ಫೇಸ್ ಬುಕ್ ಮೂಲಕ ಈ ಪ್ರೇಮಿಗಳು ಪ್ರಾರ್ಥನೆ ಮಾಡಿದ್ದೇನು ನೋಡಿ!
ಚಿತ್ರದುರ್ಗ : ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿತ್ರದುರ್ಗದ ಉಮೇರಾ ಹಾಗೂ ಮಹ್ಮದ್ ಮೋಸಿನ್ ಜೋಡಿಗೆ ಪೋಷಕರೇ ವಿಲನ್ ಆಗಿದ್ದಾರಂತೆ. ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾರಣ ಪ್ರೇಮಜೋಡಿ ಮನೆಬಿಟ್ಟು ಹೋಗಿ ಮದುವೆ ಆಗಿದೆ. ವಿಷಯ ತಿಳಿದ ಯುವತಿ ಪೋಷಕರು ಬೆದರಿಕೆ ಹಾಕುತ್ತಿದ್ದಾರಂತೆ. ಹೀಗಾಗಿ, ನಮಗೆ ರಕ್ಷಣೆ ಕೊಡಿ. ನಾವು ಪ್ರೀತಿಸುತ್ತಿದ್ದೇವೆ, ಇಬ್ಬರೂ ಒಪ್ಪಿಗೆಯಿಂದಲೇ ಜೊತೆಯಾಗಿದ್ದೇವೆ. ಖುಷಿಯಾಗಿದ್ದೇವೆ. ನಮ್ಮ ಬಗ್ಗೆ ಯಾರೂ ಚಿಂತಿಸುವುದು ಬೇಡ. ನಮಗೂ ಬದುಕಲು ಬಿಡಿ ಎಂದು ಪ್ರೇಮಿಗಳು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದೆ.
ನಿನ್ನೆ ರಾತ್ರಿ ಚಿತ್ರದುರ್ಗದ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಭೇಟಿ ಮಾಡಿ ರಕ್ಷಣೆ ಕೋರಿದ್ದಾರೆ. ಆದರೆ, ಉಮೇರಾ ಪೋಷಕರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿನ ಸಂಬಂಧಿಕರ ಮನೆಯಿಂದ ಉಮೇರಾ ನಾಪತ್ತೆ ಆಗಿರುವುದಾಗಿ ಭದ್ರಾವತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ, ಚಿತ್ರದುರ್ಗ ಎಸ್ಪಿ ಶ್ರೀನಾಥ ಜೋಶಿ ಅವರು ಪೊಲೀಸ್ ಜೀಪಿನಲ್ಲೇ ಪ್ರೇಮಿಗಳನ್ನು ಭದ್ರಾವತಿ ಠಾಣೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಇಂದು ಭದ್ರಾವತಿ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮಕೈಗೊಳ್ಳಲಿದ್ದಾರೆ.