ಮಗುವನ್ನು ಅಪಹರಿಸಿದ್ದ ಕಿಡ್ನಾಪರ್ಸ್ ಮೇಲೆ ಗುಂಡಿನ ದಾಳಿ
ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಚೇಸ್ ಮಾಡಿದ ಪೊಲೀಸರು
ಬೆಂಗಳೂರು: ಸೆಪ್ಟಂಬರ್ 5ನೇ ತಾರೀಖು ನಗರದಲ್ಲಿ ಒಂದು ವರ್ಷದ ಮಗು ಅಭಿರಾಮ್ ನನ್ನು ಗ್ಯಾಂಗ್ ಒಂದು ಅಪಹರಿಸಿತ್ತು. ಪ್ರಕರಣದ ಬೆನ್ನು ಹತ್ತಿದ ಕೊತ್ತನೂರು ಠಾಣೆಯ ಪೊಲೀಸರು ಶಹನಾಜ್ ಖಾನಮ್ ಎಂಬ ಮಹಿಳೆಯನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದರು. ಶಹನಾಜ್ ಖಾನಮ್ ವಿಚಾರಣೆ ವೇಳೆ ನೂರುಲ್ಲಾ , ಐಜಾಕ್ ಖಾನ್ , ವಾಹಿದ್ ಎಂಬವರನ್ನೊಳಗೊಂಡ ಗ್ಯಾಂಗ್ ಈ ಕೃತ್ಯವೆಸಗಿದ್ದು ಮಗುವನ್ನು ನನಗೆ ನೀಡಿದ್ದಾರೆ ಎಂದು ಶಹನಾಜ್ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ವೇಳೆ ಪೊಲೀಸರು ಐಜಾಕ್ ಖಾನ್ ಮತ್ತು ವಾಹಿದ್ ನನ್ನು ಬಂಧಿಸಿದ್ದರು. ಆದರೆ, ಮುಖ್ಯ ಆರೋಪಿ ನೂರುಲ್ಲಾ ನಾಪತ್ತೆಯಾಗಿದ್ದ. ಇಂದು ಬೆಳಗ್ಗೆ ಮುಖ್ಯ ಆರೋಪಿ ನೂರುಲ್ಲಾ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ ಹರಿಯಪ್ಪ ಮತ್ತು ತಂಡ ಆರೋಪಿ ನೂರುಲ್ಲಾ ಬಂಧನಕ್ಕೆ ತೆರಳಿತ್ತು.
ಪೊಲೀಸರು ಕಂಡೊಡನೆ ನಗರದ ಮಿಟಗಾನಹಳ್ಳಿ ಬಳಿ ನೂರುಲ್ಲಾ ಬೈಕ್ ಮೇಲೆ ಎಸ್ಕೇಪ್ ಆಗಲು ಮುಂದಾದಾಗ ಪೊಲೀಸರು ನೂರುಲ್ಲಾನನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ. ಈ ವೇಳೆ ಖತರ್ನಾಕ್ ಕಿಡ್ನಾಪರ್ ನೂರುಲ್ಲಾ ಮಾತ್ರ ಪೊಲೀಸರಿಗೆ ಚಾಕು ಇರಿದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪರಿಣಾಮ ಪಿಎಸ್ ಐ ಶಿವಪ್ಪ ನಾಯಕ ಮತ್ತು ಮುಖ್ಯಪೇದೆ ಅಬ್ದುಲ್ ಹಮೀದ್ ಗಾಯಗೊಂಡಿದ್ದಾರೆ. ಹೀಗಾಗಿ, ಪರಿಸ್ಥಿತಿ ಹತೋಟಿ ಮೀರುತ್ತಿದ್ದುದನ್ನು ಗಮನಿಸಿದ ಇನ್ಸಪೆಕ್ಟರ್ ಹರಿಯಪ್ಪ ಆತ್ಮರಕ್ಷಣೆಗಾಗಿ ಆರೋಪಿ ನೂರುಲ್ಲಾ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ನೂರುಲ್ಲಾ ಕಾಲಿಗೆ ಗುಂಡು ಬಿದ್ದಿದ್ದು ಬಳಿಕ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಪಿಎಸ್ ಐ ಶಿವಪ್ಪ ನಾಯಕ್, ಮುಖ್ಯ ಪೇದೆ ಅಬ್ದುಲ್ ಹಮೀದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು ಪೊಲೀಸರ ವಶದಲ್ಲಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.