ಯಾದಗಿರಿಃ ಜಿಲ್ಲೆಯ ವಿವಿಧ ಸ್ಥಳಗಳಿಗೆ ಕೇಂದ್ರ ಸಚಿವರ ಭೇಟಿ ಪರಿಶೀಲನೆ
ಜಲಮೂಲಗಳ ಪುನರುಜ್ಜೀವನ ಸಚಿವರ ನಿರ್ದೇಶನ
ಹಳಿಗೇರಾ ಕೆರೆ ಹೂಳೆತ್ತುವ ಕಾರ್ಯಕ್ಕೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಚಾಲನೆ
ಯಾದಗಿರಿಃ ಜಲಮೂಲಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ನಿಟ್ಟಿನಲ್ಲಿ ಯಾದಗಿರಿ ತಾಲೂಕಿನ ಹಳಿಗೇರಾ ಕೆರೆಯಲ್ಲಿನ ಹೂಳೆತ್ತುವ ಕಾರ್ಯಕ್ಕೆ ಕೇಂದ್ರದ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ಜನರಲ್ ವಿಜಯ ಕುಮಾರ್ ಸಿಂಗ್ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹೆಚ್ಚು ಆಳವಾಗಿ ತೋಡುವ ಮೂಲಕ ಹೂಳೆತ್ತುವುದು ಮತ್ತು ರೀಚಾರ್ಜ್ ಶಾಫ್ಟ್ ಅಳವಡಿಸಬೇಕೆಂದು ಬಿ.ಜೆ.ಎಸ್. ಅಧಿಕಾರಿಗಳಿಗೆ ಸೂಚಿಸಿ ಕೆರೆಗೆ ಯಾವ್ಯಾವ ಕಡೆಯಿಂದ ನೀರು ಹರಿದು ಬರುತ್ತದೆ ಎಂದು ಮಾಹಿತಿ ಪಡೆದುಕೊಂಡರು.
ನೀತಿ ಆಯೋಗವು 112 ಮಹತ್ವಾಕಾಂಕ್ಷೆ ಜಿಲ್ಲೆಗಳ ಪೈಕಿ ಯಾದಗಿರಿ ಸೇರಿ 20 ಜಿಲ್ಲೆಗಳಲ್ಲಿನ ಜಲಮೂಲಗಳ ಪುನರುಜ್ಜೀವನ ಕೈಗೊಳ್ಳಲು ನಿರ್ದೇಶನ ನೀಡಿದ್ದು, ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಭಾರತೀಯ ಜೈನ್ ಸಂಘಟನ್ ಸಹಯೋಗದೊಂದಿಗೆ 118 ಲಕ್ಷ ರೂ. ವೆಚ್ಚದೊಂದಿಗೆ ಜಿಲ್ಲೆಯ ಹಳಿಗೇರಾ, ಕೊಯಲೂರು, ವಡವಟ್ಟಾ ಹಾಗೂ ಆಶನಾಳ ಗ್ರಾಮದಲ್ಲಿನ ಜಲಮೂಲಗಳನ್ನು ಸಂರಕ್ಷಿಸಲಾಗುತ್ತಿದೆ. ಬಿ.ಜೆ.ಎಸ್. ಸಂಸ್ಥೆಯ ಅಧಿಕಾರಿಗಳು ಕೆರೆ ಹೂಳೆತ್ತುವ ಕಾರ್ಯ ಕುರಿತಂತೆ ಸಚಿವರಿಗೆ ಸಮಗ್ರ ಮಾಹಿತಿ ನೀಡಿದರು.
ಅಲ್ಲಿಪೂರ ಪಿ.ಹೆಚ್.ಸಿ.ಗೆ ಸಚಿವ ವಿ.ಕೆ.ಸಿಂಗ್ ಭೇಟಿ;
ನಂತರ ಕೇಂದ್ರ ಸಚಿವ ಜನರಲ್ ವಿಜಯ ಕುಮಾರ್ ಸಿಂಗ್ ಅಲ್ಲಿಪೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಆರೋಗ್ಯ ಕೇಂದ್ರದ ಕಾರ್ಯದ ಬಗ್ಗೆ ಸ್ಥಳದಲ್ಲಿದ್ದ ಡಿ.ಹೆಚ್.ಓ ಡಾ.ಇಂದುಮತಿ ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ ಹಾಗೂ ಪಿ.ಹೆಚ್.ಸಿ. ವೈದ್ಯ ಡಾ.ಸವಿತಾ ಅವರಿಂದ ಮಾಹಿತಿ ಪಡೆದುಕೊಂಡ ಸಚಿವರು ಗರ್ಭಿಣಿ ಬಾಣಂತಿಯರಿಗೆ ಹಣ್ಣು, ಮಾತ್ರೆ ಒಳಗೊಂಡ ಎ.ಎನ್.ಸಿ. ಕಿಟ್ ವಿತರಿಸಿದರು.ಇದೇ ಸಂದರ್ಭದಲ್ಲಿ ಕೊಂಕಣ ರೈಲ್ವೆ ಕಾಪೆರ್Çೀರೇಷನ್ ಲಿ. ಸಿ.ಎಸ್.ಆರ್. ನಿಧಿಯಡಿ ನೀಡಿರುವ ರಕ್ತ ಪರೀಕ್ಷೆ, ಲ್ಯಾಬ್, ಸ್ಕ್ಯಾನಿಂಗ್ ಸೌಲಭ್ಯವುಳ್ಳ ಮೋಬೈಲ್ ಯೂನಿಟ್ ವೀಕ್ಷಿಸಿದರು.
ಸಿ.ಟಿ.ಸ್ಕ್ಯಾನ್ ಉದ್ಘಾಟನೆ;
ಚಿತ್ತಾಪೂರ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಗೂ ಭೇಟಿ ನೀಡಿದ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು ಅಲ್ಲಿ ಹೊಸದಾಗಿ ಸ್ಥಾಪಿಸಿರುವ ಸಿ.ಟಿ.ಸ್ಕ್ಯಾನ್ ಯಂತ್ರವನ್ನು ಉದ್ಘಾಟಿಸಿದರು. ಪಕ್ಕದಲ್ಲಿಯೆ ನಿರ್ಮಾಣವಾಗುತ್ತಿರುವ ಯಾದಗಿರಿ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಕಾಮಗಾರಿಯೂ ವೀಕ್ಷಿಸಿದ ಸಚಿವರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.
ಅಂಗನವಾಡಿಗೆ ಭೇಟಿ;
ಶಹಾಪೂರ ತಾಲೂಕಿನ ಡೋರನಹಳ್ಳಿಯ ಅಂಗನವಾಡಿ ಕೇಂದ್ರವೊಂದಕ್ಕೆ ಭೇಟಿ ನೀಡಿದ ಸಚಿವರು ಅಂಗನವಾಡಿಯ ದೈನಂದಿನ ದಿನಚರಿ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯಿಂದ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಾದ ಪುμÁ್ಪ, ತನುಶ್ರೀ ಅವರು ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕಟ್ ಮಾಡಲಾಯಿತು. ಸಚಿವರು ಮಕ್ಕಳಿಗೆ ಶುಭ ಕೋರಿದರು. ನಂತರ ಮಕ್ಕಳೊಂದಿಗೆ ಗ್ರೂಪ್ ಫೆÇೀಟೊ ಸಹ ತೆಗೆಸಿಕೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕವಿತಾಳ ಇದ್ದರು. ನಂತರ ಸಚಿವರು ಗ್ರಾಮದಲ್ಲಿನ ಎಮ್ಮೆಗಳ ಮತ್ತು ಕುರಿ ಕೊಟ್ಟಿಗೆಗೆ ಭೇಟಿ ನೀಡಿ ವೀಕ್ಷಿಸಿದರು.
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ,
ಡಿ.ಸಿ. ಡಾ.ಆರ್.ರಾಗಪ್ರಿಯಾ, ಎಸ್.ಪಿ. ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಅಮರೇಶ ನಾಯ್ಕ್, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಶಾಲಂ ಹುಸೇನ್ ಸೇರಿದಂತೆ ಮತ್ತಿತರಿದ್ದರು.