ಅ. 5 ರಂದು ಯಾದಗಿರಿಗೆ ಸಿಎಂ ಯಡಿಯೂರಪ್ಪ
ಅ.5 ರಂದು ಜಿಲ್ಲೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಯಾದಗಿರಿಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಕ್ಟೋಬರ್ 5 ರಂದು ಮಧ್ಯಾಹ್ನ 2.30 ಗಂಟೆಗೆ ಯಾದಗಿರಿ ಜಿಲ್ಲೆಗೆ ಆಗಮಿಸಿ, ಪ್ರವಾಹದಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವರು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯಾದಗಿರಿ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವರು.
ಸಂಜೆ 5 ಗಂಟೆಗೆ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದುಕೊರತೆಗಳನ್ನು ಆಲಿಸುವರು. ರಾತ್ರಿ 7 ಗಂಟೆಗೆ ಯಾದಗಿರಿ ತಾಲ್ಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಪೂಜ್ಯ ಸದ್ಗುರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನಕ್ಕೆ ಭೇಟಿ ನೀಡುವರು. ರಾತ್ರಿ 10.30 ಗಂಟೆಗೆ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ ಅವರು ಮಾತನಾಡಿ, ಮುಖ್ಯಮಂತ್ರಿಗಳ ಪ್ರವಾಸ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 5 ಡಿಎಸ್‍ಪಿ, 14 ಸಿಪಿಐ, 38 ಪಿಎಸ್‍ಐ, 82 ಎಎಸ್‍ಐ, 665 ಹೆಡ್‍ಕಾನ್‍ಸ್ಟೆಬಲ್ ಮತ್ತು ಪೊಲೀಸ್ ಕಾನ್‍ಸ್ಟೆಬಲ್, 382 ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಡಿಎಆರ್ ಕೆಎಸ್‍ಆರ್‍ಪಿ ತುಕಡಿಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.