ಪ್ರಮುಖ ಸುದ್ದಿಸಂಸ್ಕೃತಿ

ನಗು ಜಗತ್ತಿನ ದುಬಾರಿ ಔಷಧಿ- ಗುಂಡಣ್ಣ ಡಿಗ್ಗಿ

ಯಾದಗಿರಿ, ಶಹಾಪುರಃ ನಗು ನಗುತ್ತ ಬದುಕು ಸಾಗಿಸೋಣ ಹಾಗಂತ ಬದುಕು ನೋಡುಗರ ಕಣ್ಣಿಗೆ ನಗೆಪಾಟಲು ಆಗದಂತೆ ಇರೋಣ. ನಗು ನಮ್ಮ ಆರೋಗ್ಯಕ್ಕೆ ಒಂದು ಉತ್ತಮ ಔಷಧಿ. ಅದು ಒತ್ತಾಯ, ಒತ್ತಡದಿಂದ ಬರಲಾರದು ಅದು ಮನದ ಅಂತರಾಳದಿಂದ ಆಸ್ವಾದಿಸಿದಾಗ ಮಾತ್ರ ಮನಸ್ಸಿಗೆ ಮುದ ನೀಡುತ್ತದೆ ಎಂದು ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹೇಳಿದರು.

ದೋರನಹಳ್ಳಿ ಗ್ರಾಮದ ಶ್ರೀ ಶಾಂಭವಿ ಮಾತಾ ಚಿಕ್ಕಮಠದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಮ್ಮ ಹಾಸ್ಯ ಪ್ರಜ್ಞೆ ಕಲೆಯ ಮೂಲಕ ನೆರೆದಿದ್ದ ಜನಸ್ತೋಮವನ್ನು ನಗೆ ಗಡಲಲ್ಲಿ ತೇಲಿಸಿದ ಅವರು, ನಮ್ಮ ನಿತ್ಯ ಜೀವನದಲ್ಲಿ ನಡೆಯುವ ಸಾಮಾನ್ಯ ಸನ್ನಿವೇಶಗಳನ್ನೆ ವಿವರಿಸುತ್ತಾ ನಗೆ ಚಟಾಕಿ ಹಾರಿಸಿದರು. ನಗುವಿಗೆ ಗಂಡು, ಹೆಣ್ಣು, ದೊಡ್ಡವರು, ಚಿಕ್ಕವರು, ಬಡವ, ಶ್ರೀಮಂತ ಎಂಬ ಯಾವುದೆ ಬೇಧ ಭಾವವಿಲ್ಲ. ನಗು ಒಂದು ಸ್ವಾಭಾವಿಕ ಬದುಕಿನ ಅಂಗ. ಸದಾ ಮುಕ್ತ ಮನಸ್ಸಿನಿಂದ ನಗುವನ್ನು ಆಸ್ವಾದಿಸುವವರು ಉಲ್ಲಾಸ, ಉತ್ಸಾಹ, ಚೈತನ್ಯದಿಂದ ಇರುತ್ತಾರೆ.

ಅವರ ನೆಮ್ಮದಿಗೆ ಯಾವುದೆ ಭಂಗವಿರುವುದಿಲ್ಲ. ಎಂತಹ ಕಷ್ಟದ ಸಂದರ್ಭಗಳನ್ನು ಸಹ ಅವರು ಎದೆಗುಂದದೆ ಪರಿಹರಿಸಿಕೊಂಡು ಬದುಕಿನ ಬಂಡಿಯನ್ನು ಸಾಗಿಸುತ್ತಾರೆ.

ನಗು ಒಂದು ಬೆಲೆ ಕಟ್ಟಿ ಕೊಂಡುಕೊಳ್ಳಲಾಗದ ಜಗತ್ತಿನ ಅತಿ ದುಬಾರಿ ಔಷಧಿ. ನಗದೆ ಇರುವವರು ಜೀವಂತ ಶವ ಇದ್ದಂತೆ. ಈಗಿನ ಯುವ ಜನತೆ ಮೊಬೈಲ್ ಎಂಬ ಬೇತಾಳವನ್ನು ಕಟ್ಟಿಕೊಂಡಿದ್ದಾರೆ. ಇದರಿಂದ ನಮ್ಮ ಸಂಸ್ಕøತಿ ಆಚಾರ, ವಿಚಾರ, ಪುರಾಣ, ಪುಣ್ಯಕತೆಗಳು, ಮಠ, ಮಂದಿರಗಳ ಭಕ್ತಿ, ಭಾವ ದಿನೆ ದಿನೆ ಕಡಿಮೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಜಗವೆಲ್ಲ ಮೊಬೈಲ್ ಮಾಯೆಯಲ್ಲಿ ಮುಳುಗಿರುವ ಸಂದರ್ಭದಲ್ಲಿ ಪುರಾಣ, ಪ್ರವಚನ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಚಿಕ್ಕಮಠದ ಶ್ರೀಗಳ ಕಾರ್ಯ ಶ್ಲಾಘನೀಯ.

ಡಿಡಿಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಮಾತನಾಡಿದರು. ಈ ಸಂದರ್ಭದಲ್ಲಿ ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಂಡಪ್ಪ ತುಂಬಗಿ, ಪಂಡಿತ ಅನ್ನದಾನ ಶಾಸ್ತ್ರೀಗಳು, ಶ್ರೀಧರ ಆಚಾರ್ಯ ಅಳ್ಳೋಳ್ಳಿ, ಕಲ್ಲಯ್ಯ ಗವಾಯಿಗಳು, ಪರಮಾನಂದ ಹೂಗಾರ ಸೇರಿದಂತೆ ಇತರರು ಇದ್ದರು. ಹಾಸ್ಯ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ವೈರಾಗ್ಯ ಅಕ್ಕಮಹಾದೇವಿ ಕುರಿತು ಪ್ರವಚನ ಎಂದಿನಂತೆ ಮುಂದುವರೆಯಿತು.

Related Articles

Leave a Reply

Your email address will not be published. Required fields are marked *

Back to top button