ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಿ-ಶಾಸಕ ವೆಂಕಟರಡ್ಡಿ
ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಲು ಶಾಸಕರ ಸಲಹೆ
ಯಾದಗಿರಿಃ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಹೀಗಾಗಿ ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆ ಶಿಬಿರದ ಮೂಲಕ ಆಯೋಜಿಸುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯಾದಗಿರಿ ಶಾಸಕರಾದ ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಸಲಹೆ ನೀಡಿದರು.
ಯಾದಗಿರಿ ನಗರದ ಭೋವಿವಾಡದಲ್ಲಿ ರವಿವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಮುಕ್ತಿ ಆರ್ಗನೈಜೇಶನ್ ಫಾರ್ ಸೋಷಿಯಲ್ ಆ್ಯಂಡ್ ಎಕಾನಾಮಿಕ್ ಚೇಂಜ್, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಜೆಎನ್-ನರ್ಮ್-ಐಎನ್‍ಎಸ್‍ಡಿಪಿ(ಪ್ಯಾಕೆಜ್ ನಂ.18) ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ, ಬಡವರಿಗೆ, ಸಾಮಾನ್ಯ ಜನರ ಆರೋಗ್ಯ ತಪಾಸಣೆ ಮಾಡುವುದು ಸಾಮಾಜಿಕ ಕಳಕಳಿಯ ಪ್ರತೀಕವಾಗಿದೆ ಇದೊಂದು ಸಮಾಜಿಕ ಸೇವೆಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಕು. ಲಲಿತಾ ಮೌಲಾಲಿ ಅನಪೂರ, ಸವಿತಾ ಶರಣಗೌಡ, ಮೊಹನ್ ಬಾಬು, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾದ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸತ್ಯಪ್ರಕಾಶ ಅವರು 50 ಜನರಿಗೆ ಆರೋಗ್ಯ ತಪಾಸಣೆ ಮಾಡಿದರು. ನಗರದ 4 ಹಾಗೂ 5ನೇ ವಾರ್ಡಿನ ಜನರು ಭಾಗವಹಿಸಿದ್ದರು. ಗುರುಪಾದಯ್ಯ ಸ್ವಾಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮುಕ್ತಿ ಆರ್ಗನೈಜೇಶನ್ ಫಾರ್ ಸೋಷಿಯಲ್ ಆ್ಯಂಡ್ ಎಕಾನಾಮಿಕ್ ಚೇಂಜ್, ಕಲಬುರಗಿ ಸಂಸ್ಥೆಯ ಕಾರ್ಯಕ್ರಮ ಆಯೋಜಕರಾದ ಬಸರಡ್ಡಿಗೌಡ ಬಲಕಲ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.