ಸಾಹಿತ್ಯ

ಸಂಶೋಧಕ ಸೀತಾರಾಮ ಜಾಗಿರದಾರರಿಗೆ ರಾಜ್ಯೋತ್ಸವ ಗರಿ

ಸಂಶೋಧಕ ಸೀತಾರಾಮ ಜಾಗಿರದಾರರಿಗೆ ರಾಜ್ಯೋತ್ಸವ ಗರಿ

ಕನ್ನಡ ನಾಡಿನಲ್ಲಿ ಸಾಹಿತ್ಯಕವಾಗಿ ಅತ್ಯಂತ ಫಲವತ್ತಾದ ಕೃಷಿಯನ್ನು ಮಾಡಿದ ಅಪರೂಪದ ಸಂಶೋಧಕರಲ್ಲಿ ಸುರಪುರ ತಾಲೂಕಿನ ಹೂವಿನಹಳ್ಳಿಯ(ಸದ್ಯ ಮೈಸೂರು ನಿವಾಸಿ) ಸೀತಾರಾಮ್ ಜಾಗಿರದಾರ ಒಬ್ಬರು. ದಿ.ಕಪಟರಾಳ ಕೃಷ್ಣರಾಯರ ತರುವಾಯದ ಹಿರಿಯ ಸಂಶೋಧಕರೆಂದರೆ ಸೀತಾರಾಮ್ ಜಾಗಿರದಾರ್. ನೇರ ನಿಷ್ಠುರ ನಡೆಯಿಂದಾಗಿ ಸಾಹಿತ್ಯ ಲೋಕದ ನೋಟಕ್ಕೆ ತಕ್ಷಣ ಕಾಣದವರು.

ಸಾಹಿತ್ಯಿಕವಾಗಿ ಕವಿರಾಜಮಾಗ್ರ್ಗಂ, ಛಂದೋರಚನಾ ಸಂಶೋಧನೆಗಳು, ಗ್ರಂಥ ಸಂಪಾದನೆ, ದೇವಪುರದ ಮಹಾಕವಿ ಲಕ್ಷ್ಮೀಶ, ಏಕಾಕ್ಷರ ನಿಘಂಟು, ಸಾಪೇಕ್ಷ, ಸಾಪೇಕ್ಷ-2,ಕುಮಾರವ್ಯಾಸ-ಒಂದು ಅಧ್ಯಯನ, ಅಲ್ಲಮಪ್ರಭು, ವೀರಶೈವ ಸಾಹಿತ್ಯ ಅಧ್ಯಯನ, ಪರ್ಷಿಯನ್ ಮತ್ತು ಅರಬಿಕ್ ಶಾಸನಗಳು, ಮಿತಾಕ್ಷರದ ವಿಜ್ಞಾನೇಶ್ವರರು ಹಾಗೂ ಮರ್ತೂರಿನ ಶಾಸನ, ಕರ್ನಾಟಕ ಎಪಿಗ್ರಾಫಿಯಾ(ಸಂಪುಟ-9), ಶ್ರವಣ ಬೆಳಗೊಳದ ಶಾಸನಗಳು,ಛಂದಶ್ಯಾಸ್ತ್ರ, ಕನ್ನಡ ಕೈಪಿಡಿ ಸೇರಿದಂತೆ ಸಾಹಿತ್ಯ ಪರಿಷತ್ ಪರಿಷತ್ಪತ್ರಿಕೆಯಲ್ಲಿ ನಿರಂತರವಾಗಿ 4 ದಶಕಗಳಿಂದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ವಿವಿಧ ವಿದ್ವಾಂಸರ ಅಭಿನಂದನ ಗ್ರಂಥಗಳಲ್ಲಿ ಇವರ ಲೇಖನಗಳನ್ನು ಕಾಣಬಹುದು.

ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭುಗಳ ಜೀವನ ವೃತ್ತಾಂತದ ಬಗ್ಗೆ ಬರೆದ “ಅಲ್ಲಮಪ್ರಭುಗಳು”ಕೃತಿಯಲ್ಲಿ ಅವರ ತಂದೆ, ತಾಯಿ, ಜನ್ಮಸ್ಥಳ, ಕೊನೆಗೆ ಸಮಾಧಿಸ್ಥಾನದವರೆಗಿನ ಬಹುಮುಖ್ಯ ಸಂಶೋಧನಾ ಕಾರ್ಯವನ್ನು ದಾಖಲಿಸಿದ್ದಾರೆ. ಅಲ್ಲಮಪ್ರಭುಗಳ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ “ಬಳ್ಳಿಗಾವಿ” ಎಂದು ವಿದ್ವಾಂಸರು ದಾಖಲಿಸಿದ್ದಾರೆ. ಆದರೆ ಜಾಗಿರದಾರರು ಸಾಕಷ್ಟು ಸಾಕ್ಷ್ಯ ಸಹಿತ ವಿವರಗಳನ್ನು ದಾಖಲಿಸಿ ಅಲ್ಲಮಪ್ರಭುಗಳ ಜನ್ಮಸ್ಥಳ ಸುರಪುರ ತಾಲೂಕಿನ ಹಗರಟಗಿ ಗ್ರಾಮ ಎಂದು ಸ್ಪಷ್ಟಪಡಿಸಿದ್ದಾರೆ.

ವೀರಶೈವ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಜಾಗಿರದಾರರು ದೇವರ ದಾಸಿಮಯ್ಯನ ದೇಶ, ಕಾಲ, ಧರ್ಮದ ಪರಿಸರದ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಪ್ರಭುದೇವರ ರಗಳೆ, ಕೆಂಭಾವಿ ಭೋಗಣ್ಣನವರ ರಗಳೆಯ ಕುರಿತು ಅಧ್ಯಯನ ನಡೆಸಿದ್ದಾರೆ.. ಬಸವಣ್ಣನವರ ಕುರಿತು ಶಾಸನಗಳಲ್ಲಿ ದಂಡನಾಯಕ ಬಸವೇಶ್ವರ, ಬಸವಣ್ಣನವರ ಮುಂದಿದ್ದ ಆದರ್ಶ ಗುರು, ಹೀಗೆ ಸಂಗತಿಗಳನ್ನು ತಿಳಿಸಿದ್ದಾರೆ.

ಗ್ರಂಥಸಂಪಾದನಾ ಶಾಸ್ತ್ರದಲ್ಲಿ ಹಸ್ತಪ್ರತಿಗಳ ಪಾತ್ರ ಅತ್ಯಮೂಲ್ಯ. ಇವುಗಳ ಶುದ್ಧಪಾಠ ಅಪೇಕ್ಷಣೀಯವಾದುದು. ಇವುಗಳ ರಕ್ಷಣೆ, ಸಂಗ್ರಹ, ಸಂಶೋಧನೆ ಕಾರ್ಯವನ್ನು ಎಲ್ಲರೂ ಆಸಕ್ತಿಯಿಂದ ಮಾಡಿದಾಗ ಶಾಸ್ತ್ರ ಸಂಪಾದನೆಗೆ ಹೆಚ್ಚಿನ ಸಹಾಯಕವಾಗುತ್ತದೆ ಎನ್ನುತ್ತಾರೆ ಜಾಗಿರದಾರರು.
ಏಕಾಕ್ಷರ ನಿಘಂಟು ಹಾಗೂ ನಾನಾರ್ಥ ರತ್ನಾಕರ ಮಾಲಿಕೆ ಕೃತಿಯಲ್ಲಿ “ಏಕಾಕ್ಷರ ನಿಘಂಟು” ಸ್ವರ ವ್ಯಂಜನಗಳು ಬಳಕೆಯಾಗಿವೆ. ಪದಸೂಚಿ ಪತ್ರಿಕೆ ಅಂತ್ಯದಲ್ಲಿ ನೀಡಿರುವದು ಬಹಳ ಉಪಯುಕ್ತವೆನಿಸುತ್ತದೆ. ಕವಿರಾಜಮಾರ್ಗದ ಕುರಿತು ವಿಸ್ತøತ ಅಧ್ಯಯನ ನಡೆಸಿದ ಜಾಗಿರದಾರರು ಮೈಸೂರು ವಿ.ವಿ.ಹೊರತಂದಿರುವ ಕವಿರಾಜಮಾರ್ಗ ಕೃತಿಯು ಈವರೆಗೆ 14 ಆವೃತ್ತಿ ಕಂಡಿದ್ದು, 14000 ದಾಖಲೆಯ ಪ್ರತಿ ಮಾರಾಟವಾಗಿವೆ. ಸದ್ಯ 15 ನೇ ಆವೃತ್ತಿಗೂ ಬೇಡಿಕೆಯಿದೆ.

ಇವರ ಸಂಪಾದಕತ್ವದಲ್ಲಿ ಹಂಪಿ ವಿಶ್ವವಿದ್ಯಾಲಯವು ಹೊರತಂದಿರುವ ಹೈದ್ರಾಬಾದ್ ಕರ್ನಾಟಕ ಪರ್ಷಿಯನ್ ಮತ್ತು ಅರಬಿಕ್ ಶಾಸನಗಳು ಸಂಪುಟ ಹೊರತಂದಿದ್ದಾರೆ. ಇನ್ನು ಮರತೂರಿನ ವಿಜ್ಞಾನೇಶ್ವರನ ಕುರಿತು ಹಾಗೂ ಚಾವುಂಡರಾಯ ಮತ್ತು ನೇಮಿಚಂದ್ರರ ಮೇಲೆ ವಿಶೇಷ ಬೆಳಕು ಚೆಲ್ಲಿದ್ದಾರೆ. ಬಸವಣ್ಣನ ಪತ್ನ ನೀಲಾಂಬಿಕೆಯು ಕೊಂಡಗುಳಿ ಕೇಶಿರಾಜನ ಸಹೋದರಿ ಎಂದು ತಿಳಿಸುತ್ತಾರೆ. ಪೊನ್ನನ ಭುವನೈಕ ರಾಮಾಭ್ಯುದಯ ಕುರಿತು ನಡೆದಿದ್ದ ಸಂಶೋಧನೆಗಳು ಸಮರ್ಪಕವಾಗಿ ನಡೆದಿಲ್ಲವೆಂಬ ವಿಷಾದ ವ್ಯಕ್ತಪಡಿಸುತ್ತಾರೆ. ಕಾವ್ಯ ವಿಮರ್ಶೆಯನ್ನು ಮಾಡುವಾಗ ಕವಿ,ಕೃತಿ,ಕಾಲವನ್ನು ಪರಿಗಣನೆಗೆ ತೆಗೆದುಕೊಂಡು ವಿಮರ್ಶಿಸಬೇಕೆಂದು ಹೇಳುತ್ತಾರೆ. ಮೈಸೂರು ವಿ.ವಿಯು ಹೊರತಂದಿರುವ ಕರ್ನಾಟಕ ಎಪಿಗ್ರಾಫಿಯ ಅಷ್ಟೂ ಸಂಪುಟಗಳಿಗೆ ಶಾಸನ ಸಹಾಯಕರಾಗಿ ದುಡಿದಿರುವ ಜಾಗಿರದಾರರು ಇತ್ತೀಚೆಗೆ ಹೊರತಂದಿರುವ 9 ನೇ ಸಂಪುಟವನ್ನು ಸಂಪೂರ್ಣವಾಗಿ ಪುನರ್ ಪರಿಷ್ಕೃತಗೊಳಿಸಿದ್ದಾರೆ.

ಕರ್ನಾಟಕದೊಂದಿಗೆ ಚೋಳರ ಸಂಬಂಧಗಳ ಕುರಿತು ಬರೆದಿರುವ ಜಾಗಿರದಾರರು ಕೆಲವು ಹೊಸ ಸಂಗತಿಗಳನ್ನು ಉಲ್ಲೇಖಿಸುತ್ತಾರೆ. ಕ್ರಿ.ಶ.598-99 ರ ಚಾಲುಕ್ಯ ಚಕ್ರವರ್ತಿ ಮಂಗಲೀಶನ ಮಹಾಕೂಟದ(ಬಾದಾಮಿ ಹತ್ತಿರ) ಶಾಸನದ ಪ್ರಕಾರ ಚಾಳುಕ್ಯರು ಸೋಲಿಸಿದ ರಾಜಮನೆತನಗಳಲ್ಲಿ ಚೋಳ ಮನೆತನವೂ ಒಂದು. ಚೋಳರ ಚರಿತ್ರೆ ಬರದವರಾರೂ ಈ ಸಂಗತಿ ಗಮನಿಸಿಲ್ಲ ಎನ್ನುತ್ತಾರೆ. “ಛಂದೋರಚನಾ ಸಂಶೋಧನೆಗಳು” ಕೃತಿಯು ಹೆಸರೇ ಸೂಚಿಸುವಂತೆ ಛಂದಸ್ಸಿಗೆ ಸಂಬಂಧಪಟ್ಟ ಆರು ಲೇಖನಗಳ ಸಂಕಲನವಾಗಿದೆ. ಪಂಪನ ಆದಿಪುರಾಣ ಸಮಾಪ್ತಿಗೊಳಿಸಿದ ಸಮಯವನ್ನು ಕುರಿತು “ಸಾಪೇಕ್ಷ”ಗ್ರಂಥದಲ್ಲಿ ವಿವರವಾಗಿ ವಿವರಣೆ ನೀಡಿದ್ದಾರೆ.

ಸಾಪೇಕ್ಷ-2 ರಲ್ಲಿ ಪಂಪ ಮೊದಲು ಬರೆದ ಕಾವ್ಯ ಯಾವುದು? ಪಂಪ ಬನವಾಸಿಯವನೇ? ಪಂಪಭಾರತದ ಪ್ರತಿನಾಯಕನೊಂದಿಗೆ ಸಮೀಕರಿಸಿದ್ದು ಯಾರನ್ನು? ಪಂಪಕವಿಯು ಬನವಾಸಿಯವನೆಂಬ ಗ್ರಹಿಕೆ ಆಪಾತ ಮಧುರವೇ ಹೊರತು ವಾಸ್ತವವಲ್ಲ ಎಂಬುದನ್ನು ಆಗ್ರಹಪೂರ್ವಕವಾಗಿ ಒತ್ತುಕೊಟ್ಟು ಸೀತಾರಾಮ್ ಜಾಗಿರದಾರ್ ಪ್ರತಿಪಾದಿಸಿದ್ದಾರೆ. ಪಂಪಭಾರತದ ಪ್ರತಿನಾಯಕನಾದ ದುರ್ಯೋಧನನೊಂದಿಗೆ ತಕ್ಕೋಲಂ ಯುದ್ದಧಲ್ಲಿ ಮಡಿದ ಚೋಳದೊರೆ ರಾಜಾದಿತ್ಯಮಹಾರಾಜನನ್ನು ಸಮೀಕರಿಸಲಾಗಿದೆ ಎಂಬ ಮಾತು ಚಿಂತನೀಯವಾಗಿದೆ. ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್, ಉರ್ದು, ತೆಲುಗು, ತಮಿಳು, ಮಲಯಾಳಿ, ಅರಬಿಕ್ ಭಾಷೆಗಳನ್ನು ಬಲ್ಲವರಾದ್ದರಿಂದ ಇವರ ಸಂಶೋಧನೆಯಲ್ಲಿ ಹೆಚ್ಚು ಗಟ್ಟಿತನವನ್ನು ಕಾಣಬಹುದು ಇಂತಹ ನಾಡಿನ ಬಹುದೊಡ್ಡ ವಿದ್ವಾಂಸರ ಬಗ್ಗೆ ಉಪನ್ಯಾಸಕ ವಿಶ್ವನಾಥಯ್ಯ ಎಸ್. ಚತುರಾಚಾರ್ಯಮಠ ನಾಯ್ಕಲ್ ಅವರು ಜಾಗಿರದಾರರ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ “ಸೀತಾರಾಮ್ ಜಾಗಿರದಾರ-ಒಂದು ಸಾಹಿತ್ಯಿಕ ಅಧ್ಯಯನ” ಎಂಬ ಮಹಾಪ್ರಬಂಧವನ್ನು ಅಭ್ಯಸಿಸುತ್ತಿದ್ದಾರೆ. ಎಂದಿಗೂ ಪ್ರಶಸ್ತಿ ಸನ್ಮಾಗಳಿಗೆ ಆಸೆ ಪಡದ ಜಾಗಿರದಾರರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವದು ನಮ್ಮಂತಹ ಯುವ ಲೇಖಕರಲ್ಲಿ ಹೊಸ ಹುರುಪನ್ನು ತಂದು ಕೊಡುತ್ತದೆ.

ಲೇಖಕರುಃ ಪಾಟೀಲ.ಬಸನಗೌಡ. ಹುಣಸಗಿ.
9900771427

Related Articles

2 Comments

  1. ಸೀತಾರಾಮ ಜಾಗೀರದಾರರು ಕನಾ೯ಟಕದ ಬಹುದೊಡ್ಡ ಸಂಶೋಧಕರು , ಮಹಾಕವಿ ಲಕ್ಷ್ಮಿeಶ ಸುರಪುರ ತಾಲೂಕಿನ ದೇವಪುರದವನೆಂದು ಸಾಬಿತುಪಡಿಸಿದವರು , ಇದರ ಸಲುವಾಗಿ ಹಳೇ ಮೈಸೂರಿನ ಸಾಹಿತಿಗಳನ್ನು ಎದುರು ಹಾಕಿಕೊಂಡವರು .ಇದೇ ವಿಷಯವಾಗಿ ನನಗೂ , ಹಿರೇಮಗಳೂರು ಕಣ್ಣನ್ ರಿಗೂ ದೊಡ್ಡ ವಾದ ವಿವಾದಗಳೆ e ನಡೆದವು , ತರಂಗದಲ್ಲಿ ಈ ಬಗ್ಗೆ ಬಹು ದೊಡ್ಡ ಚಚೆ೯ ಯೇ ನಡೆಯಿತು , ನಂತರ ಲಕ್ಷ್ಮೀಶನಿಂದಲೇ ಕಣ್ಣನ್ ಅವರು ಮತ್ತು ನಾನು ಆತ್ಮಿಯರಾದೇವು , ಆದರೆ ಜಾಗೀರದಾರರಿಗೆ ಅವರ ಸಾಧನೆಗಾಗಿ ಸಿಕ್ಕ ಪ್ರೋತ್ಸಹ ತುಂಬ ಕಡಿಮೆ , ನೇರ ನಿಷ್ಟುರ ಪ್ರಾಮಾಣಿಕರಿಗೆ ಏನು ಬೆಲೆಯಿದೆ ಈ ಸಮಾಜದಲ್ಲಿ ? ಬರೀ ಹೊಗಳು ಭಟ್ಟರ ಸಾಮ್ರಾಜ್ಯವಾಗಿದೆ , ಇರಲಿ ಈಗ ಲಾದರೂ ರಾಜ್ಯೋತ್ಸವ ಪ್ರಶಸ್ತಿ ಬಂತಲ್ಲಾ , ತುಂಬ ಸಂತೋಷ ! ಹೂವಿನಹಳ್ಳಿಯ ಸೀತಾ ರಾಮ ಜಾಗೀರದಾರರು ಹೂವು ತರುವ ರಲ್ಲದೆ ಹುಲ್ಲು ತಾರರು ! ಅಭಿನಂದನೆಗಳು ಸರ್ ಅವರಿಗೆ . – ಶ್ರೀನಿವಾಸ ಜಾಲವಾದಿ , ಸುರಪುರ

Leave a Reply

Your email address will not be published. Required fields are marked *

Back to top button