“ನನ್ನ ತಾಯಿ” ಭಾಗ್ಯ ದೊರೆ ರಚಿಸಿದ ಕವಿತೆ
ನನ್ನ ತಾಯಿ
*********
ಭೂಮಿಯ ಅಂಶವನ್ನು
ಬೆಂಕಿಯ ಕುಲುಮೆಯಲ್ಲಿ ಇರಿಸಿ
ಕಾಸಿ ತೆಗೆದ ಪರಿಶುದ್ಧ ಚಿನ್ನ
ನಿನ್ನೊಡಲು ನನ್ನ ತಾಯಿ!!
ಅಸ್ತಿಪಂಜರದಂತಿಹ ದೇಹದಿ
ಅಮೃತದ ಸುಧೆಯ ಕಂದನ
ಬಾಯೊಳಗೆ ತೊಟ್ಟಿಟ್ಟು
ಹಸಿವ ನಿಗಿಸಿದಾಕೆ ನನ್ನತಾಯಿ!!
ತುತು ಬಿದ್ದ ಸೇರಗ ಮರೆಮಾಡಿ ಹಣೆಗೆಮುತ್ತಿಟ್ಟು
ಕಿರು ಬೆರಳ ಹಿಡಿದು ನಡೆಸಿ ನಲಿದು
ಇರುವ ಗಂಜಿಯನ್ನೆ ಇರುಳ ಚಂದಿರನ
ತೋರಿ ತಿನಿಸಿ ಬೆಳಸಿದಾಕೆ ನನ್ನ ತಾಯಿ!!
ಸೂರು ಕಟ್ಟಲು ಮೈಬೆವರ ಸೂರಿದವಳು
ಬಯಲ ಅರಮನೆಯಲ್ಲಿ ಬದುಕ ಕಳೆದವಳು
ಮರದ ಕೊಂಬೆಗಳಿಗೆ ಸೀರೆ ಜೋಳಿಗೆ ಕಟ್ಟಿ ಲಾಲಿ ಹಾಡಿದವಳು ಜಗದಂಬೆ ನನ್ನ ತಾಯಿ!!
ಸ್ವಾಭಿಮಾನ,ಸಂಯಮ, ಶಿಸ್ತು,ಛಲ
ತನ್ನೊಡಲ ಕುಡಿಗಳಿಗೆ ಮಜ್ಜನದ ತೈಲ
ಶ್ರಮದ ಅನ್ನವ ಪ್ರೇಮದಿ ಕೈತತ್ತು ಇಟ್ಟ
ಅನ್ನಪೂರ್ಣೇ ನನ್ನ ತಾಯಿ!!
ಮೇಣದಂತೆ ಉರಿದವಳು ಬಾಳೆಲ್ಲ ಬೆಳಕಾದವಳು
ಗಂಧದಂತೆ ತೇಯ್ದುಕೊಂಡು ಕಂಪನ್ನೆ ಸೂಸಿದವಳು
ಮಳೆ ಬಿಸಿಲ ಉಂಡು ದಿನ ಬಿರಿದು ನಗುವ
ಅಚ್ಚಮಲ್ಲಿಗೆ ಮೊಗದ ನನ್ನ ತಾಯಿ !!
ತುಂಬು ಹುಣ್ಣುಮೆ ಶಶಿಯ
ತಂಪುಬಾಳು ಸವೆಸಿದವಳು
ಯಾರು ಶ್ರೇಷ್ಠರಿಲ್ಲ ನಿನಗಿಂತ ಜಗದೊಳಗೆ
ಯಾವ ಪದಗಳಿಲ್ಲ ನಿನ್ನ ಅರ್ಥ ಮಂಡಿಸಲು ಭಾಷೆಯೊಳಗೆ ನನ್ನ ತಾಯಿ!!
–ಭಾಗ್ಯ ದೊರೆ.
ಸಹಶಿಕ್ಷಕಿ ಸರ್ಕಾರಿ ಪ್ರಾಥಮಿಕ ಶಾಲೆ ಸೈದಾಪೂರ. ಯಾದಗಿರಿ.