“ನನ್ನಪ್ಪ” ಬಡಿಗೇರ ಬರೆದ ಕಾವ್ಯ
ಅಪ್ಪ
ದೇವರನ್ನು ಪೂಜಿಸುವ ದೈವ ಭಕ್ತನೇನಲ್ಲ
ರೈತರ ಬೆವರಿಗೆ ಫಲ ಕೊಡುವ
ಭೂತಾಯಿಯ ಮಡಿಲಿಗೆ
ಬೀಜ ಬಿತ್ತುವ ಕೂರಿಗೀಯನ್ನು
ಹದ ಮಾಡುವ ನೇಗಿಲನ್ನು
ಕೆತ್ತುವ ಬಡಿಗಗೌಡ ನನ್ನಪ್ಪ!
ಅಪ್ಪನ
ಶ್ರದ್ಧೆ ಭಕ್ತಿಬೇಡಿಕೆ ಇರುವುದು
ಕಷ್ಟವ ಕಳೆದು ಹೊಟ್ಟೆಯ ತುಂಬಿಸಿ
ಬದುಕನ್ನು ಮುನ್ನಡೆಸುತ್ತಾ
ಕಂಡ ಕನಸುಗಳನ್ನು ಸಾಕಾರಗೊಳಿಸಿದ
ನಿತ್ಯ ಕರ್ಮದ ವೃತ್ತಿಯ ಮೇಲೆ ಹೊರತು
ದೈವ ಶಕ್ತಿಯ ಮೇಲಲ್ಲ!
ಅಪ್ಪ ಎಂದು ಕಿಮ್ಮತ್ತಿನ ಬಟ್ಟೆ ಉಟ್ಟವನಲ್ಲ
ಹರುಕು ದೋತುರ
ತೂತು ಬಿದ್ದ ಅಂಗಿಯನ್ಹುಟ್ಟು
ಮಾಡುವ ವೃತ್ತಿಯಿಂದಾನೆ
ಕಿಮ್ಮತ್ತನ್ನು ಗಳಿಸಿಕೊಂಡವನೆ
ಹೊರತು ಹುಟ್ಟಿನಿಂದಲ್ಲ!
ಅಪ್ಪನ ಹುಟ್ಟು ಕೀಳಾದರು
ಸುತ್ತ ನಾಕ್ಹಳ್ಳಿಯವರಿಂದ
ಬಡಿ ‘ಗೌಡ’.. ಬಡಿ ‘ಗೌಡ’ ನೆಂದು
ಕರೆಸಿಕೊಳ್ಳುವುದು
ಮಾಡುವ ವೃತ್ತಿಯಿಂದಾನೆ
ಹೊರತು ಹುಟ್ಟಿನಿಂದಲ್ಲ!
ಅಪ್ಪ ಅಂದ್ರೆ
ಸ್ವಾಭಿಮಾನದ ಸಂಕೇತ
ಕಾಯಕ ನಿಷ್ಠೆಯ ಪ್ರತೀಕ
‘ಹೊಟ್ಟೆ ತುಂಬಿಸುವ ವೃತ್ತಿಯನ್ನು
ಪ್ರೀತಿಸಲು ಕಲಿಸಿದ ಬೋಧಕ’
ಎಲ್ಲದಕ್ಕೂ ಮಿಗಿಲಾಗಿ
ದುಡಿಮೆಯೇ ದೇವರೆಂದು
ನಂಬಿ ಬದುಕಿದ ಸಾಧಕ ನನ್ನಪ್ಪ!
–ಜಿ.ಬಿ. ಬಡಿಗೇರ.
ಆಂಗ್ಲ ಭಾಷಾ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಕೊಳ್ಳೂರ.ಎಂ.
ತಾ.ಶಹಾಪುರ.
9972348581.
ಒಳ್ಳೆಯ ಕವಿತೆ. ಕೌಟುಂಬಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಇವತ್ತಿನ ಪರಿಸ್ಥಿತಿಯಲ್ಲಿ ಈ ಕವನ ತುಂಬಾ ಮುಖಾಮುಖಿ ಆಗುತ್ತದೆ