ಸರಳ ಸಜ್ಜನಿಕೆಯ ಹಿರಿಯ ಅಧ್ಯಾಪಕ ಫೂಲ್ಛಡಿ ಸಯ್ಯದ್ ಚಾಂದಪಾಶ
ಸಮನ್ವಯ ದೃಷ್ಟಿಯ ಮಾದರಿ ಮೇಷ್ಟ್ರು ಸಯ್ಯದ್ ಚಾಂದಪಾಶ
ಅರ್ಥಪೂರ್ಣ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಸೃಜನಶೀಲತೆ ಬೇಕು. ಅದು ಯಾವುದೇ ಕಲಾತ್ಮಕ ಸೃಜನಶೀಲತೆಗಿಂತ ಕಡಿಮೆಯದೇನಲ್ಲ” ಎಂಬ ಟಿ.ಎಸ್ ಎಲಿಯಟ್‍ನ ನುಡಿಗಳು ಯಾದಗಿರಿ ಜಿಲ್ಲೆಯ ಶಹಾಪುರದ ಸಮನ್ವಯ ದೃಷ್ಟಿಯ, ಸಜ್ಜನಿಕೆಯ ಹಿರಿಯ ಕನ್ನಡ ಅಧ್ಯಾಪಕ ಸೈಯದ್ ಚಾಂದಪಾಶ್ ಅವರಿಗೆ ಬಹಳಷ್ಟು ಅನ್ವಯಿಸುತ್ತದೆ. ಅಂತಹ ಸೃಜನಶೀಲ ಮನಸ್ಸಿನಿಂದ 36 ವರ್ಷಗಳ ಕಾಲ ಕನ್ನಡ ಅಧ್ಯಾಪಕರಾಗಿ ಬಹಳಷ್ಟು ಕ್ರೀಯಾಶೀಲತೆಯಿಂದ, ವೃತ್ತಿಬದ್ದತೆಯಿಂದ ಸೇವೆ ಸಲ್ಲಿಸಿದವರು ಮತ್ತು ಸೇವೆ ಸಲ್ಲಿಸುತ್ತಿರುವವರು.
ಸಗರನಾಡಿನ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಪರಿಸರದಲ್ಲಿ ಚಾಂದ್‍ಪಾಶ್ ಅವರು ಎಲ್ಲರಿಗೂ ಬೇಕಾಗುವ ನಮ್ಮ ನಡುವಿನ ಪ್ರೀತಿಯ ಸುಸಂಸ್ಕೃತ ಹಿರಿಯ ಜೀವ. ಅಪಾರ ವಿದ್ಯಾರ್ಥಿಗಳ ಅಂತರಂಗದ ಗುರು. ಎಲ್ಲಾ ವಯಸ್ಸಿನ ಅಧ್ಯಾಪಕರೊಂದಿಗೆ, ಬರಹಗಾರರೊಂದಿಗೆ, ಸಾಹಿತಿಗಳೊಂದಿಗೆ, ಹಿರಿಯರು ಮತ್ತು ಕಿರಿಯರೊಂದಿಗೆ ಆಪ್ತಭಾವವನ್ನು ಇರಿಸಿಕೊಂಡ ಸಂಪನ್ಮೂಲ ವ್ಯಕ್ತಿ.
ಜೇವರ್ಗಿ ತಾಲ್ಲೂಕಿನ ವಡಿಗೇರಾ ಗ್ರಾಮದ ಚಾಂದಸಾಬ್ ಮತ್ತು ಜೈನಭೀ ಶರಣ ದಂಪತಿಗಳ ಉದರದಲ್ಲಿ ಜನಿಸಿದ ಸೈಯದ್ ಚಾಂದಪಾಶ್ ಅವರದ್ದು ಸೂಫಿ ಸಂತ ಶರಣ ಪರಂಪರೆಯ ವಿಚಾರಗಳನ್ನು ಆಳವಡಿಸಿಕೊಂಡ ಮನೆತನ. ಬಡತನದ ಸುಸಂಸ್ಕøತ ಭಾವೈಕ್ಯತೆ ಮನೆತನದ ಪರಿಸರದಲ್ಲಿ ಬೆಳೆದ ಸೈಯದ್ ಚಾಂದ್‍ಪಾಶ್ ಅವರು ತಮ್ಮ ಸಾಧನೆಯ ಛಲದಿಂದ ಅಧ್ಯಯನ ಮಾಡಿ ಕನ್ನಡ ಮಾಸ್ತರರಾಗಿ ನೇಮಕಗೊಂಡು ವೃತ್ತಿ ಜೀವನವನ್ನು ಆರಂಭಿಸಿದರು. ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಾಗಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಬಾಲ್ಕಿ ತಾಲ್ಲುಕಿನ ಡೊಣಗಾಪೂರ, ಬಸವಕಲ್ಯಾಣ, ಸುರಪುರ ಮುಂತಾದ ಊರುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರ ಸುಮ್ಮನೆ ಕೂಡದೆ ಇಂದಿಗೂ ಶಹಾಪುರದ ಬಾಪೂಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಹಿರಿಯ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸದಾ ಹಸನ್ಮುಖದ ಸೂಕ್ಷ್ಮ ಸಂವೇದನೆಯ ನೋಟವುಳ್ಳ ಸಹೃದಯಿ ಅಧ್ಯಾಪಕ ಸೈಯದ್ ಚಾಂದಪಾಶ್ ಅವರು ತಮ್ಮ ಬದುಕಿನಲ್ಲಿ ಯಾವುದೇ ಜಾತಿ, ಮತ, ಪಂಥ, ಪಂಗಡಗಳ ಗೋಡೆಗಳನ್ನು ಕಟ್ಟದೆ ವಿದ್ಯಾರ್ಥಿಗಳನ್ನು ತಾಯ್ತನದ ಪ್ರೀತಿಯಿಂದ ಕಾಣುತ್ತಾ ಅವರ ಪ್ರತಿಭೆಗಳಿಗೆ ನೀರೇರೆದು ಬೆಳಸುತ್ತ, ಅವರ ಜ್ಞಾನವನ್ನು ವಿಸ್ತರಿಸುತ್ತ ಅವಿರತ ಶ್ರಮಿಸಿದ ಮತ್ತು ಶ್ರಮಿಸುತ್ತಿರುವ ಭಾವೈಕ್ಕತೆಯ ಮಂಧಾರವಾಗಿದ್ದಾರೆ.
ತಮ್ಮ ಅಧ್ಯಾಪಕ ವೃತ್ತಿಯ ಜೊತೆಗೆ ಸಾಹಿತ್ಯ ಮತ್ತು ಸಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸಮಾಜದಲ್ಲಿ ಸಾಂಸ್ಕøತಿಕ ಮನಸ್ಸುಗಳನ್ನು ಕಟ್ಟುತ್ತಾ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು. ಇಂದಿಗೂ ಹೊಸ ತಲೆಮಾರಿನ ಬರಹಗಾರರಿಗೆ, ಅವರ ಸಾಂಸ್ಕøತಿಕ ಕಾರ್ಯಗಳಿಗೆ ಮಾರ್ಗದರ್ಶನ ಮಾಡುತ್ತಾ ಸ್ಪೂರ್ತಿಯಾಗಿದ್ದಾರೆ.
ಅವರಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಅಧ್ಯಾಪಕರಾಗಿ, ವೈದ್ಯರಾಗಿ, ಪತ್ರಕರ್ತರಾಗಿ, ಇಂಜಿನೀಯರಾಗಿ, ನಾಟಕ ಕಲಾವಿದರಾಗಿ, ಸಾಹಿತಿಗಳಾಗಿ, ಪ್ರಾಂಶುಪಾಲರಾಗಿ, ಸಂಗೀತ ಕಲಾವಿದರಾಗಿ, ಕ್ರೀಡಾಪಟುಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಆ ಕ್ಷೇತ್ರಗಳಲ್ಲಿ ವಿಶಿಷ್ಡ ಸಾಧನೆ ಮಾಡಿದ್ದಾರೆ. ನಿಜದ ನೆಲೆಯಲ್ಲಿ ಎಲ್ಲರನ್ನೂ ಕಾಣುವ, ಶುಭ್ರವಾದ ಮಾತು, ಹಿತಮಿತವಾದ ಪದ ಭಾವ, ವಿದ್ಯಾರ್ಥಿಗಳನ್ನು ತಾಯ್ತನದ ಮಮತೆಯಿಂದ, ವಾತ್ಸಲ್ಯದಿಂದ ನೋಡುವ, ಪ್ರತಿಭೆಗಳಿಗೆ ಬೆನ್ನುತಟ್ಟುತ್ತ ಪ್ರೊತ್ಸಾಹಿಸುವ, ಪ್ರೇರಣೆ ನೀಡುವ ಚಾಂದಪಾಶ್ ಸರ್ ಅವರ ಶಿಷ್ಯ ವಾತ್ಸಲ್ಯವನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲವೆಂದು ಹೇಳಬಹುದು.
ಶೈಕ್ಷಣಿಕ ಕ್ಷೇತ್ರದಲ್ಲಿ ಸೈಯದ್ ಚಾಂದಪಶ್ ಅವರ ಬಳಿ ಸುಳಿದವರ್ಯಾರು ಅವರ ಬಗ್ಗೆ ಕಿಂಚಿತ್ತೂ ಅಪಸ್ವರವನ್ನು ಎತ್ತಿದ್ದನ್ನು ಕೇಳಿ¯್ಲ. ಅವರದು ಅವರ ವೃತ್ತಿಬದ್ದತೆಯ ಸೇವೆ ಮತ್ತು ವ್ಯಕ್ತಿತ್ವದ ಸಾಧನೆಗೆ ತಾಲ್ಲೂಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಭಾರತ ಸಂಸ್ಕøತಿ ಪ್ರತಿಷ್ಠಾನ ಪ್ರಶಸ್ತಿ, ಚಿತ್ರದುರ್ಗ ಮುರುಘರಾಜೇಂದ್ರ ಸ್ವಾಮಿಗಳ ಶಿಕ್ಷಕ ರತ್ನ ಪ್ರಶಸ್ತಿ ಹಾಗೂ ನಾಡಿನ ಹಲವಾರು ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘ-ಸಂಸ್ಥೆಗಳು ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.
ಇವತ್ತಿನ ಲಾಭ-ನಷ್ಟದ ಆರ್ಥಿಕ ದೃಷ್ಠಿಕೋನದಲ್ಲಿ ನೋಡುವ, ಭಾವನಾತ್ಮಕ ಸಂಬಂಧಗಳಿಂದ ದೂರ ಸರಿಯುತ್ತಿರುವ ಯಾಂತ್ರಿಕ ಯುಗದಲ್ಲಿ ಅಂತ:ಕರಣದ ಪ್ರೀತಿ, ವಿಶ್ವಾಸ ಮಾಯಾವಾಗುತ್ತಿರುವ ಆತಂಕದ ಸಂಧರ್ಭದಲ್ಲಿ ಸೈಯದ್ ಚಾಂದಪಾಶ್ ಅವರು ಎಲ್ಲರ ಹೃದಯಕ್ಕೆ ತುಂಬಾ ಹತ್ತಿರವಾಗಿ, ಹಸಿಹಸಿಯಾಗಿ ಕಾಣುತ್ತಾರೆ.
72ರ ಇಳಿವಯಸ್ಸಿನಲ್ಲಿಯೂ ಅಧ್ಯಾಪಕ ವೃತ್ತಿಯಿಂದ ನಿವೃತ್ತಿಯಾದರೂ ಪುನ: ಅಧ್ಯಾಪಕ ವೃತ್ತಿಯಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿರುವ ಸೈಯದ್ ಚಾಂದಪಾಶ್ ಅವರ ಕಾಯಕ ನಿಷ್ಠೆ, ಪ್ರಾಮಾಣಿಕತೆ, ಬದ್ದತೆ, ಶಿಸ್ತು, ಸರಳತೆ, ಜೀವನ ಪ್ರೀತಿಯ ಸೌಂದರ್ಯ ಅವರಲ್ಲಿ ಎದ್ದು ಕಾಣುತ್ತದೆ. ಸದಾ ತಮ್ಮ ದಿನನಿತ್ಯದ ಪಾಠ ಪ್ರವಚನಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿನ ಎಚ್ಚರ, ಉಲ್ಲಾಸಗಳಿಗೆ ಜ್ಞಾನದ ಹಣತೆ ಹಚ್ಚುವ ಅಧ್ಯಾಪಕರು ಕಡಿಮೆಯಾಗುತ್ತಿರುವ ಪ್ರಸ್ತುತ ಕಾಲದ ಸಂಧರ್ಭದಲ್ಲಿ ಸೈಯದ್ ಚಾಂದಪಾಶ್ ಅವರ ವ್ಯಕ್ತಿತ್ವ ನಮ್ಮಂತಹ ಯುವ ಅಧ್ಯಾಪಕರಿಗೆ ಅನುಕರಣೀಯವಾಗಿ ಅವರು ಬಹಳ ಮುಖ್ಯವಾಗಿ ಕಾಣುತ್ತಾರೆ. ನಮ್ಮೆಲ್ಲರ ಪ್ರೀತಿಯ ಹಿರಿಯ ಅಧ್ಯಾಪಕ ಸೈಯದ್ ಚಾಂದಪಾಶ್ ಅವರು ನೂರಾರು ವರ್ಷ ಬಾಳಲಿ. ನಮಗೆ ಸದಾ ಮಾರ್ಗದರ್ಶನ ಮಾಡುತ್ತ ಸ್ಪೂರ್ತಿಯ ಚೇತನರಾಗಿ ಇರಲಿ ಎಂದು ಹಾರೈಸೋಣ.
@ ರಾಘವೇಂದ್ರ ಹಾರಣಗೇರಾ.
ಉಪನ್ಯಾಸಕರು, ಲೇಖಕರು.
Thanks to vinayavani , who refreshed sweet memories,
Super sir .Hats off