ಮದ್ಯ ಕರ್ನಾಟಕದಿಂದ ಉತ್ತರ ಕರ್ನಾಟಕಕ್ಕೆ ಪಯಣ : ಹಂಪಿಯಲ್ಲಿ ಕಾಡುಗೊಲ್ಲರ ಕಲ್ಚರ್ ಅನಾವರಣ
-ವಿನಯ ಮುದನೂರ್
ಬಳ್ಳಾರಿ : ಒಂದು ವಾರ ಕಾಲ ಚಿತ್ರದುರ್ಗ ಟೂ ಹೊಸಪೇಟೆ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಅಬ್ಬರಕ್ಕೆ ಎತ್ತಿನಗಾಡಿಗಳು ಸೆಡ್ಡು ಹೊಡದಿದ್ದವು. ಭಾರೀ ವಾಹನಗಳು ಹೊರ ಸೂಸುವ ಹೊಗೆಯ ಮದ್ಯೆಯೂ ಗೋಮೂತ್ರ, ಸಗಣಿ ವಾಸನೆ ಘಮ, ಎತ್ತಿನ ಕೊರಳಲ್ಲಿನ ಗೆಜ್ಜೆ ನಾದ, ಕಂಬಳಿ ಹೊದ್ದ ಕೃಷಿಕರ ಖುಷಿಯ ಕೇಕೆ, ರೈತಾಪಿ ಮಹಿಳೆಯರ ಮೋಹಕ ನಗು, ಮಕ್ಕಳ ಮುಗ್ಧ ಅಳುವಿನ ದನಿ ದಾರಿ ಹೋಕರ ಮನ ಸೆಳೆಯುತ್ತಿತ್ತು.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಿಂದ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಗೆ ನೂರಾರು ಎತ್ತಿನಗಾಡಿಗಳ ಪಯಣ ಸಾಗಿತ್ತು. ಮುಂದೆ ಡೊಳ್ಳಿನ ಸದ್ದಿನೊಂದಿಗೆ ಕಾಡುಗೊಲ್ಲ ಸಂಸ್ಕೃತಿಯ ದೇವರುಗಳನ್ನು ಹೊತ್ತು ಪೂಜಾರಿಗಳು, ದೇವರಿಗೆ ಛತ್ರಿ ಹಿಡಿದು ನೆರಳಾದ ಭಕ್ತರು ಹೆಜ್ಜೆ ಹಾಕುತ್ತಿದ್ದರೆ ಅವರ ಹಿಂದೆ ಎತ್ತಿನಗಾಡಿಗಳ ಸಾಲು. ಮದ್ಯ ಕರ್ನಾಟಕದ ಅಣಬೂರಿನಿಂದ ಉತ್ತರ ಕರ್ನಾಟಕದ ಹಂಪಿಯವರೆಗೆ ಸುಮಾರು 150ಕಿ.ಮೀಟರ್ ಪಯಣದಲ್ಲಿ ಯಾರೊಬ್ಬರೂ ಪಾದರಕ್ಷೆಗಳನ್ನು ಧರಿಸಿರಲಿಲ್ಲ.
ನಂದಗೋಕುಲ ಕುಲ ಬಾಂಧವರಾದ ಕಾಡುಗೊಲ್ಲರ ಆರಾಧ್ಯ ದೈವಗಳಾದ ಕಾಟಲಿಂಗೇಶ್ವರ ಸ್ವಾಮಿ, ಸಿದ್ದೇಶ್ವರಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ಬೋಸೆಲಿಂಗೇಶ್ವರ ಸ್ವಾಮಿ ಹಾಗೂ ಮಾರಿಕಾಂಬ ದೇವಿಯರ ವಿಗ್ರಹಗಳನ್ನು ಪೂಜಾರಿಗಳು ಬರೆಗಾಲಿನಲ್ಲಿ ಹೊತ್ತುಕೊಂಡೇ ಸಾಗಿದ್ದರು. ನೆರಳು ಕಂಡಲ್ಲಿ ವಿಶ್ರಾಂತಿ, ನೀರು ಕಂಡಲ್ಲಿ ಬ್ರೇಕ್, ಭಕ್ತರ ತೋಟಗಳಲ್ಲಿ ದಾಸೋಹ ಹೀಗೆ ಒಂದು ವಾರಗಳ ಕಾಲ ಸಾಗಿತ್ತು ಕಾಡುಗೊಲ್ಲ ಸಮುದಾಯದ ಈ ಅಪರೂಪದ ಉತ್ಸವ.
ಉತ್ತಮ ಮಳೆ ಬೆಳೆ ಆಗಲಿ, ಊರಿಗೆ ಒಳಿತಾಗಲಿ ಎಂಬುದು ಈ ಆಚರಣೆಯ ಉದ್ದೇಶವಾಗಿದೆ. ಈ ಹಿಂದಿನಿಂದಲೂ ಕಾಡುಗೊಲ್ಲ ಮುದಾಯಕ್ಕೂ ಸುಕ್ಷೇತ್ರ ಹಂಪಿಗೂ ಅವಿನಾಭಾವ ನಂಟಿದೆ. ಸುಮಾರು 80ವರ್ಷಗಳ ಹಿಂದೆ ಈ ಭಾಗದ ಜನ ದೇವರುಗಳನ್ನು ಕೊಂಡೊಯ್ದು ಹಂಪಿಯ ತುಂಗಭದ್ರಾ ನದಿಯಲ್ಲಿ ಗಂಗಾಪೂಜೆ ನೆರವೇರಿಸಿದ್ದರಂತೆ. ಅಂದಿನಿಂದ ಈಗಿನವರೆಗೂ ಗಂಗಾಪೂಜೆ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ವರ್ಷದ ಶಿವರಾತ್ರಿಯ ಸುಸಂದರ್ಭದಲ್ಲಿ ಶಿವರಾತ್ರಿ ಗುಗ್ಗರಿ ಹಬ್ಬದ ಅಂಗವಾಗಿ ಗಂಗಾಪೂಜೆ ಆಯೋಜಿಸಲಾಗಿತ್ತು.
ನಿಗದಿತ ಕಾರ್ಯಕ್ರಮದಂತೆ ಫೆಬ್ರವರಿ 08ರಂದು ಬೆಳಗ್ಗೆ ಹುತ್ತಕ್ಕೆ ಎಳೆ ಹಾಕುವುದು, ಜಾಂಡೇವು ಎತ್ತುವುದರ ಮೂಲಕ ಕಾಡುಗೊಲ್ಲರ ಸಾಂಸ್ಕೃತಿಕ ಯಾತ್ರೆಗೆ ಚಾಲನೆ ಸಿಕ್ಕಿದೆ. 3ದಿನಗಳ ಕಾಲ ಸಾಗಿ ಹಂಪಿಯ ತುಂಗಭಧ್ರೆ ನದಿ ತಲುಪಿದೆ. ವಿಶ್ವ ವಿಖ್ಯಾತ ಹಂಪಿಯಲ್ಲಿ ಕಾಡುಗೊಲ್ಲರ ಆರಾಧ್ಯ ದೈವಗಳ ಗಂಗಾಪೂಜೆ, ಅಭಿಷೇಕ ಮತ್ತು ವಿಶೇಷ ಪೂಜೆ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಸೃಷ್ಠಿಸಿದೆ.
ಈ ಅಪರೂಪದ ಆಚರಣೆ ಕಾಡುಗೊಲ್ಲ ಸಮುದಾಯಕ್ಕೂ ವಿಜಯನಗರ ಸಾಮ್ರಾಜ್ಜಕ್ಕೂ ಸಾಂಸ್ಕೃತಿಕ ನಂಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 80ವರ್ಷಗಳ ಹಿಂದೆ ಆಚರಿಸಿದ್ದ ಈ ಆಚರಣೆಗೆ ಈ ವರ್ಷ ಮರು ಚಾಲನೆ ನೀಡಲಾಗಿದೆ. ಹಂಪಿಯಲ್ಲಿ ಸ್ನಾನ, ಪೂಜೆ ಮುಗಿಸಿ ಹಂಪಿ ವಿರುಪಾಕ್ಷನ ದರ್ಶನ ಪಡೆದ ಕಾಡುಗೊಲ್ಲ ಸಮುದಾಯದ ಜನ ಮತ್ತೆ ಮೂರು ದಿನಗಳ ಕಾಲ ಸಂಚರಿಸಿ ಗ್ರಾಮಕ್ಕೆ ಮರಳಿದ್ದಾರೆ.
ಯಾವುದೇ ಅಡೆತಡೆಯಿಲ್ಲದೆ ಕಾರ್ಯಕ್ರಮ ಯಶಸ್ವಿಯಾಗಿದೆ. ಇಷ್ಟು ದೂರದ ಪಯಣದಲ್ಲಿ ಅಲ್ಪ ತೊಂದರೆಯೂ ಆಗದಿರುವುದಕ್ಕೆ ದೈವಶಕ್ತಿಯೇ ಕಾರಣ. ಇನ್ನು ನಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗಿ, ನಾಡಿಗೂ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿಯಾಗುತ್ತದೆ ಎಂಬುದು ಕಾಡುಗೊಲ್ಲ ಸಮುದಾಯದವರ ನಂಬಿಕೆ. ಕಾಡುಗೊಲ್ಲರ ವಿಶಿಷ್ಟ ವೇಷಭೂಷಣ, ಸಾಂಸ್ಕೃತಿಕ ಪರಂಪರೆ, ಇಂದಿಗೂ ಆಚರಿಸಲ್ಪಡುವ ಭಕ್ತಿ ನಿಷ್ಠೆ ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆಯ ಕೈಗನ್ನಡಿ.
ಚಿತ್ರಗಳು : ನಿಸರ್ಗ ಗೋವಿಂದರಾಜು