ಬೆಂಗಳೂರು : ಇಂದಿನಿಂದ 18 ದಿನಗಳ ಕಾಲ ಲಾಲ್‌ಭಾಗ್‌ನಲ್ಲಿ ಮಾವು, ಹಲಸು ಮೇಳ
ಬೆಂಗಳೂರು : ಈ ವರ್ಷ ಉತ್ತಮ ಗುಣಮಟ್ಟದ ಮಾವು ಸಿಗುತ್ತಿಲ್ಲ ಎಂದು ಗ್ರಾಹಕರು ನಿರಾಸೆ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಮಾವು ಮತ್ತು ಹಲಸಿನ ಹಣ್ಣು ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಇಂದಿನಿಂದ ಮೇ 24ರಿಂದ ಜೂನ್ 10ರವರೆಗೂ 18 ದಿನಗಳ ಕಾಲ ಬೆಂಗಳೂರಿನ ಲಾಲ್‌ಭಾಗ್‌ನಲ್ಲಿ ಮಾವು ಮತ್ತು ಹಲಸು ಮೇಳ ಆರಂಭಿಸಲಾಗಿದೆ. ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಗಳ ಸಹಯೋಗದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದ ಮುಖ್ಯ ಉದ್ದೇಶ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಯಾವುದೇ ರಾಸಾಯನಿಕ ಬಳಸದೇ ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರ ತೋಟದಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವುದು. ಮಾವು ಮತ್ತು ಹಲಸು ಬೆಳೆಗಾರರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು, ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವು ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಇನ್ನು, ಈ ಮೇಳ ಸತತ 18 ದಿನಗಳ ಕಾಲ ನಡೆಯಲಿದ್ದು, ಇಂದಿನಿಂದ ಗ್ರಾಹಕರು ಲಾಲ್ ಭಾಗ್ ಗೆ ಭೇಟಿ ನೀಡಿ ಖರೀದಿ ಮಾಡಬಹುದಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೂ ಮೇಳ ನಡೆಯಲಿದ್ದು, 74 ಮಾವು ಹಾಗೂ 9 ಹಲಸು ಮಳಿಗೆ, 14 ಇತರೆ ಹಣ್ಣುಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮೇಳದಲ್ಲಿ ಎಂದಿನಂತೆ ಬಾದಾಮಿ, ಮಲ್ಲಿಕಾ, ಅಮ್ರಪಾಲಿ, ದಶೇರಿ, ಬಂಗನಪಲ್ಲಿ, ರಸಪೂರಿ, ಸಕ್ಕರೆಗುತ್ತಿ, ಕಲಾಪಡ್, ಕೇಸರ್, ಮಲಗೋವಾ, ತೋತಾಪುರಿ ಮಾವು ತಳಿಗಳು ಲಭ್ಯವಿರುತ್ತದೆ.