ಮಂತ್ರಿಮಾಲ್ನ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ
ಬೆಂಗಳೂರು: ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್ ನ ಬೀಗ ತೆರೆಯುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿ ಮಾಲ್ನ ಬೀಗ ಓಪನ್ ಮಾಡಲಾಗಿದೆ. ಎಂದಿನಂತೆ ಶಾಪಿಂಗ್ ಮಾಡಲು ಜನ ಮುಂದಾಗಿದ್ದಾರೆ. ಮಂತ್ರಿ ಮಾಲ್ 50 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು ಈ ಪೈಕಿ 20 ಕೋಟಿ ರೂ.ಗಳನ್ನ ಜುಲೈ 31 ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮಾಲ್ ತೆರೆಯಲು ಸೂಚನೆ ನೀಡಲಾಗಿದೆ. 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಹಿನ್ನೆಲೆಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಮಾಲ್ ತೆರೆಯುವಂತೆ ಸೂಚನೆ ನೀಡಿದೆ. ಬಿಬಿಎಂಪಿಗೆ ಬರೋಬ್ಬರಿ 50 ಕೋಟಿ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಮಾಲ್ ಮಾಲೀಕರಿಗೆ ಮೇ.10ರ ಶುಕ್ರವಾರ ಅಕ್ಷಯ ತೃತೀಯದ ದಿನವೇ ಪಾಲಿಕೆ ಅಧಿಕಾರಿಗಳು ಶಾಕ್ ಕೊಟ್ಟಿದ್ದರು. ಈ ಹಿಂದೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಬಾಕಿ ತೆರಿಗೆ ಪಾವತಿಸದ ಮಾಲ್ ಗೆ ಎಂಟನೇ ಬಾರಿಗೆ ಪಾಲಿಕೆ ಬೀಗ ಹಾಕಿತ್ತು. ಒಂದು ವಾರದ ಬಳಿಕ ಇಂದು ಮಂತ್ರಿ ಮಾಲ್ ಮತ್ತೆ ಓಪನ್ ಆಗಿದೆ.