ಶಹಾಪುರಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜಕುಮಾರ ಜೈನ್ ಭೇಟಿ
ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸುವೆ
ಶಹಾಪುರಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೈನ್ ಭೇಟಿ
ದಿಗ್ಗಿ ಅಗಸಿ, ಸರ್ಕಾರಿ ಆಸ್ಪತ್ರೆ, ವಸತಿ ನಿಲಯ, ಅಂಗನವಾಡಿ, ಆದರ್ಶ ವಿದ್ಯಾಲಯಗೆ ಬೇಟಿ ಪರಿಶೀಲನೆ
ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸುವೆ
ಶಹಾಪುರಃ ಮಂಗಳವಾರ ನಗರಕ್ಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜಕುಮಾರ ಜೈನ್ ಭೇಟಿ ನೀಡಿ ನಗರದ ಸರ್ಕಾರಿ ಆಸ್ಪತ್ರೆ, ಶಿಥಿಲಗೊಂಡಿದ್ದ ಐತಿಹಾಸಿಕ ದಿಗ್ಗಿ ಅಗಸಿ, ಆದರ್ಶ ವಿದ್ಯಾಲಯ ಸೇರಿದಂತೆ ವಸತಿ ನಿಲಯಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ದಿಗ್ಗಿ ಅಗಸಿಗೆ ಭೇಟಿ ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಲವಡೆ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಅವುಗಳ ಸಂರಕ್ಷಣೆ ಪ್ರಚ್ಯವಸ್ತು ಇಲಾಖೆಗೆ ನೀಡಿದೆ, ಆದರೆ ನಗರದ ಐತಿಹಾಸಿಕ ಈ ಅಗಸಿಗಳು ಪ್ರಾಚ್ಯ ವಸ್ತು ಇಲಾಖೆಯ ಸುಪದ್ರಿಯಲ್ಲಿ ಇಲ್ಲ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಸಚಿವರ ಜತೆ ಮಾತನಾಡಿ ಜೀರ್ಣೋದ್ಧಾರ ಮಾಡುವ ಕುರಿತು ಕ್ರಮಕ್ಕೆ ಸೂಚಿಸುವೆ ಎಂದು ಮಾಹಿತಿ ನೀಡಿದರು.
ನಂತರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾದ ಜನರನ್ನು ಮಾತನಾಡಿಸುವ ಮೂಲಕ ಆಸ್ಪತ್ರೆ ವ್ಯವಸ್ಥೆ ಕುರಿತು ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನ್ ಯಂತ್ರ ಆರಂಭಿಸದಿರುವ ಕುರಿತು ಜನರಿಂದ ಮಾಹಿತಿ ಪಡೆದುಕೊಂಡ ಅವರು, ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಸ್ಥಳದಲ್ಲಿಯೇ ಪ್ರಶ್ನಿಸಿದರು. ಯಂತ್ರವನ್ನು ಕೆಕೆಆರ್‍ಡಿಬಿಯಿಂದ ಒದಗಿಸಲಾಗಿದೆ ಆದರೆ ಅದರ ಆಪರೇಟರ್ ಸಿಬ್ಬಂದಿಗಳನ್ನು ಇದುವರೆಗೂ ನೇಮಿಸಿರುವದಿಲ್ಲ ಹೀಗಾಗಿ ಸಿಟಿ ಸ್ಕ್ಯಾನ್ ನಿರ್ವಹಣೆಯಲ್ಲಿಲ್ಲ ಎಂಬುದ ಅರಿವಿಗೆ ಬಂತು. ತಕ್ಷಣ ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಜನರಿಗೆ ಅನುಕೂಲವಾಗುವಂತೆ ಮಾಡುವುದಾಗಿ ತಿಳಿಸಿದರು.
ನಂತರ ನಗರದ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಶೈಕ್ಷಣಿಕ ಅಭಿವೃದ್ದಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳು ಮತ್ತು ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೆ ಹಳಿಸಗರ ಭಾಗದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿ ಸೌಲಭ್ಯ ಕುರಿತು ಕೇಳಿದರು. ನಂತರ ಕನ್ಯಾಕೋಳೂರ ರಸ್ತೆಯಲ್ಲಿ ಬರುವ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಒದಗಿಸಲಾದ ಮೂಲ ಸೌಲಭ್ಯ, ಕೋಣೆ ಮತ್ತು ನಿತ್ಯ ನೀಡುವ ಊಟದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ತಹಶೀಲ್ದಾರ ಉಮಾಕಾಂತ ಹಳ್ಳಿ, ತಾಪಂ ಇಓ ಸೋಮಶೇಖರ ಬಿರೆದಾರ, ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ, ಸಿಡಿಪಿಓ ಮೀನಾಕ್ಷಿ ಪಾಟೀಲ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ನನೆಗುದಿಗೆ ಬಿದ್ದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಖಂಡ ಶರಣರಡ್ಡಿ ಹತ್ತಿಗೂಡೂರ ಹಾಗೂ ಇತರರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು. ಅಲ್ಲದೆ ನಗರದ ಐತಿಹಾಸಿಕ ಸ್ಥಳಗಳಾದ ಉಭಯ ಅಗಸಿಗಳು ಸೇರಿದಂತೆ ಕೋಟೆ ಜೀರ್ಣೋದ್ಧಾರ ಕಾಮಗಾರಿಕೈಗೊಳ್ಳುವ ಮೂಲಕ ಇತಿಹಾಸ ಸ್ಥಳಗಳ ಸಂರಕ್ಷಣೆಗೆ ಮುಂದಾಗಬೇಕೆಂದು ಐತಿಹಾಸಿಕ ಸ್ಥಳಗಳ ಸಂರಕ್ಷಣಾ ಸಮಿತಿಯ ನಾರಾಯಣಾಚಾರ್ಯ ಸಗರ ಮನವಿ ಪತ್ರ ಸಲ್ಲಿಸಿದರು.