ಪಕೋಡಾ ಜಾತ್ರೆ : ‘ಕೈ’ ಮಿಲಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು!
ಚಿತ್ರದುರ್ಗ: ಪಕೋಡಾ ಮಾರುವುದು ಸಹ ಉದ್ಯೋಗ ಎಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ ಚಿತ್ರದುರ್ಗದಲ್ಲಿ ಪಕೋಡಾ ಜಾತ್ರೆ ಮೂಲಕ ವಿಭಿನ್ನ ಪ್ರತಿಭಟನೆಗೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಸಜ್ಜಾಗಿತ್ತು. ಆದರೆ, ಪಕೋಡಾ ಜಾತ್ರೆ ಆರಂಭಕ್ಕೂ ಮುನ್ನವೇ ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಭಿನ್ನಮತ ಸ್ಫೋಟಗೊಂಡಿತು.
ಒನಕೆ ಓಬವ್ವ ವೃತ್ತದಲ್ಲಿ ಪಕೋಡಾ ಜಾತ್ರೆ ಬದಲು ಕೈ ಕಾರ್ಯಕರ್ತರೇ ಕೈ ಕೈ ಮಿಲಾಯಿಸಲು ಮುಂದಾಗಿದ್ದು ತಳ್ಳಾಟ, ನೂಕಾಟ, ವಾಗ್ವಾದದಲ್ಲಿ ತೊಡಗಿದ್ದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅದ್ಯಕ್ಷ ಮಧು ಪಾಲೇಗೌಡ ವಿರುದ್ಧ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅದ್ಯಕ್ಷ ಹಸನ್ ಮತ್ತು ಪದಾಧಿಕಾರಿಗಳು ಕಿಡಿಕಾರಿದರು.
ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ಬದಲಾಗಿ ಉದ್ದೇಶಪೂರ್ವಕ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಹಸನ್ ಅಂಡ್ ಟೀಮ್ ಆರೋಪಿಸಿತು. ಹೀಗಾಗಿ, ಪಕೋಡಾ ಜಾತ್ರೆಗೆ ಕೆಲಕಾಲ ಬ್ರೇಕ್ ಬಿದ್ದಿತು. ಬಳಿಕ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಿಲ್ಲಾ ನಾಯಕರು ಸಭೆ ನಡೆಸಿ ಸಮಾಧಾನಗೊಳಿಸಿದರು. ಹೀಗಾಗಿ, ಮೂರು ತಾಸುಗಳ ಕಾಲ ವಿಳಂಬವಾಗಿ ಪಕೋಡಾ ಜಾತ್ರೆಯನ್ನು ಆರಂಭವಾಯಿತು.
ಜಾಗೃತರಾಗಿ ಯುವಕರೇ ಬಿಜೆಪಿಯನ್ನು ನಂಬಬೇಡಿ ಎಂದು ಘೋಷಣೆ ಕೂಗಿದರು. ಪಕೋಡಾ ಮಾಡಿ ಹಂಚುವ ಮೂಲಕ ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ವಿಫಲವಾಗಿರುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.