ರಾಜ್ಯದ 19.84 ಲಕ್ಷ ರೈತರಿಗೆ ಸಿಗಲಿದೆ ಬರ ಪರಿಹಾರ; ಹಣ ರೈತರ ಖಾತೆಗೆ ಜಮಾ

(drought relief amount) ಕಳೆದ ವರ್ಷ ಮಳೆ ಕೈಕೊಟ್ಟ ಕಾರಣ ಎಲ್ಲೆಡೆ ಬರ ಆವರಿಸಿತ್ತು. ಅಲ್ಲದೆ ರೈತರು ಬೆಳೆದ ಬೆಳೆಗಳು ನಾಶವಾಗಿತ್ತು. ತೀವ್ರ ಬರದಿಂದ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿತ್ತು. ರಾಜ್ಯದ ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಕ್ಕೆ ಜೀವನ ನಿರ್ವಹಣೆಗಾಗಿ ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಗರಿಷ್ಠ 2874 ರೂ. ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ಮುಂದಾಗಿದೆ. ಹೌದು, ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಅರ್ಹ ಫಲಾನುಭವಿ ರೈತರಿಗೆ ಹಣ ಜಮಾ:
ರಾಜ್ಯದಲ್ಲಿ ಅರ್ಹರೆಂದು ಗುರುತಿಸಲಾದ 19,82,677 ರೈತರನ್ನು ಒಳಗೊಂಡ 17,84,398 ಸಣ್ಣ, ಅತಿ ಸಣ್ಣ ರೈತ ಕುಟುಂಬಳಿಗೆ ಜೀವನೋಪಾಯ ನಷ್ಟ ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ ದೊರತಿದೆ. ಸದ್ಯದಲ್ಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.
ರಾಜ್ಯದಿಂದ 280 ಕೋಟಿ ರೂ:
19,82,677 ರೈತರನ್ನು ಒಳಗೊಂಡ 17,84,398 ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳನ್ನು ಜೀವನೋಪಾಯ ಪರಿಹಾರ ಪಡೆಯಲು ಗುರುತಿಸಲಾಗಿದೆ. ಪ್ರತಿ ಕುಟುಂಬಕ್ಕೆ ಗರಿಷ್ಠ 2874 ರೂ. ಪಾವತಿಗೆ 512.92 ಕೋಟಿ ರೂ. ಅಗತ್ಯವಿದೆ. NDRF ನಡಿ ಕೇಂದ್ರ 232.40 ಕೋಟಿ ರೂ. ನೀಡಿದೆ. ಪ್ರಸಕ್ತ 2024-25ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಹಂಚಿಕೆಯಾಗಿರುವ 488 ಕೋಟಿ ರೂ. ಪೈಕಿ ಶೇ.50ರಷ್ಟನ್ನು ಅಂದರೆ 244 ಕೋಟಿ ರೂ. ಹಾಗೂ ಉಳಿಕೆ 36.52 ಕೋಟಿ ರೂ.ಗಳನ್ನು ರಾಜ್ಯದಿಂದ ಹೆಚ್ಚುವರಿಯಾಗಿ ಭರಿಸಲಾಗುತ್ತಿದೆ.