ಜ.19 ರಂದು ಕೊಡೆಕಲ್‍ಗೆ ಮೋದಿ- ವೀಕ್ಷಣೆಗೆ ಶಹಾಪುರದಿಂದ 50 ಸಾವಿರ ಮಂದಿ
ಕ್ಷೇತ್ರದಿಂದ 50 ಸಾವಿರ ಜನ ತೆರಳುವ ನಿರೀಕ್ಷೆ
ಜ.19 ರಂದು ಕೊಡೆಕಲ್‍ಗೆ ಮೋದಿ
ಕ್ಷೇತ್ರದಿಂದ 50 ಸಾವಿರ ಜನ ತೆರಳುವ ನಿರೀಕ್ಷೆ
yadgiri,ಶಹಾಪುರಃ ದೇಶದ ಮೊದಲ ಪ್ರಾಜೆಕ್ಟ್ ಮತ್ತು ಏಷ್ಯಾಖಂಡದಲ್ಲಿಯೇ ಬಹುದೊಡ್ಡ ಯೋಜನೆಯಾದ ಸ್ಕಾಡಾ ಯಾದಗಿರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇದೇ ಜ.19 ರಂದು ಬೆಳಗ್ಗೆ 11 ಗಂಟೆಗೆ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ಪ್ರಧಾನಿ ಮೋದಿಜಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದ್ದು, ಕ್ಷೇತ್ರದಿಂದ ಸುಮಾರು 50 ಸಾವಿರ ಜನರು ತೆರಳುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬಿಜೆಪಿಯಿಂದ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾರಾಯಣಪುರ ಎಡದಂಡೆ ಕಾಲುವೆಗೆ ಜಿಐಎಸ್ ಆಧಾರಿತ ಸ್ವಯಂಚಾಲಿತ ಯಾಂತ್ರಿಕೃತ ತಂತ್ರಜ್ಞಾನ ಯಾದಗಿರಿ ಜಿಲ್ಲೆಯ ರೈತಾಪಿ ವರ್ಗಕ್ಕೆ ವರದಾನವಾಗಲಿದ್ದು, ರೈತರ ನೀರಿನ ಬವಣೆ ನಿವಾರಿಸಿ ಕೃಷಿಗೆ ಹೆಚ್ಚಿನ ಅನುಕೂಲ ಕಲ್ಪಿಸಿ ಆಹಾರ ಉತ್ಪಾದನೆಗೆ ಸಹಕಾರವಾಗಲಿದೆ.
ಅಲ್ಲದೆ ಈ ಯೋಜನೆಯು ಹೆಚ್ಚಿನ ನೀರು ಪೋಲಾಗದಂತೆ ಕಾರ್ಯನಿರ್ವಹಿಸುವ ಅದ್ಭುತ ತಂತ್ರಜ್ಷಾನ ಹೊಂದಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತಾಪಿ ಜನರ ಭೂಮಿಗೂ ನೀರು ತಲುಪುವ ಸಾಧ್ಯತೆಯನ್ನು ಹೊಂದಿದೆ.
ಜನಪರ, ರೈತರ ಹಿತ ಕಾಪಾಡುವ ದೂರದೃಷ್ಟಿ ಹೊಂದಿದ ದೇಶದ ಪ್ರಧಾನಿ, ವಿಶ್ವ ನಾಯಕ ಮೋದಿಜಿಯವರು ಈ ಯೋಜನೆಯನ್ನು ಸಾಕಾರಗೊಳಿಸಲಿದ್ದು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಮುಖಂಡ ಅಮೀನರಡ್ಡಿ ಯಾಳಗಿ ಮಾತನಾಡಿ, ಅದ್ಭುತ ತಂತ್ರಜ್ಞಾನ ಹೊಂದಿದ ಸ್ಕಾಡಾ ಯೋಜನೆ ಜಾರಿಯಿಂದ ರೈತರಿಗೆ ಅನುಕೂಲವಾಗಲಿದೆ. ಸಮರ್ಪಕ ನೀರು ಹರಿಸಲು ಈ ಯೋಜನೆ ಅತ್ಯುತ್ತಮ ಕಾರ್ಯ ನಿರ್ವಹಿಸಲಿದೆ. ಈ ಯೋಜನೆ ದೇಶದಲ್ಲಿಯೇ ಪ್ರಥಮವಾಗಿ ನಮ್ಮ ಜಿಲ್ಲೆಯೇ ಜಾರಿಗೊಳಿಸಿರುವದು ಸಂತಸ ಹಿಮ್ಮಡಿಗೊಳಿಸಿದೆ. ಈ ಯೋಜನೆಯ ಸದಾವಕಾಶ ಕಲ್ಪಿಸಿಕೊಟ್ಟ ಕೇಂದ್ರದ ಸಂಬಂಧಪಟ್ಟ ಮಂತ್ರಿ, ಹಾಗೂ ಪ್ರಧಾನಿ ಮೋದಿಜೀಯವರಿಗೆ ಅಭಿನಂದನೆಗಳನ್ನು ಅರ್ಪಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ರಾಜೂಗೌಡ ಉಕ್ಕಿನಾಳ ಕೊಡಕಲ್ಲ ಗ್ರಾಮದಲ್ಲಿ ನಡೆಯಲಿರುವ ಜ.19 ರ ಕಾರ್ಯಕ್ರಮ ಯಶಸ್ವಿಗೆ ಕಾರ್ಯಕರ್ತರು ಪಣ ತೊಟ್ಟಿದ್ದು, ನಾಗರಿಕರು, ಮೋದಿಜೀವರ ಅಪಾರ ಅಭಿಮಾನಿ ಬಳಗ ಕಾರ್ಯೋನ್ಮುಕರಾಗಿದ್ದಾರ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ, ದೇವು ಕೋನೇರ, ಗುರು ಕಾಮಾ, ರಾಜಶೇಖರ ಗೂಗಲ್, ಮಲ್ಲಿಕಾರ್ಜುನ ಕಂದಕೂರ, ವೆಂಕಟರಡ್ಡಿ ಅಬ್ಬೆತುಮಕೂರ ಇತರರು ಉಪಸ್ಥಿತರಿದ್ದರು.
ಬೆಳಗ್ಗೆ 8 ಗಂಟೆಗೆ ಹೊರಡಿ..
ಜ.19 ರಂದು ಬೆಳಗ್ಗೆ ನಿಗದಿತ ಸಮಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ನಮ್ಮ ಕ್ಷೇತ್ರದ ಕಾರ್ಯಕರ್ತರು ಅಭಿಮಾನಿಗಳು ಬೆಳಗ್ಗೆ 8 ಗಂಟೆಗೆ ಗ್ರಾಮಗಳಿಂದ ತಮ್ಮ ತಮ್ಮ ವ್ಯವಸ್ಥಿತ ವಾಹನಗಳೊಂದಿಗೆ ಬಿಡಬೇಕು. 9 ರಿಂದ 10 ಗಂಟೆಯೊಳಗೆ ಕಾರ್ಯಕ್ರಮದ ಸ್ಥಳ ತಲುಪಬೇಕು ಎಂದು ಮಾಜಿ ಶಾಸಕ ಗುರು ಪಾಟೀಲ್ ಹಾಗೂ ಅಮೀನರಡ್ಡಿ ಪಾಟೀಲ್ ಯಾಳಗಿ ಮನವಿ ಮಾಡಿದ್ದಾರೆ.