ಶಹಾಪುರಃ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಆಗ್ರಹ
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಆಗ್ರಹ
ಶಹಾಪುರಃ ನಗರದಲ್ಲಿ ಇಂದಿರಾ ಕ್ಯಾಂಟೀನ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಜಯ ಕರ್ನಾಟಕ ರಕ್ಷಣಾ ಸೇನೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿತು.
ಹಲವು ವರ್ಷಗಳಿಂದ ನಗರದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಲು ಸೂಕ್ತ ಸ್ಥಳ ಆಯ್ಕೆ ವಿಚಾರದಲ್ಲಿಯೇ ಕಾಲ ಕಳೆಯುತ್ತಿದ್ದು, ಇದರಿಂದ ಬಡವರು ಸೌಲಭ್ಯ ವಂಚಿತರಾಗಿದ್ದಾರೆ. ಬೇರೆ ತಾಲೂಕು, ಬೆಂಗಳೂರಿನಂತ ನಗರ ಪ್ರದೇಶಗಳಲ್ಲಿ ಬಡವರು ಕಡು ಬಡವರಿಗೆ ಉಪ ಆಹಾರ, ಊಟ ಸುಲಭವಾಗಿ ದೊರೆಯುತ್ತಿದ್ದು, ನಮ್ಮ ಶಹಾಪುರದಲ್ಲಿ ಇಂದಿರಾ ಕ್ಯಾಂಟಿನ್ ಇಲ್ಲದೆ ಕಡು ಬಡವರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಕೂಡಲೇ ಪರಿಶೀಲಿಸಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ ಕೊರೊನಾ ಸಂದರ್ಭದಲ್ಲಿ ಅದರ ಅಗತ್ಯತೆ ಹೆಚ್ಚಿದ್ದು, ಕೂಡಲೇ ಕ್ಯಾಂಟೀನ್ ನಿರ್ಮಾಣ ಮಾಡಿ. ಪ್ರಸ್ತುತ ಗಳಿಗೆಯಲ್ಲಿ ಬಾಡಿಗೆ ಕಟ್ಟಡದಲ್ಲಾದರೂ ಕ್ಯಾಂಟೀನ್ ನಡೆಸುವ ವ್ಯವಸ್ಥೆ ಮಾಡಬೇಕೆಂದು ಸೇನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸೇನೆ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ಶರಣು ಬೇವಿನಹಳ್ಳಿ, ಹೊನ್ನಪ್ಪ ಫಣಿ, ಶರಣು ಹತ್ತಿಗೂಡೂರ, ನಾಗು ಗುತ್ತಿಪೇಟ, ತಿಪ್ಪಣ್ಣ ಸಗರ, ವಿನೋದ ಕಟ್ಟಿಮನಿ ಸೇರಿದಂತೆ ಇತರರಿದ್ದರು.