ಗಂಭಿರತೆಗೆ ತಳ್ಳಿದ್ದಾರೆ. ಈ ಕೂಡಲೇ ಕಾರ್ಮಿಕ ವಿರೋಧಿ ನೀತಿ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಿರಂತರ ಮುಷ್ಕರಗಳನ್ನು ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಐಯುಟಿಯುಸಿ ಸಂಚಾಲಕ ಸೈದಪ್ಪ ಎಚ್.ಪಿ., ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸಲಿಂಗಮ್ಮ ನಾಟೇಕಾರ, ಕಾರ್ಯದರ್ಶಿ ಯಮುನಮ್ಮ ದೋರನಹಳ್ಳಿ, ಆಶಾ ಕಾರ್ಯಕರ್ತೆ ಸಂಘದ ಜಿಲ್ಲಾ ಕಾರ್ಯದರ್ಶಿ ದೇವಕ್ಕಿ, ತಾಲೂಕು ಅಧ್ಯಕ್ಷೆ ಸರಸ್ವತಿ, ಅಕ್ಷರ ದಾಸೋಹ ಕರ ಸಂಘದ ತಾಲೂಕು ಅಧ್ಯಕ್ಷ ಸುನಂದಾ ಹಿರೇಮಠ, ಕಾರ್ಯದಶಿ ಈರಮ್ಮ ಹಯ್ಯಾಳಕರ್, ಗ್ರಾಪಂ ಜಿಲ್ಲಾ ನೌಕರರ ಜಿಲ್ಲಾಧ್ಯಕ್ಷ ಮಲ್ಲಣ್ಣ ಬಿರಾದಾರ ಸೇರಿದಂತೆ ಇತರರು ಭಾಗವಹಿಸಿದ್ದರು.
ನಗರದ ಚರಬಸವೇಶ್ವರ ಕಮಾನ್‍ದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು. ಕೆಲಹೊತ್ತು ವೃತ್ತದಲ್ಲಿ ಮುಷ್ಕರ ನಡೆಸಿದ ಜೆಸಿಟಿಯು ಕಾರ್ಯಕರ್ತರು ತಹಶೀಲ್ದಾರರ ಮೂಲಕ ಪ್ರಧಾನಿಗಳಿಗೆ ಮನವಿ ಪತ್ರ ಸಲ್ಲಿಸಿದರು.