ಜಲಪ್ರಳಯ : ಕವಿತ್ರಿ ಜಯಶ್ರೀ ಭಂಡಾರಿ ಬರೆದ ಕಾವ್ಯ
ಜಲಪ್ರಳಯ…
ಅವಳು ಅಳುತಿದ್ದಳು
ಬದುಕು ಛಿಧ್ರಗೊಂಡದ್ದಕ್ಕೊ
ಮನೆಮಠ ಕಣ್ಢಮುಂದೆ ತೇಲಿಹೋದದ್ದಕ್ಕೊ
ನಿರಾಶ್ರಿತರ ಬೀಡಿನಲ್ಲಿ ಮಂಡಿಯೂರಿ ಬೇಡುತಿದ್ದಳು
ಅದೇಕೆ ಚೀರುತಿದಿಯಾ ಏನಾಗಿದೆ ನಿನಗೆ
ಗಂಜಿ ಇದೆಯಲ್ಲ ಕುಡಿ
ಅದ್ಯಾರ ತಂದಿತ್ತ ಬಿಸ್ಕಿಟ್ ಇದೆ ತಿನ್ನು..
ಮುಖಮುಚ್ಚಿ ಅತ್ತರೆ ಇಲ್ಲಾರು ಕೇಳುವರು ನಿನ್ನನು
ನಿನ್ನಂತೆ ನಿರಾಶ್ರಿತರೆ ದಂಡೆ ತುಂಬಿದೆ….
ಎಲ್ಲರೂ ಹಪಹಪಿಸುವವರೇ…
ತಣ್ಣಗೆ ಬಿದ್ದಿರು ಅದ್ಯಾರೊ ಗದರಿಸಿದರು…
ಅವಳಿಗೆ ಸಾಂತ್ವನ ಬೇಕಿರಲಿಲ್ಲ
ಇನ್ಯಾವದೊ ಸಹಾಯ ಬೇಕಿತ್ತು
ಜಲಪ್ರಳಯದಲ್ಲಿ ಜೀವನವೇ ಹರಿದು ಹೋಗಿತ್ತು
ಬದುಕಿನ ಬಂಡಿಯ ಬಂಧನ ಚೂರಾಗಿತ್ತು
ತನ್ನವರೆಲ್ಲರನ್ನು ದೂರ ಮಾಡಿತ್ತು
ಆದರೂ…….
ಅಳುವದನ್ನ ನಿಲ್ಲಿಸಲಿಲ್ಲ ಗಂಜಿಗಾಗಿ ಹಂಬಲಿಸಲಿಲ್ಲ..
ನನ್ನದೊಂದು ಮಾತು ಕೇಳಿ ಮೊಣಕಾಲ ಸಂಧಿಯಿದ ಮುಖ
ಮುಂದೆ ಮಾಡಿ ಜೋರಾಗಿ ಚೀರಿದಳು..
ದಯವಿಟ್ಟು ಬಂಧನದಲ್ಲಿರುವ ಗಿಳಿಯ ಹಾರಿಬಿಡಿ…
ಹಾರಿ ಎಲ್ಲಾದರೂ ಬದುಕಿಕೊಳ್ಳಲಿ…
ದನಕರು ಬೆಕ್ಕು ನಾಯಿಗಳು ಮೂಕಪ್ರಾಣಿಗಳ ಬಂಧನ ಬಿಡಿಸಿ…
ಅವಳ ಆರ್ತನಾದ ಅರಣ್ಯರೋದನವಾಯಿತು..
ಕೊಡಗಿನ ರುದ್ರಭಯಂಕರ ಮಳೆ ಜನರ ಜೀವನದೊಂದಿಗೆ ಚಲ್ಲಾಟವಾಡಿತು…
-ಜಯಶ್ರೀ ಭ.ಭಂಡಾರಿ.
ಬಾದಾಮಿ.