ಸ್ವಕುಳ ಸಾಳಿ ಸಮಾಜದ ಏಳ್ಗೆಗೆ ಶ್ರಮ ಅಗತ್ಯ- ಸೂಗೂರೇಶ್ವರ ಶ್ರೀ
ಜಿಹ್ವೇಶ್ವರ ಜಯಂತಿ ಸಂಭ್ರಮಾಚರಣೆ
ಜಿಹ್ವೇಶ್ವರ ಜಯಂತಿ ಸಂಭ್ರಮಾಚರಣೆ
ಸ್ವಕುಳ ಸಾಳಿ ಸಮಾಜದ ಏಳ್ಗೆಗೆ ಶ್ರಮ ಅಗತ್ಯ- ಸೂಗೂರೇಶ್ವರ ಶ್ರೀ
ಶಹಾಪುರಃ ಸ್ವಕುಳ ಸಾಳಿ ಸಮಾಜ ಎಲ್ಲಾ ಸಮುದಾಯದವರೊಂದಿಗೆ ಉತ್ತಮ್ಮ ಬಾಂಧವ್ಯ ಹೊಂದಿದ್ದು, ಜವಳಿ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸದ ಜತೆಗೆ ಶಾಂತ ಸ್ವಭಾವ ಹಾಗೂ ನೆಮ್ಮದಿಯ ಬದುಕು ಸಾಗಿಸುವವರಾಗಿದ್ದಾರೆ ಎಂದು ಕುಂಬಾರ ಓಣಿಯ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ತಿಳಿಸಿದರು.
ನಗರದ ಸ್ವಕುಳ ಸಾಳಿ ಸಮಾಜ ಕುಲ ಗುರು ಶ್ರೀ ಜಿಹ್ವೇಶ್ವರರ ಜಯಂತಿ ಅಂಗವಾಗಿ ನಡೆದ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ಸ್ವಕುಳ ಸಾಳಿ ಸಮಾಜ ಹೆಚ್ಚಿನ ಸಾಮಾಜಿಕ ಬಾಂಧವ್ಯದಿಂದ ಮತ್ತು ಜವಬ್ದಾರಿಯಿಂದ ಕಾರ್ಯನಿರ್ವಹಿಸುವವರಾಗಿದ್ದು, ಸಾಕ್ಷಾತ್ ಭಗವಾನ್ ಜಿವ್ಹೇಶ್ವರರ ವಂಶಸ್ಥರೆಂದು ಗುರುತಿಸಿಕೊಂಡಿರುವ ಸಾಳಿ ಸಮಾಜ ವ್ಯಾಪಾರಸ್ಥರಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯತೆಯು ಹೊಂದಿದವರಾಗಿದ್ದಾರೆ. ಸಮಾಜವು ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಬಲರಾಗಬೇಕಿದೆ. ಆ ನಿಟ್ಟಿನಲ್ಲಿ ಸಮಾಜ ಬಾಂಧವರು ನಿರಂತರ ಶ್ರಮ ಅಗತ್ಯವಿದೆ. ಅಲ್ಲದೆ ಯುವ ಪೀಳಿಗೆಗೆ ವಿವಿಧ ಕ್ಷೇತ್ರಗಳ ಕೌಶಲ್ಯತೆ ಜ್ಞಾನ ಪಡೆಯುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು.
ಸೀರೆ ನೇಯ್ಗೆ ಕಾರ್ಯವಿರಲಿ, ಸುವರ್ಣ ಕಾರ್ಯಗಾರವಿರಲಿ, ಬಡಿಗೆತನವಿರಲಿ. ಕುಂಬಾರಿಕೆ ಇರಲಿ ಇವೆಲ್ಲ ಕಾಯಕಗಳು. ಕಾಯಕದ ಮೂಲಕ ಬದುಕು ಕಟ್ಟಿಕೊಂಡಂತೆ ಸ್ವಕುಳ ಸಾಳಿ ಸಮಾಜವು ಸೀರೆ ನೇಯ್ಗೆ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ. ಮೂಲತಃ ಸಾಳಿ ಸಮಾಜವು ಹಿಂದೂ ಧರ್ಮ ಆಚಾರ ವಿಚಾರಗಳನ್ನು ರೂಢಿಸಿಕೊಂಡು ಬಂದವರಾಗಿದ್ದು, ಭಗವಾನ್ ಜಹ್ವೇಶ್ವರರ ಆಶೀರ್ವಾದ ಸಾದ ಸಮಾಜದ ಮೇಲಿದ್ದು, ಮಕ್ಕಳನ್ನು ಶೈಕ್ಷಣಿಕವಾಗಿ, ಸಂಸ್ಕಾರಯುತವಾಗಿ ಬೆಳೆಸಲು ಒತ್ತು ನೀಡಬೇಕಿದೆ ಎಂದರು.
ಭಾರತಿ ಶರಣಬಸಪ್ಪ ದರ್ಶನಾಪುರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕಿ ರೇಖಾ ಎನ್.ಪಾಟೀಲ್, ನಗರಸಭೆ ಸದಸ್ಯ ಸಯ್ಯದ್ ಬಾಬಾ ಪಟೇಲ್ ಉಪಸ್ಥಿತರಿದ್ದರು. ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ, ಮಹಿಳಾ ಅಧ್ಯಕ್ಷೆ ಮಂಜುಳಾ ಕೆಂದೂಳೆ ಅಧ್ಯಕ್ಷತೆವಹಿಸಿದ್ದರು. ಇದೇ ವೇಳೆ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ಸಮಾಜದ ಯುವಕರು, ಮಕ್ಕಳಿಗೆ ಸೂಕ್ತ ಬಹುಮಾನ ವಿತರಿಸಲಾಯಿತು.
ಮುಂಚಿತವಾಗಿ ಶ್ರೀಜಿಹ್ವೇಶ್ವರರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಸಂಭ್ರಮದ ಮೆರವಣಿಗೆ ಜರುಗಿತು, ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.