ಮದ್ರಿಕಿ ಶ್ರೀಗಳಿಂದ ಹಿಮಾಲಯದಲ್ಲಿ 21 ದಿನ ತಪೋನುಷ್ಠಾನ
ತಪಸ್ಸಿನಿಂದ ಸರ್ವ ಮನೋರಥ ಸಿದ್ಧಿಃ ಕಾಶಿ ಜಗದ್ಗುರು
ಯಾದಗಿರಿಃ ಮನುಷ್ಯನು ತನ್ನಮನೋರಥಗಳ ಪೂರ್ತಿಗಾಗಿ ತನ್ನ ಶಕ್ತ್ಯಾನುಸಾರವಾಗಿ ತಪಸ್ಸನ್ನು ಮಾಡುತ್ತ ಸಾಧನ ಮಾರ್ಗದತ್ತ ಮುನ್ನಡೆಯಬೇಕು ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಗಚ್ಚಿನ ಮಠದ ಷ.ಬ್ರ.ಶಿವಯೋಗಿ ಶಿವಾಚಾರ್ಯಸ್ವಾಮಿಗಳು ಅಧಿಕಮಾಸದಲ್ಲಿ 21 ದಿನ ಹಿಮಾಲಯದಲ್ಲಿರುವ ಮಧ್ಯಮಹೇಶ್ವರ ದೇವಸ್ಥಾನದಲ್ಲಿ ತಪೋನುಷ್ಠಾನ ಮಾಡಿ ಮದ್ರಿಕಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಹಮ್ಮಿಕೊಮಡ ಶ್ರೀಗಳ ಪುರಪ್ರವೇಶ ಸ್ವಾಗತ ಸಮಾರಂಭದ ಧರ್ಮ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಮನಸ್ಸಿನಲ್ಲಿ ಅನೇಕ ಲೌಕಿಕ ಆಪೇಕ್ಷಗಳು ತುಂಬಿಕೊಂಡಿರುತ್ತವೆ. ಆಪೇಕ್ಷೆ ಮಾಡಿದ ಮಾತ್ರಕ್ಕೆ ಯಾವುದೇ ಮನೋರಥವು ಸಿದ್ಧಿಸುವುದಿಲ್ಲ. ಸಣ್ಣಪುಟ್ಟ ಮನೋರಥದ ಸಿದ್ಧಿಗಾಗಿ ಮನುಷ್ಯ ಕಷ್ಟ ಪಟ್ಟು ದುಡಿಯಬೇಕಾಗುತ್ತದೆ.
ಸಿಂಹವು ಮೃಗಗಳ ರಾಜನಾಗಿದ್ದು, ತನ್ನ ಆಹಾರಕ್ಕಾಗಿ ಜಿಂಕೆಗಳ ಹಿಂದೆ ಓಡಬೇಕಾಗಿದೆ. ರಾಜನೆಂದ ಮಾತ್ರಕ್ಕೆ ಆಹಾರವು ತನ್ನಿಂದ ತಾನೇ ಬಾಯಲ್ಲಿ ಬಂದು ಬೀಳುವುದಿಲ್ಲ ಎಂಬ ಮಾತು ಲೋಕ ಪ್ರಸಿದ್ಧವಾದದ್ದು.
ಅದರಂತೆ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಮಠಾಧೀಪತಿಗಳು ತಮ್ಮನ್ನು ನಂಬಿಬಂದ ಭಕ್ತರ ಮನೋರಥದ ಸಿದ್ಧಿಗಾಗಿ ತಾವು ಅವಶ್ಯಕವಾಗಿ ತಪಸ್ಸನ್ನು ಮಾಡಬೇಕು.
ತಪಸ್ಸನ್ನು ಮಾಡಲು ಪುಣ್ಯಕ್ಷೇತ್ರವು ಹೆಚ್ಚು ಮಹತ್ವ ಪಡೆದುಕೊಂಡಿದೆ. ಅದರಲ್ಲಿಯೂ ಹಿಮಾಲಯ ದೇವತೆಗಳ ವಾಸಸ್ಥಾನವೆನಿಸಿ ಪ್ರಸಿದ್ಧವಾಗಿದೆ. ಇಂಥ ಹಿಮಾಲಯವು ಪರ್ವತದ ಉತ್ತುಂಗ ಶಿಖರದಲ್ಲಿರುವ ನಿರ್ಜನವಾದ ಅತ್ಯಂತ ಶೀತಲವಾದ ಪ್ರದೇಶದಲ್ಲಿ ಮದ್ರಿಕಿಯ ಗಚ್ಚಿನಮಠದ ಶಿವಯೋಗಿ ಶಿವಾಚಾರ್ಯರು 21 ದಿನಗಳ ಕಾಲ ಅಲ್ಲಿಯ ವಾತಾವರಣವನ್ನು ಸಹಿಕೊಂಡು ತಪೋನಿಷ್ಠರಾಗಿ ಮದ್ರಿಕಿಗೆ ಆಗಮಿಸುತ್ತಿರುವುದು ಸಮಸ್ತ ಭಕ್ತರಿಗೆ ಪುಣ್ಯವಿಶೇಷವೆಂದು ಹೇಳಬಹುದು.
ಶ್ರೀಗಳ ತಪೋನಿಷ್ಠ ಬಲದ ಪರಿಣಾಮ ಈ ನಾಡಿಗೆ ಸಾಕಷ್ಟು ಮಳೆ, ಉತ್ತಮ ಬೆಳೆ ಬೆಳೆÉದು ರೈತರ ಬದುಕು ಸುಖಮಯವಾಗಲಿ ಎಂದು ಹಾರೈಸಿದರು.
ಶಹಾಪುರ ಹಿರೇಮಠದ ಸೂಗೂರೇಶ್ವರ ದೇವರು ಪ್ರಾಸ್ತಾವಿಕವಾಗಿ ಆಶೀರ್ವಚನ ನೀಡಿ, ಮದ್ರಿಕಿಯ ಶ್ರೀಗಳು, ಅಧಿಕ ಮಾಸದ ವಿಶೇಷ ದಿವಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ತಪಸ್ಸನ್ನಾಚರಿಸಿರುವುದು ಸುಭಿಕ್ಷೆಗೆ ಸಾಕ್ಷಿಯಾಗಿದೆ.
ಧರ್ಮ ಮಾರ್ಗದ ದಾರಿಯಲ್ಲಿ ಸರ್ವರು ಮುನ್ನಡೆಯಬೇಕು. ಶ್ರೇಯಸ್ಸು ಪಡೆಯಬೇಕು ಮದ್ರಿಕಿ ಗ್ರಾಮ ಧರ್ಮದ ನೆಲೆಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ತಪೋನಿಷ್ಠ ಮದ್ರಿಕಿಯ ಶ್ರೀಗಳಿಗೆ ಕಾಶೀ ಜಗದ್ಗುರುಗಳು ಸೇರಿದಂತೆ ಸರ್ವರು ಸನ್ಮಾನಿಸಿದರು.
ಧರ್ಮಸಭೆಯ ವೇದಿಕೆ ಮೇಲೆ ಮದ್ರಿಕಿ ಹಿರೇಮಠದ ಶೀಲವಂತ ಶಿವಾಚಾರ್ಯರು, ಗುಬ್ಬಿಮಠದ ಶ್ರೀ, ಪ್ರವಚನ ನಿಷ್ಠ ಮಲ್ಲಿಕಾರ್ಜುನ ಸ್ವಾಮಿ, ಸಂಗೀತಗಾರ ಮಹಾಂತೇಶ ಉಪಸ್ಥಿತರಿದ್ದರು.
ರುದ್ರಗೌಡ ಬಿರೇದಾರ ನಿರೂಪಿಸಿದರು. ಮುಂಚೆ ಗ್ರಾಮದ ಶ್ರೀ ಗೂಳಿಬಸವೇಶ್ವರ ದೇವಸ್ಥಾನದಿಂದ ಊರಿನ ಅಗಸಿವರೆಗೆ ಜಗದ್ಗುರುಗಳು ಪಾದಯಾತ್ರೆ ನಡೆಸಿ ಸರ್ವರಿಗೂ ಶುಭಾಶೀರ್ವದಿಸಿದರು. ಮುತ್ತೈದೆಯರು ಪೂರ್ಣ ಕುಂಭದೊಂದಿಗೆ ಪಾಲ್ಗೊಂಡಿದ್ದರು, ಗ್ರಾಮದ ಪ್ರಮುಖರು ಇದ್ದರು.