ಕಸಾಪ ಜಾತಿ, ಧರ್ಮದ ಪರಿಷತ್ತಾಗದಿರಲಿ – ಹಾರಣಗೇರಾ ಅವಲೋಕನ
ಕ. ಸಾ. ಪ. ಜಾತಿ, ಧರ್ಮದ ಪರಿಷತ್ತಾಗದಿರಲಿ
– ರಾಘವೇಂದ್ರ ಹಾರಣಗೇರಾ
ಮೇ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯಲಿದೆ. ಕಳೆದ ದಶಕಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಕೆಲವು ಜಾತಿ ವರ್ಗದವರ ಪರಿಷತ್ತಾಗಿ ಮಾರ್ಪಟ್ಟಿರುವುದು ವಿಷಾಧನಿಯ ಸಂಗತಿ. ಪರಿಷತ್ತಿನ ಜಿಲ್ಲಾ, ತಾಲ್ಲೂಕು, ವಲಯ ಘಟಕಗಳಲ್ಲಿ ವಿವಿಧ ಪದಾಧಿಕಾರಿಗಳ ನೇಮಕದಲ್ಲಿ ಪರಿಷತ್ತಿನ ಬೈಲಾ ಪ್ರಕಾರ ವಿವಿಧ ಸಮುದಾಯಗಳಿಗೆ ಅವಕಾಶ ಮಾಡಿಕೊಟ್ಟರೂ ಸಹ ಅವು ಕೇವಲ ಹೆಸರಿಗೆ ಮಾತ್ರ. ಅದರ ಅಧಿಕಾರ ಮಾತ್ರ ಕೆಲವು ಜಾತಿ ವರ್ಗದವರಿಗೆ ಸೀಮಿತವಾಗಿರುವುದು ಎಲ್ಲಾ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಕಂಡುಬರುತ್ತದೆ.
ಇದು ಕನ್ನಡ ಸಾಹಿತ್ಯ ಪರಿಷತ್ತನ್ನು ನಾಡಿನ ಬಹುದೊಡ್ಡ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆಸಿದ ಅನೇಕ ಜನ ಹಿಂದಿನ ಹಿರಿಯ ನಿಕಟಪೂರ್ವ ಅಧ್ಯಕ್ಷರ, ಸದಸ್ಯರ, ಹಿರಿಯ ಸಾಹಿತಿಗಳ, ವಿದ್ವಾಂಸರ ಕನ್ನಡ ನಾಡು ನುಡಿಯ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅನೇಕ ಮಾನವೀಯ, ಜೀವಪರ ಆಶಯಗಳ ವಿರುದ್ಧವಾಗಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಡೆಯುತ್ತಿರುವುದನ್ನು ಕಂಡುಬರುತ್ತದೆ.
ಕನ್ನಡ ನಾಡಿನ ಆರು ಕೋಟಿ ಜನ ಸಮೂದಾಯದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಆರು ಕೋಟಿ ಕನ್ನಡಿಗರ ಹೆಮ್ಮೆಯ ದೊಡ್ಡ ಮನೆ ಎಂದು ಹೆಳಿದರೆ ಅತೀಶಿಯೋಕ್ತಿಯಾಗಲಾರದು. ಶತಮಾನ ಶತಮಾನದಿಂದ ನಾಡುನುಡಿ ಸಾಹಿತ್ಯಕ್ಕೆ ಪ್ರೇರಕ ಶಕ್ತಿಯಾಗಿ ಹಾಗೂ ಪೋಷಕವಾಗಿ ಅವೀರತ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ: 05-05-1915ರಂದು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ದಿವಾನ್‍ರಾಗಿದ್ದ ಸರ್.ಎಂ. ವಿಸ್ವೇಶ್ವರಯ್ಯನವರ ಪ್ರಯತ್ನದಿಂದ ಸಂಸ್ಥಾಪನೆಗೊಂಡು ಕನ್ನಡ ಭಾಷಿಕ ಸಮೂದಾಯದ ಹಿತಾಸಕ್ತಿಗಳ ಬಗ್ಗೆ ಚಿಂತಿಸುವ ಒಂದು ವೇದಿಕೆ ಬೇಕು ಎಂಬ ಆಶಯದಿಂದ ಪ್ರಾರಂಭವಾಗಿ ಸಮಕಾಲೀನತೆಗೆ ಸ್ಪಂಧಿಸುತ್ತಾ ಎಲ್ಲವನ್ನು ಹೀರಿಕೊಂಡು ನಿತ್ಯನೂತನವಾಗಿ ಬೆಳೆಯುತ್ತಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ.
ಕರ್ನಾಟಕ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿ ಉಳಿಸುವ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ. ಕನ್ನಡ ಅವಸಾನದ ಅಂಚಿಗೆ ಹೋಗಬಾರದು. ಕನ್ನಡ ಸಂಸ್ಕøತೀಗೆ ಹಿಂಬು ನೀಡಬೇಕು. ದೇಶದ ಪ್ರತಿಯೊಂದು ಕ್ಷೇತ್ರಗಳಲ್ಲಿ ಎಲ್ಲಾ ಸಂದರ್ಭಗಳಲ್ಲೂ ಕನ್ನಡಕ್ಕೆ ಪ್ರಾಧಾನ್ಯತೆ ಸಿಗಬೇಕು. ಮತ್ತು ಕನ್ನಡ ಸಾಹಿತ್ಯ, ಸಂಸ್ಕøತೀಕ ಪರಂಪರೆಯನ್ನು ರಕ್ಷಿಸಿ ಬೆಳೆಸಬೇಕೆಂಬ ಉನ್ನತವಾದ ಹಲವಾರು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು 2014-15ರಲ್ಲಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿತು.
ಕನ್ನಡಿಗರ ಸಮಸ್ತ ಹಿತಾಸಕ್ತಿಗಳ ಸಂರಕ್ಷಣೆಯ ವಿಶೇಷ ಹೊಣೆಗಾರಿಕೆಯನ್ನು ಇಟ್ಟುಕೊಂಡು ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು 85 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ಜಿಲ್ಲಾ, ತಾಲೂಕ, ವಲಯಗಳ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು ಆಯೋಜಿಸಿ ಹೊಸ ಸಾಧ್ಯತೆಗಳಿಗೆ ನಾಂದಿಯಾಡಿದೆ. ಅಲ್ಲದೇ ವಿವಿಧ ವಿಶೇಷ ಉಪನ್ಯಾಸಗಳು, ದತ್ತಿ ಉಪನ್ಯಾಸಗಳು, ವಿಚಾರ ಸಂಕೀರ್ಣಗಳು, ಕವಿಗೋಷ್ಠಿಗಳು, ಕಾವ್ಯ, ಕಥನ, ನಾಟಕ, ಸಂಶೋಧನೆ ಕಮ್ಮಟಗಳು ಹೀಗೆ ಮುಂತಾದ ಮಹತ್ತರವಾದ ಕಾರ್ಯಕ್ರಮಗಳ ಮೂಲಕ ಅವಿರತವಾಗಿ ಶತಮಾನದಿಂದ ಶ್ರಮಿಸುತ್ತಿದೆ.
ಕೇಂದ್ರ, ಜಿಲ್ಲೆ, ತಾಲೂಕ, ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳ ಜೋತೆ ನಿರಂತರ ಸಮನ್ವಯ ಹಾಗೂ ಅನುಸಂಧಾನದ ಮೂಲಕ ಅವುಗಳಿಗೆ ಪ್ರೋತ್ಸಾಹ, ಸಹಕಾರ ನೀಡುತ್ತ ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನಾದ್ಯಂತಹ ವ್ಯಾಪಕತೆ ಹೊಂದಿದ್ದು, ತನ್ನದೇಯಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕನ್ನಡ-ಕನ್ನಡಿಗ-ಕರ್ನಾಟಕದ ಒಳಿತಿಗೆ ಶ್ರಮಿಸುತ್ತಾ ಕನ್ನಡಿಗರಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಎಚ್ಚರ ಮೂಡಿಸುವಲ್ಲಿ ಅನೇಕ ಮೌಲಿಕ ಕೃತಿಗಳನ್ನು ಪ್ರಕಟಣೆಗಳ ಮೂಲಕ ಬಹಳಷ್ಟು ಮಹತ್ವದ ಪಾತ್ರವಹಿಸುತ್ತ ಬರುತ್ತದೆ.
ಕನ್ನಡವನ್ನು, ಕನ್ನಡ ಸಾಹಿತ್ಯವನ್ನು ರಕ್ಷಿಸಿ ಬೆಳೆಸುವ ದೇಯೋದ್ದೇಶವನ್ನು ಇಟ್ಟುಕೊಂಡು ಹಿಂದಿನ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಎಲ್ಲಾ ಮಹನೀಯರ ಆಶಯಗಳ ಯಾವುದೇ ಒಂದು ಅಂಶಕ್ಕೂ ಚ್ಯುತಿ ಬರದಂತೆ ಸಾಧನೆ, ಅರ್ಹತೆ, ಯೋಗ್ಯತೆ, ಪ್ರಾದೇಶಿಕ, ಸಮಾನತೆ, ಸಮಾಜೀಕ ನ್ಯಾಯ ಇವುಗಳನ್ನು ಆಧಾರವಾಗಿಟ್ಟುಕೊಂಡು ಪ್ರಮಾಣಿಕವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಬೆಳೆಯಲು ಮತ್ತು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಲಯ ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಅನೇಕ ಸೃಜನಾತ್ಮಕ ಕಾರ್ಯಚಟುವಟಿಕೆಗಳ ಮೂಲಕ ಬಹಳಷ್ಟು ಶ್ರಮಿಸುತ್ತಿವೆ.
ಆದರೆ ರಾಜ್ಯದ ಅನೇಕ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳು ಕೆಲವೊಂದು ಜಾತಿಗೆ ಮಾತ್ರ ಸೀಮಿತಗೊಂಡು ಪರಿಷತ್ತಿನ ಆಶಯಗಳಿಗೆ ದಕ್ಕೆ ತರುತ್ತಿವೆಂಬುದನ್ನು ಮರೆಯುವಂತಿಲ್ಲ. ಪರಿಷತ್ತಿನಲ್ಲಿಯೂ ಸಹ ಜಾತಿ, ಪಂಥ, ಪಂಗಡ ಎಂಬ ತಾರತಮ್ಯಗಳು ಉಂಟಾಗಿ ಗುಂಪುಗಾರಿಕೆ ನಡೆಯುತ್ತಿರುವುದು ಕಾಣುತ್ತಿದ್ದೇವೆ. ಕೆಲವು ತಾಲ್ಲೂಕು ಘಟಕಗಳು ಜಾತಿ ಗುಂಪುಗಾರಿಕೆಯಿಂದ ಯಾವುದೇ ಕಾರ್ಯ ಚಟುವಟಿಕೆಗಳಿಲ್ಲದೆ ನಿಷ್ಕ್ರೀಯವಾಗಿವೆ. ಕ.ಸಾ.ಪ ಚುನಾವಣೆಯೂ ಸಹ ರಾಜಕೀಯ ಚುನಾವಣೆಯಂತೆ ಜಾತಿಬಲ, ಹಣಬಲ ಮುಂತಾದವುಗಳ ಆಧಾರದ ಮೇಲೆ ನಡೆಯುತ್ತಿರುವುದು ವಿಷಾದನೀಯ ಸಂಗತಿ.
ಬಂದಿರುವ ಕ.ಸಾ.ಪ.ದ ಚುನಾವಣೆಯ ಸಂದರ್ಭದಲ್ಲಿ ಪರಿಷತ್ತಿನ ಸಾಧನೆಯ ಹೆಜ್ಜೆಗಳ ಜೊತೆಗೆ ಹಲವಾರು ದೋಷಗಳೂ ಕೂಡಾ ಅವಲೋಕನ ಮಾಡಿ ಸರಿಪಡಿಸಿಕೊಂಡು ಪರಿಷತ್ತಿನ ಆಶಯಗಳ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಸೂಕ್ತವಾದ ಪ್ರತಿನಿಧಿಯನ್ನು ಆಯ್ಕೆಮಾಡಬೇಕಾದದ್ದು ತುಂಬಾ ಅಗತ್ಯವಾಗಿದೆ. ಜಾತಿ, ಪಂಥ, ಧರ್ಮಗಳ ಪ್ರಾಬಲ್ಯಗಳಿಂದ ಮುಕ್ತವಾಗಿ ನಾಡು-ನುಡಿಯ ಸಂಸ್ಕøತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪರಿಣಾಮಕಾರಿಯಾದ ಕಾರ್ಯಚಟುವಟಿಕೆಗಳಲ್ಲಿ ಶ್ರಮಿಸುವ ಪ್ರತಿನಿಧಿಯನ್ನು ಈ ಚುನಾವಣೆಯಲ್ಲಿ ಆಯ್ಕೆಯಾಗಲು ಪ್ರತಿಯೊಬ್ಬ ಸದಸ್ಯರು ಪ್ರಜ್ಞಾವಂತಿಕೆಯಿಂದ ಮತದಾನ ಮಾಡಬೇಕು.
ನಾಡಿನ ಹಿರಿಯ ಸಾಹಿತಿ ಚಂಪಾ ಅವರು ಹೇಳುವಂತೆ ನಾಡು – ನುಡಿ ಸಂಸ್ಕøತಿಯ ರಕ್ಷಣೆ ಮತ್ತು ವಿಕಾಸಕ್ಕಾಗಿ ಕಂಕಣಬದ್ಧವಾಗಿರುವ ಬಹುದೊಡ್ಡ ಕನ್ನಡ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಾಗಿದೆ. ಇದು ಕನ್ನಡ ಮತ್ತು ಕನ್ನಡಿಗರ ಬಹುಮುಖಿ ಆಯಾಮಗಳಿಗೆ ಆಲೋಚನೆ, ಅಕ್ಷರ, ಕ್ರೀಯೆಗಳ ಮೂಲಕ ಸ್ಪಂಧಿಸುತ್ತಲೇ ಬಂದಿದೆ. ಇಂತಹ ಕನ್ನಡ ನಾಡಿನ ಹೆಮ್ಮೇಯ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಜಾತಿವರ್ಗ, ಧರ್ಮದ ಪರಿಷತ್ತಾಗದೆ ಸಮಸ್ತ ಕನ್ನಡದ ಮನಸ್ಸುಗಳ ಪರಿಷತ್ತಾಗಲಿ ಎಂದು ಆಶಿಸುವೆ.
– ರಾಘವೇಂದ್ರ ಹಾರಣಗೇರಾ.
ಅಜೀವ ಸದಸ್ಯರು ಕನ್ನಡ ಸಾಹಿತ್ಯ
ಪರಿಷತ್ತು ಹಾಗೂ ಸಮಾಜಶಾಸ್ತ್ರ
ಉಪನ್ಯಾಸಕರು ಬಾಪುಗೌಡ ದರ್ಶನಾಪುರ
ಸ್ಮಾರಕ ಮಹಿಳಾ ಕಾಲೇಜು ಶಹಾಪುರ. ಜಿ. ಯಾದಗಿರಿ
ಮೊ. 9901559873.