ಕಾವ್ಯ

ಮೋಡಗಳ ಮರೆಯಾದ ಅಕ್ಷರದೀಶ್ವರ – ನುಡಿನಮನ

ಕ್ರಾಂತಿಯಲ್ಲಿ
ವಿವೇಚನೆಗಳ ಕಾಂತಿ
ಮೋಡಗಳ ಮರೆಯಲ್ಲಿ
ಭ್ರಾಂತಿಗಳ ಕಳೆ ತಗೆದು
ಶಾಂತವಾಯಿತೇ…

ಮಠ …ಖಾಲಿ
ಅನುಭವದ ಅಂಗಣದ
ಪಡಸಾಲೆಯಲ್ಲಿ ಓದಿ ಬರೆದ
ಕಾಗದದ ಚೂರುಗಳು
ಚರಿತೆಯ ಪುಟಗಳು
ಚಾರಿತ್ರಿಕ ಸತ್ಯದ ಕಥೆಗಳಾಗಬೇಕು

ಅದೇಷ್ಟೋ..ನೊಂದ ಬೆಂದ
ಮನಗಳಿಗೆ ಆಸರೆಯಾಗಿ
ಇದ್ದಷ್ಟು ದಿವಸ
ಬಿತ್ತಿದ ಬೀಜಗಳ ಫಲ
ಕೊಟ್ಟ ಬದ್ದತೆಯ ಬೇಸಾಯಗಾರ
ವೈಚಾರಿಕ ನಿಲುವುಗಳ
ಬಂಡಾಯಗಾರ

ಗೋನಾಳದ ಗುರು
ಜಂಗಮನಾಗಿ ಬೆರೆಯಲಿಲ್ಲ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ…
ಕಟು ಸತ್ಯವನ್ನ ಹೇಳಿ ಕೊಟ್ಟು
ನುಡಿದಂತೆ ನಡೆದ
ನಗು ಮೊಗದ ಹಮ್ಮೀರ

ಕಟ್ಟಿದ ಮಠವ ಬಿಟ್ಟು
ಉಟ್ಟ ಬಟ್ಟೆಯ ಮೇಲೆ
ಹೇಳದೆ ಕೇಳದೆ ಹೋದ
ದೂರ….
ದಾರಿಯಲ್ಲಿ ನಿನ್ನ ನೆನಪುಗಳ
ಮಲ್ಲಿಗೆ ನರಳಿ ಅಳತಾವ
ಜೋರ…
ಕಾಣದ ಕಡಲಿನಲಿ
ಸೇರಿದೆ ನೀನು
ಹಂಬಲಿಸುವ ಮನಗಳ
ಸಂತೈಸುವರು
ಯಾರ….

ನೀ ಕಟ್ಟಲಿಲ್ಲ ಚೀಟಿ
ನೀ ಬಿಸಿಲಿಲ್ಲ ಚಾಟಿ
ನೀ ಹೋದಿರೆಲ್ಲ ಒಂಟಿ
ನಿಮಗಿಲ್ಲ ಯಾರು ಸಾಟಿ
ನಿಮಗೆ ನೀವೆ ಸರಿಸಾಟಿ

ನೀ ಬರೆದ ಬರವಣಿಗೆ
ನಮ್ಮೆಲ್ಲರ ಬದುಕಿನ ದಾಟಿ

— ಗಂಗಾಧರ.ಎಂ.ಬಡಿಗೇರ

Related Articles

Leave a Reply

Your email address will not be published. Required fields are marked *

Back to top button