ಕಾವ್ಯ
ಹಸಿವನ್ನು ನಿಲ್ಲಿಸಲಾಗಿದೆ ರೋಡ ರೋಡ್ನಲ್ಲಿ ಲಾಠಿ ಹಿಡಿದು.!
ಹಸಿವನ್ನು ನಿಲ್ಲಿಸಲಾಗಿದೆ ಲಾಠಿ ಹಿಡಿದು
ಹಸಿವನ್ನು ನಿಲ್ಲಿಸಲಾಗುತ್ತಿದೆ
ರೋಡು ರೋಡಲ್ಲಿ
ಲಾಠಿ ಹಿಡಿದು.
ನಡೆದಷ್ಟು ದೂರ,
ಹೊಟ್ಟೆ ಸತ್ತವರ ಊರು.
ಹಸುಗೂಸುಗಳ ಗಂಟಲಕ್ಕಿಲ್ಲ
ಹನಿ ನೀರು.
ಒಣ ದೇಹಗಳ ಹೊತ್ತು
ಹೋಗುವವರಿಗೆಲ್ಲ
ತುತ್ತು ಕೂಳಿಲ್ಲ.
ರೋಗ ಇವರಲ್ಲಿಲ್ಲ,
ರಾಡಿ ಅವರಲ್ಲೇ ಎಲ್ಲ.
ಆದರೂ ಹಸಿದವರ
ಹೊಟ್ಟೆಯನ್ನೇ ತೊಳೆಸುತ್ತಾರೆ
ಮತ್ತೆ ಮತ್ತೆ.
ದುಡಿದು ಕಟ್ಟಿದ
ಬಿಲ್ಡಿಂಗುಗಳಲ್ಲಿ, ಬೆವರ
ಹರಿಸಿದ ಫ್ಯಾಕ್ಟರಿಗಳಲ್ಲಿ
ಹಸಿವಿನದೇ ಉಸಿರು.
ತಂಪನೆ ರೂಮಲ್ಲೆಲ್ಲ
ಕಾಲು ಚಾಚಿ ಬಿದ್ದವರೆಲ್ಲ
ಕೇಳುತ್ತಾರೆ ಇವರಿಗೇ
ಹೊಟ್ಟೆ ತುಂಬಿದ ಹದಿನೆಂಟು ಪ್ರಶ್ನೆ!
ಮೇಲೆ ಕುಂತವರು, ಕೆಳಗಿದ್ದವರು
‘ಮನೇಲಿರಿ ಮನೇಲಿರಿ’ ಅಂತಾರೆ,
ಮಸಣದವರ ಮರೆತೇ.
ಬಡವರ ದುಡಿತದಿಂದಲೇ
ಸಿರಿವಂತ, ಮಾರೋಗ
ಹ್ವಾದ ಮ್ಯಾಲೆ ಮತ್ತೆ ಬೇಕು
ಇವರೇ ನಿಮ್ಮನೆಗೆ.
ಜರ ಮನುಷ್ಯರಾಗಿ
ಮನುಷ್ಯರ ನೋಡಿರೋ,
ಇನ್ನಾದರೂ.
–ಶಿವಕುಮಾರ್ ಉಪ್ಪಿನ,
ಪತ್ರಕರ್ತ, ಬರಹಗಾರ.