ಮಾದರಿ ಡಿಗ್ರಿ ಕಾಲೇಜು ಕಟ್ಟಡ ವೀಕ್ಷಿಸಿದ ಸಚಿವ ದರ್ಶನಾಪುರ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಾದರಿ ಡಿಗ್ರಿ ಕಾಲೇಜು ಆರಂಭ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಾದರಿ ಡಿಗ್ರಿ ಕಾಲೇಜು ಆರಂಭ
ಶಹಾಪುರಃ ನಗರದ ಡಿಗ್ರಿ ಕಾಲೇಜು ಬಳಿ ನೂತನವಾಗಿ ನಿರ್ಮಿಸಲಾದ ಮಾದರಿ ಪದವಿ ಕಾಲೇಜು ಕಟ್ಟಡ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಮುಗಿಯಲಿದ್ದು, ಪ್ರಸಕ್ತ ವರ್ಷದಲ್ಲಿ ಬಿಸಿಎ ಮತ್ತು ಬಿಕಾಂ ಪದವಿ ಅಭ್ಯಾಸಕ್ಕೆ ಪ್ರವೇಶಾತಿಗಳು ಆರಂಭವಾಗಲಿವೆ ಎಂದು ಸಣ್ಣ ಕೈಗಾರಿಕೆ ಸಚಿವರೂ ಆದ ಸ್ಥಳೀಯ ಶಾಸಕರೂ ಆದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನ್ ಯೋಜನೆಯಡಿ ಸುಮಾರು 12 ಕೋಟಿ ಅನುದಾನದಿ ನಿರ್ಮಿಸಲ್ಪಿಟ್ಟಿರುವ ಮಾದರಿ ಡಿಗ್ರಿ ಕಾಲೇಜು ಕಟ್ಟಡ ಪರಿಶೀಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಇದೊಂದು ಮಾದರಿ ಡಿಗ್ರಿ ಕಾಲೇಜು ಆಗಲಿದ್ದು, ಪದವಿ ಅಭ್ಯಾಸಕ್ಕೆ ಇದು ಪೂರಕ ವ್ಯವಸ್ಥೆಯನ್ನು ಹೊಂದಿದ್ದು, ವಸತಿ ಕಟ್ಟಡ ಸಹ ಮುಕ್ತಾಯದ ಹಂತದಲ್ಲಿದ್ದು, ಪ್ರಸ್ತುತ 50 ವಿದ್ಯಾರ್ಥಿನಿಯರಿಗೆ ಮತ್ತು 24 ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಉಳಿಯಲು ವ್ಯವಸ್ಥೆಗೊಳಿಸಲಾಗುತ್ತಿದೆ. ಹಂತ ಹಂತವಾಗಿ ವಸತಿ ಸೌಲಭ್ಯ ಹೆಚ್ಚಿನ ವಿದ್ಯಾರ್ಥಿಗಳಿಗೆ ಒದಗಿಸುವ ವ್ಯವಸ್ಥೆ ಮಾಡಲಾಗುವದು.
ಅಲ್ಲದೆ ಕಟ್ಟಡ ಮುಕ್ತಾಯ ಹಂತದಲ್ಲಿದ್ದು, ಮೂಲ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ಈ ಕುರಿತು ಮಾತನಾಡಿರುವೆ. ಇಷ್ಟರಲ್ಲಿ ಮೂಲ ಸೌಲಭ್ಯ ವ್ಯವಸ್ಥೆ ಮಾಡಲಾಗುವದು. ಈ ಭಾಗದ ಪದವಿ ವಿದ್ಯಾರ್ಥಿಗಳಿಗೆ ಇದೊಂದು ಮಹತ್ವದ ಪದವಿ ವಿದ್ಯಾಲಯವಾಗಲಿದೆ. ಈ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಪದವಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಸುಶಿಕ್ಷತರಾಗಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಾರ್ಥಕತೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪ್ರತಿ ಬಿಸಿಎ ಮತ್ತು ಬಿಕಾಂ ಕ್ಲಾಸ್‍ಗೆ 60 ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚನ್ನಾರಡ್ಡಿ ತಂಗಡಗಿ, ಆದರ್ಶ ವಿದ್ಯಾಲಯದ ಸೋಮಶೇಖರ, ಮಾದರಿ ಡಿಗ್ರಿ ಕಾಲೇಜು ನೋಡಲ್ ಅಧಿಕಾರಿ ಎಸ್.ಎಸ್.ದೇಸಾಯಿ ಸೇರಿದಂತೆ ಕಟ್ಟಡ ಕಾಮಗಾರಿ ಗುತ್ತಿಗೆದಾರರು ಇತರರು ಇದ್ದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವದ ಯೋಜನೆಯಾದ ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಈ ಮೊದಲು ಅಕ್ಕಿ ಕೊಡುತ್ತೇವೆ ಎಂದು ಈಗ ಕೊಡುತ್ತಿಲ್ಲ. ಮಾರ್ಕೇಟ್ ದರ ನೀಡಲು ನಾವು ಸಿದ್ಧರಿದ್ದರೂ ಬಿಜೆಪಿ ಅಕ್ಕಿ ನೀಡಲು ತಯಾರಿಲ್ಲ. ಬಡವರಿಗೆ ಹಂಚುವ ಅಕ್ಕಿ ಯಲ್ಲಿ ಬಿಜೆಪಿ ರಾಜಕೀಯ ಮಾಡುವದು ಸರಿಯಲ್ಲ ಎಂದು ಸಚಿವ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪಕ್ಕದ ರಾಜ್ಯದಿಂದ ಅಕ್ಕಿ ಖರೀದಿಗೆ ಮುಂದಾದರೂ ಅಲ್ಲಿಯೂ ಬಿಜೆಪಿ ತನ್ನ ಪ್ರಭಾವ ಬೀರಿ ಅಕ್ಕಿ ಕೊಡದಂತೆ ಒತ್ತಡ ಹಾಕುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಜೂ.8 ಕ್ಕೆ ಕೇಂದ್ರ ಅಕ್ಕಿ ವಿತರಣೆ ಬಂದ್ ಮಾಡಿದೆ ಎಂದು ಹೇಳಿಕೆ ಕೊಡುತ್ತಿದ್ದು, ರಾಜ್ಯದಲ್ಲಿ ಸರ್ಕಾರ ಯಾವಾಗ ಆಡಳಿತಕ್ಕೆ ಬಂತು ಎಂಬುದರ ಅರಿವು ಸಹ ಅವರಿಗಿಲ್ಲ ಎಂದು ಕುಟುಕಿದರು. ಸಂಸದರಾಗಿ ರಾಜ್ಯಕ್ಕೆ ಅಕ್ಕಿ ಕೊಡಿಸುವ ಕೆಲಸ ಮಾಡಲಿ ಇಲ್ಲವೇ ಸುಮ್ಮನೆ ಕೂಡಲಿ ಎಂದು ಹರಿಹಾಯ್ದರು.
————
ನಗರಕ್ಕೆ ಕುಡಿಯುವ ನೀರು ಸರಬರಾಜಿಗೆ ಸೂಚನೆ
ಶಹಾಪುರಃ ನಗರದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಶುರುವಾಗಿದ್ದು, ಫಿಲ್ಟರ್ ಬೆಡ್ ಕೆರೆಯಲ್ಲಿ ನೀರು ಸಂಗ್ರಹ ಇಲ್ಲದ್ದರ ಪರಿಣಾಮ ಮೂರು ದಿನಕ್ಕೊಮ್ಮೆ ನಗರಕ್ಕೆ ನೀರು ಸರಬರಾಜಿಗೆ ನಗರಸಭಾ ಪೌರಾಯುಕ್ತರು ಸೂಚಿಸಿದ್ದರು. ಪ್ರಸ್ತುತ ನೀರಿನ ಸಮಸ್ಯೆ ನೀಗಿಸಲು ಕೃಷ್ಣಾ ಕಾಡಾ ಅಧಿಕಾರಿಗಳಿಗೆ ಕಾಲುವೆಗೆ ನೀರು ಹರಿಸಲು ಸೂಚಿಸಿರುವೆ.
ಇಷ್ಟರಲ್ಲಿಯೇ ಕಾಲುವೆ ನೀರು ಹರಿಸಿ ಫಿಲ್ಟರ್ ಬೆಡ್ ಕೆರೆ ತುಂಬಿಸಲಾಗುವದು. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಸೂಚಿಸಿರುವೆ. ಅಲ್ಲದೆ ಇನ್ನೆರಡು ತಿಂಗಳಲ್ಲಿ ಶಾಶ್ವಾತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಗಿಯಲಿದೆ. ನಂತರ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವದಿಲ್ಲ ಎಂದು ದರ್ಶನಾಪುರ ತಿಳಿಸಿದರು.