ಕಥೆ

ಕಲ್ಲಿನಿಂದ ಹೊಡೆದವನಿಗೆ ಚಿನ್ನದ ನಾಣ್ಯ ನೀಡಿದ ರಾಜ ಏಕೆ ಗೊತ್ತಾ.?

ಯತಾರ್ಥ ಮಾನವೀಯತೆ

ಕಪಿಲ ನಗರದ ಮಹಾರಾಜ ಒಂದುದಿನ ಬೆಳಿಗ್ಗೆ ತನ್ನ ಕೈ ತೋಟದಲ್ಲಿ ಕುಳಿತು ಮಂತ್ರಿ, ಸೇನಾಧಿಪತಿಗಳ ಜತೆ ಗಹನವಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದ. ಕೈತೋಟದ ಸುತ್ತಲೂ ಎತ್ತರವಾದ ಬಲಿಷ್ಠ ಗೋಡೆಯಿತ್ತು. ಗೋಡೆಯ ಆ ಬದಿಯಲ್ಲಿ ಬಯಲು ಪ್ರದೇಶವಿತ್ತು. ಒಬ್ಬ ವೃದ್ಧ ತನ್ನ ಮೊಮ್ಮಗನ ಜತೆಯಲ್ಲಿ ಆ ಕಡೆ ಬರುತ್ತಿದ್ದ.

ತಾತ ಹಾಗೂ ಹುಡುಗನಿಗೆ ತುಂಬಾ ಹಸಿವಾಗುತ್ತಿತ್ತು. ರಾತ್ರಿಯಿಂದ ಉಪವಾಸ, ಗೋಡೆಯ ಪಕ್ಕದಲ್ಲಿ ನಡೆದು ಬರುವಾಗ ರಾಜನ ಕೈ ತೋಟದಲ್ಲಿರುವ ದೊಡ್ಡ ಮಾವಿನ ಕೊಂಬೆಯೊಂದು ಹೊರಗಡೆ ಬಾಗಿತ್ತು. ಅದರಲ್ಲಿ ಫಲಿತ ಮಾವಿನ ಹಣ್ಣುಗಳಿದ್ದವು.

ವೃದ್ಧ ಅಲ್ಲೇ ಬಿದ್ದಿದ್ದ ಒಂದು ಕಲ್ಲೆತ್ತಿಕೊಂಡು ಎತ್ತರದ ಕೊಂಬೆಗೆ ಹೊಡೆದ. ಮಾವಿನಹಣ್ಣು ಕೆಳಗೆ ಬಿತ್ತು. ಹುಡುಗ ಖುಷಿಯಿಂದ ಎತ್ತಿಕೊಂಡು ತಿನ್ನತೊಡಗಿದ. ಆದರೆ ಗೋಡೆಯ ಆ ಬದಿಯಲ್ಲಿ ಕುಳಿತಿದ್ದ ರಾಜನ ಹಣೆಗೆ ಕಲ್ಲು ಬಡಿದು ಹಣೆ ಸೀಳಿತು. ಮಂತ್ರಿ ಹಾಗೂ ಸೇನಾಧಿಪತಿ ಗಾಬರಿಗೊಂಡರು. ಕೂಡಲೇ ಗಾಯಕ್ಕೆ ಪಟ್ಟಿ ಕಟ್ಟಿದರು.

ಹೊರಗೆ ಬಂದು ಇಣುಕಲಾಗಿ ಮುದುಕ ಹಾಗೂ ಹುಡುಗ ಕುಳಿತಿದ್ದರು. ಸೇನಾಧಿಪತಿ ಅವರಿಬ್ಬರನ್ನೂ ಹಿಡಿದು ರಾಜನೆದುರು ನಿಲ್ಲಿಸಿದರು. ಅವರಿಬ್ಬರೂ ವಂದಿಸಿ ಕ್ಷಮೆ ಬೇಡಿದರು.

ತಕ್ಷಣವೇ ರಾಜ ಮುಗುಳ್ನಕ್ಕು ಆ ಬಡವನಿಗೆ ನೂರು ಚಿನ್ನದ ನಾಣ್ಯವನ್ನು ಕೊಡುವಂತೆ ಮಂತ್ರಿಗೆ ಸೂಚಿಸಿದ. ಇದನ್ನು ಕಂಡು ಸೇನಾಧಿಪತಿಗೆ ವಿಚಿತ್ರ ಎನಿಸಿತು. ‘ಶಿಕ್ಷೆ ಕೊಡಬೇಕಾದಲ್ಲಿ ಸುವರ್ಣ ವರಹ ಯಾಕೆ ಕೊಡುವಿರಿ?’ ಎಂದಾತ ಗೊಣಗಿದ.

“ತಕ್ಷಣ ರಾಜನೆಂದ ‘ವೃಕ್ಷಕ್ಕೆ ಕಲ್ಲು ಹೊಡೆದರೆ ಅದು ಸಿಹಿಯಾದ ಹಣ್ಣು ಕೊಡುತ್ತದೆ. ನಾನೊಂದು ದೇಶದ ರಾಜನಾಗಿ ಕಲ್ಲು ಹೊಡೆದವರಿಗೆ ಶಿಕ್ಷೆ ಕೊಟ್ಟರೆ ಆ ಮರಕ್ಕಿಂತ ಕೀಳಾಗುವುದಿಲ್ಲವೇ?’ ಸೇನಾಧಿಪತಿ ನಾಚಿಕೆಯಿಂದ ತಲೆತಗ್ಗಿಸಿದ.”

ನೀತಿ :– ಕೋಪಕ್ಕೆ ಕನಿಕರವಿದ್ದಾಗ ಮದ್ದು. ಸಿಟ್ಟು ಎಂಬುದು ಕಡು ವೈರಿ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button