ಹುಬ್ಬಳ್ಳಿಯ ಗಣೇಶಪೇಟೆ ಪಾಕಿಸ್ತಾನದಂತಿದೆ ಅಂದಿದ್ದ ಮೌಲ್ವಿ ಬಂಧನ!
ಹುಬ್ಬಳ್ಳಿ: ನಗರದ ಗಣೇಶಪೇಟೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಪಾಕಿಸ್ತಾನ ನೋಡಲು ಅಲ್ಲಿಗೆ ಹೋಗಬೇಕಿಲ್ಲ. ಗಣೇಶಪೇಟೆಯೇ ಪಾಕಿಸ್ತಾನದಂತೆ ಗೋಚರಿಸುತ್ತಿದೆ ಅಂದಿದ್ದ ಗಣೇಶಪೇಟೆ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ ಖೈರಾತಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಮೌಲ್ವಿ ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ, ಮೌಲ್ವಿ ನೀಡಿದ ದೇಶದ್ರೋಹಿ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪರಿಣಾಮ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಮ್.ಎನ್.ನಾಗರಾಜ್ ಸೂಚನೆ ಮೇರೆಗೆ ಎಸಿಪಿ ದಾವೂದ್ ಖುದ್ದಾಗಿ ಈ ಬಗ್ಗೆ ಕಲಂ 153ರ ಅಡಿಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೌಲ್ವಿ ದೇಶದ್ರೋಹಿ ಹೇಳಿಕೆ ನೀಡಿದ ವೇದಿಕೆಯಲ್ಲಿ ಎಸಿಪಿ ದಾವೂದ್ ಸಹ ಉಪಸ್ಥಿತರಿದ್ದರು.
ಶಹರ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ರಾಜ್ಯದ ಜನರ ಕ್ಷಮೆ ಕೇಳುವುದಾಗಿ ಹೇಳಿದ್ದರು. ತದ ನಂತರ ಮಧುಮೇಹ ಹಾಗೂ ರಕ್ತದ ಒತ್ತಡದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ, ಇಂದು ಶಹರ ಠಾಣೆ ಪೊಲೀಸರು ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಯನ್ನು ಬಂಧಿಸಿದ್ದಾರೆ.