ಮಹಿಳಾ ವಾಣಿವಿನಯ ವಿಶೇಷ

ಸಂಸ್ಕೃತಿಯ ಸುಕೃತಿ ನವರಾತ್ರಿ ದಸರಾಃ ಲೇಖಕಿ ಚ.ಸು.ಹ.ಕನ್ನಡತಿ ಬರಹ

ನವರಾತ್ರಿ ದಸರಾ ಮಹೋತ್ಸವ ಕುರಿತ ಬರಹ

ಸಂಸ್ಕೃತಿಯ ಸುಕೃತಿ ಈ ನಮ್ಮ ನವರಾತ್ರಿಯ ದಸರಾ..

ಮೈಸೂರು ದಸರಾ… ಎಷ್ಟೊಂದು ಸುಂದರ…. ಚೆಲ್ಲಿದೆ ನಗೆಯಾ ಪನ್ನೀರ…. ಹಾ ಹಾ..ಹೋ ಹೋ…ಎಂದು ದಸರಾ ಹಬ್ಬ ಬಂತೆಂದರೆ ಈ ಹಾಡು ಎಲ್ಲರ ಬಾಯಲ್ಲಿ ಮನೆ ಮಾತಾಗಿ ಹೊರಹೊಮ್ಮವುದಂತು ಸತ್ಯ.

ಅಬ್ಬಬ್ಬಾ…!!! ಅದೆಂಥ ನೋಟ!, ಎತ್ತ ನೋಡಿದರತ್ತ ಕಣ್ಣಿಗೆ ಆನಂದ, ಉಲ್ಲಾಸ, ಸ್ವರ್ಗವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಭಾಸ, ಮಧುವಣಗಿತ್ತಿಯಂತೆ ಸಿಂಗರಿಸಿಕೊಂಡು ಎಲ್ಲರ ಕಣ್ಮನ ಸೆಳೆಯುವ,ಜಗತ್ತಿಗೆ ಮುಕುಟಮಣಿಯಂತೆ ತನ್ನಡೆಗೆ ಕಂಗೊಳಿಸುವ ಏಕೈಕ ಹಬ್ಬವೆಂದರೆ ಈ ನಮ್ಮ ಮೈಸೂರು ದಸರಾ ಹಬ್ಬ.

ಈ ಹಬ್ಬವನ್ನು ಒಂದೊಂದು ಪ್ರಾಂತದಲ್ಲಿ ಒಂದೊಂದು ತೆರನಾಗಿ ಹೆಸರಿಸಲಾಗುತ್ತದೆ. ದಸರಾ, ನವರಾತ್ರಿ, ಮಹಾನವಮಿ, ದುರ್ಗಾಪೂಜೆಯೆಂದು ಕರೆಯಲಾಗುತ್ತದೆ.

14-15ನೇ ಶತಮಾನದಲ್ಲಿ ವಿಜಯನಗರದ ಅರಸರು ನವಮಿಯ ನಂತರ ಯುದ್ಧಕ್ಕೆ ಹೊರಡುತ್ತಿದ್ದರು ಮೈಸೂರಿನಲ್ಲಿ ದಸರಾ ಆರಂಭಕ್ಕೂ ಮುನ್ನ ದಸರಾ ಹಬ್ಬವನ್ನು ಮೊಟ್ಟಮೊದಲು ಸಾಂಗ್ಯವಾಗಿ ನೆರವೇರಿಸಿದ ಕೀರ್ತಿ ವಿಜಯನಗರದ ಅರಸರಿಗೆ ಸಲ್ಲುತ್ತದೆ.

ಈ ಕುರಿತು ವಿದೇಶಿ ಪ್ರವಾಸಿಗರಲ್ಲಿ ಮಧ್ಯಪ್ರಾಚ್ಯದ ʼಇಬನ್ ಬಟೂಟʼ, ಇಟಲಿಯ ʼನಿಕೊಲೊ-ಡಿ-ಕೊಂಟೆʼ, ರಷ್ಯಾದ ʼನಿಕಿಟಿನ್ʼ, ಲಿಸ್ಬನ್ನ ʼದು ಆರ್ತೆ ಬಾರ್ಬೊಸʼ, ಪೋರ್ಚುಗೀಸ್ ದೇಶದ ʼಡೊಮಿಂಗೊ ಪಯಸ್ʼ, ʼನ್ಯೂನಿಜ್ʼ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.

ನವರಾತ್ರಿ ಆಚರಣೆಯ ವಿಶೇಷ :

ನವರಾತ್ರಿ ಎಂಬುದು ಒಂಬತ್ತು ರಾತ್ರಿಗಳ ಸಮೂಹವೇ ಶರನ್ನವರಾತ್ರಿ ಎಂದು ಕರೆಯಲಾಗುತ್ತದೆ ಇದನ್ನು ನಾರದರು ರಾಮನಿಗೆ ರಾವಣನನ್ನು ಕೊಲ್ಲಲು ಶರವನ್ನವರಾತ್ರಿವ್ರತ ಮಾಡಲು ಹೇಳಿದ್ದರು ಎಂಬುದರ ಒಂದು ಪ್ರತೀತಿ.

ಮತ್ತು ದ್ವಾಪರ ಯುಗದಲ್ಲಿ ಪಾಂಡವರು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದ ತಮ್ಮ ಆಯುಧಗಳನ್ನು ವಿಜಯದಶಮಿಯ ದಿನ ತೆಗೆದುಕೊಂಡು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯ ಸಾಧಿಸಿದುದರ ಸಂಕೇತ. ಹಾಗೂ ಮಹಿಷಾಸುರ ರಾಕ್ಷಸನನ್ನು ಸಂಹರಿಸಲು ಶ್ರೀದೇವಿಯು 9 ದಿನ ಅವತಾರಗಳನ್ನು ಎತ್ತಿದಳು ಅವುಗಳು ಇಂತಿವೆ,

1.ಶೈಲಪುತ್ರಿ: ಶೈಲ ಪುತ್ರಿದೇವಿಯು ಪರ್ವತರಾಜ ಹಿಮವಂತನ ಮಗಳಾದ ಪಾರ್ವತಿಯ ರೂಪದಲ್ಲಿ ಶೈಲ ಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ.

2.ಬ್ರಹ್ಮಚಾರಿಣಿ : ಬ್ರಹ್ಮಚಾರಿಣಿ ದೇವಿಯು ಎಲ್ಲಾ ಸ್ಥಿರ ಮತ್ತು ಚರ ಜ್ಞಾನವನ್ನು ಬಲ್ಲವಳು ಕೋಪಮುಕ್ತ ಹಾಗೂ ಶೀಘ್ರವಾಗಿ ವರವನ್ನು ನೀಡುವಳು

3.ಚಂದ್ರಘಂಟ: ಈ ದೇವಿ ತುಂಬಾ ಶಾಂತಿಯುತ ಪರೋಪಕಾರಿ ಲೌಕಿಕ ತೊಂದರೆಗಳಿಂದ ದೂರ ಮಾಡುತ್ತಾಳೆ
4.ಕುಷ್ಮಾoಡ: ಈ ದೇವಿ ಬ್ರಹ್ಮಾಂಡ ಸೃಷ್ಟಿಸಿದ ಮೃದು ನಗೆ ಸ್ವಭಾವದವಳು ದುರ್ಗೆಯ ರೂಪವಾಗಿದ್ದಾಳೆ.

5.ಸ್ಕಂದಮಾತಾ: ಈ ದೇವಿ ಯಶಸ್ಸಿನ ರೂಪವಾಗಿದ್ದಾಳೆ ಜ್ಞಾನ ವಿಜ್ಞಾನ ಧರ್ಮ ಕರ್ಮ ಕೃಷಿ ಉದ್ಯಮದ ಒಳಗೊಂಡ ಮಾತೆಯಾಗಿದ್ದಾಳೆ

6.ಕ್ಯಾತ್ಯಾಯಿನಿ: ಈ ದೇವಿ ಮಹರ್ಷಿ ಕ್ಯಾತ್ಯಾಯನರಿಂದ ಸಂತಸಗೊಂಡ ಮೊದಲು ಪೂಜಿಸಲ್ಪಡುವಳು

7.ಕಾಳ ರಾತ್ರಿ: ವಿನಾಶಕಾರಿ ಗುಣಗಳಿಂದ ಶತ್ರುಗಳನ್ನು ದುಷ್ಟರನ್ನು ನಾಶ ಮಾಡುವ ದುರ್ಗಾದೇವಿಯ ಏಳನೇ ರೂಪವಾಗಿದೆ

8.ಮಹಾಗೌರಿ: ಜನನವಾದ ದಿನವೇ ಅವಳಿಗೆ ಎಂಟು ವರ್ಷ ಅದಕ್ಕಾಗಿ ಅವಳನ್ನು ನವರಾತ್ರಿಯ ಎಂಟನೇ ದಿನ ಪೂಜಿಸುತ್ತಾರೆ ಪೂಜಿಸಲಾಗುತ್ತದೆ

9.ಸಿದ್ಧಿದಾತ್ರಿ: ಸಿದ್ದಿ ಮತ್ತು ಮೋಕ್ಷವನ್ನು ನೀಡುವಳು ವಿಷ್ಣುವಿನ ಪ್ರೀತಿಯ ಕಮಲದ ಆಸನದ ಮೇಲೆ ವಿದ್ಯಾ ದೇವತೆಯಂತೆ ರಾರಾಜಿಸುವಳಾಗಿದ್ದಾಳೆ.

ಹೀಗೆ ಒಂಬತ್ತು ಅವತಾರಗಳನ್ನುಎತ್ತಿದ ದೇವಿಯನ್ನು 9 ದಿನ ಭಕ್ತಿಯಿಂದ ಆರಾಧಿಸುವ ಭಕ್ತರಿಗೆ ಸಕಲವನ್ನು ನೀಡುವ ಮಾತೆಯಾಗಿದ್ದಾಳೆ.

ಮೊದಲ ಮೂರು ದಿನಗಳು ತಮೋ ಗುಣವನ್ನು ಕಡಿಮೆ ಮಾಡಲು,ನಂತರದ ಮೂರು ದಿನಗಳು ರಜೊಗುಣವನ್ನು ವೃದ್ಧಿಸುತ್ತದೆ ಮತ್ತು ಕೊನೆಯ ಮೂರು ದಿನಗಳು ಸಾಧನೆಯನ್ನು ತೀವ್ರಗೊಳಿಸಲು ಪೂಜೆಮಾಡುವ ವಾಡಿಕೆ ಇದೆ.

ಚಿನ್ನದ ಅಂಬಾರಿ ಮೈಸೂರು ತಲುಪಿದ್ದು ಹೀಗೆ..

ಜಂಭುಸವಾರಿಗೆ ಚಿನ್ನದ ಅಂಬಾರಿಯೇ ಕೇಂದ್ರ ಬಿಂದುವಾಗಿ ಮುಕುಟ ಮಣಿಯಂತೆ ಮೆರಗು ನೀಡುತ್ತದೆ. ಅಂಬಾರಿ ಮೂಲತಃ ಮಹಾರಾಷ್ಟ್ರದ ದೇವಗಿರಿಯಲ್ಲಿತ್ತು ದೇವಗಿರಿ ನಾಶವಾದ ಮೇಲೆ ಇದನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗನಾಯಕರಿಗೆ ಕಾಪಾಡುವಂತೆ ಕೊಟ್ಟಿದ್ದರು.

ಆಗ ಮುಮ್ಮಡಿ ಸಿಂಗ ನಾಯಕರು ರಾಮದುರ್ಗ ಕೋಟೆಯಲ್ಲಿ ಮುಚ್ಚಿಟ್ಟಿದ್ದರು ಮಗ ಕಪಿಲರಾಯ ರಾಜ್ಯ ವಿಸ್ತರಿಸಿದಾಗ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ,ಪೂಜೆ ಪ್ರಾರಂಭಿಸುತ್ತಾರೆ 1327ರಲ್ಲಿ ದೆಹಲಿ ಸುಲ್ತಾನರ ದಾಳಿಗೆ ಕಂಪಿಲನ ರಾಜ್ಯ ನಾಶವಾದಾಗ ಹಕ್ಕ- ಬುಕ್ಕರು ಆ ಅಂಬಾರಿಯನ್ನು ಹುತ್ತ ಒಂದರಲ್ಲಿ ಮುಚ್ಚಿಟ್ಟಿದ್ದರು. ಕಾಲ ಕ್ರಮೇಣ ಹಕ್ಕ-ಬುಕ್ಕರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು.

ನಂತರ ರಾಜಧಾನಿಯನ್ನು ಹಂಪೆಗೆ ಎರಡನೇ ರಾಜಧಾನಿಯಾಗಿ ಮಾಡಿ ಅಂಬಾರಿಯನ್ನು ಹಂಪಿಗೆ ರವಾನಿಸುವರು. ವಿಜಯನಗರದ ಸಂಗಮ, ಸಾಳ್ವ, ತುಳು, ಅರವೀಡು ಎಂಬ ನಾಲ್ಕು ವಂಶಗಳು ನಾಶವಾದಾಗ ಅಂಬಾರಿ ರಕ್ಷಣೆಗೆ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರಿಸುತ್ತಾರೆ ಕೆಲವು ವರ್ಷಗಳ ನಂತರ ಅಂಬಾರಿ ಶ್ರೀರಂಗಪಟ್ಟಣಕ್ಕೆ ಬರುತ್ತದೆ ಕೊನೆಗೆ ಮೈಸೂರಿಗೆ ರವಾನೆ ಯಾಗತ್ತದೆ.ಇಂದು ಮೈಸೂರಿನ ಅರಮನೆಯಲ್ಲಿ ಸುರಕ್ಷಿತವಾಗಿ ಇರುವುದರ ಜೊತೆಗೆ ಅರಮನೆಗೆ ಹಾಗೂ ಮೈಸೂರಿಗೆ ಕಳಶದಂತಿದೆ.

ಸ್ವಾತಂತ್ರ್ಯ ಪೂರ್ವದ ಮೈಸೂರ ದಸರಾ..

ಯದು ವಂಶದ ರಾಜರು 1399 1423 ರ ಹೊತ್ತಿಗೆ ಆಗ್ನೇಯ ದಿಕ್ಕಿನ ಕಡೆಗೆ ಬಂದು ಮೈಸೂರಿನಲ್ಲಿ ಸಂಸ್ಥಾನ ಸ್ಥಾಪನೆಗೈದು 1578ರ ಸುಮಾರಿಗೆ ದೊಡ್ಡ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸಿ ಶ್ರೀರಂಗಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡುರು ಆ ಸಮಯದಲ್ಲಿ ರಾಜ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಮಹಾನವಮಿಯನ್ನು ಆಚರಿಸುತ್ತಿದ್ದರು 1610 ರಲ್ಲಿ ವಿಜಯದಶಮಿ ಮೆರವಣಿಗೆಯನ್ನು ಆರಂಭಿಸಿದರು.

ಅಂದಿನಿಂದ ಒಂಬತ್ತನೇ ಅರಸರಾದ ಚಾಮರಾಜ ಒಡೆಯರ್ ವರೆಗೂ ವಿಜಯನಗರದ ಶೈಲಿಯಲ್ಲಿಯೇ ಮೆರವಣಿಗೆ ಮಾಡುತ್ತಿದ್ದರು ಈ ಮಧ್ಯೆ ಮುಸಲ್ಮಾನರ ಹೈದರಾಲಿ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಾಗ ವಿಜಯದಶಮಿಯನ್ನು ಸಾರ್ವತ್ರಿಕವಾಗಿ ಆಚರಿಸುವುದು ನಿಂತು ಹೋಗಿತ್ತು ನಂತರ ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನಕ್ಕೆ ಒಳಪಟ್ಟಿತ್ತು.

ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ 1799 ರಲ್ಲಿ ತಮ್ಮ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಿಸಿ ದಸರಾ ಆಚರಣೆಗಳನ್ನು ದಿಗ್ವಿಜಯಾರ್ಥವಾಗಿ ನಡೆಸುವ ಬದಲು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದು, ಆಚರಿಸುವ ಪದ್ಧತಿ ಪ್ರಾರಂಭವಾಯಿತು. ಪ್ರತಿ ವರ್ಷವೂ ಅರಸರಿಂದಲೇ ದಸರಾ ಹಬ್ಬವು ನಡೆಯುತ್ತಿದುದು 1947 ರಲ್ಲಿ ಶ್ರೀ ಜಯ ಚಾಮರಾಜ ಒಡೆಯರ್ ಕಾಲಕೆ ಕೊನೆ ಗೊಂಡಿತು.

ಸ್ವಾತಂತ್ರ್ಯ ನಂತರದ ಮೈಸೂರ ದಸರಾ…

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಕರ್ನಾಟಕದ ಮುಖ್ಯಮಂತ್ರಿಗಳಾದ ಚೆಂಗಲ್ ರಾಯರೆಡ್ಡಿ ಅವರಿಗೆ ಒಡೆಯರ್ ಅಧಿಕಾರವನ್ನು ಹಸ್ತಾಂತರಿಸಿ, ತಾವು ಸರ್ಕಾರದ ಪ್ರತಿನಿಧಿಯಾಗಿ ಅರಮನೆ ಹಾಗೂ ದಸರಾ ಹಬ್ಬವನ್ನು ಮುಂದುವರಿಸಿಕೊಂಡು ಬಂದರು ಅಂದಿನಿಂದ ಮೈಸೂರು ದಸರಾದ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ಶ್ರೀ ಚಾಮುಂಡೇಶ್ವರಿ ಮೂರ್ತಿಯನ್ನು ಮೆರವಣಿಗೆಯಲ್ಲಿಟ್ಟು ಜಂಬುಸವಾರಿ ನೆರವೇರಿಸುವುದು ಪರಂಪರೆಯಾಗಿದೆ.

ವಿಜಯದಶಮಿಯಂದು ಜಂಬುಸವಾರಿಯ ಜೊತೆಗೆ ಅನೇಕ ಕಲಾತಂಡಗಳು, ಅದ್ಭುತ ಮಾಹಿತಿ ಕೊಡುವ ಸ್ತಬ್ದ ಚಿತ್ರಗಳು, ತರಬೇತಿಗೊಂಡ ಅಲಂಕೃತ ಅರಮನೆ ಆನೆಗಳು, ಕುದುರೆಗಳು, ಸಾರೋಟಗಳು, ಜನಪದ ಕಲಾ ತಂಡಗಳು, ಸಂಬಳವಾದನ, ಡೊಳ್ಳು ಕುಣಿತ, ಪಂಜಿನ ಕವಾಯತು ಬೇಡರ ಕುಣಿತ, ಹುಲಿ ವೇಷ, ಗಾರುಡಿ ಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ ಹೀಗೆ ವೈವಿಧ್ಯಮಯ ಜನಪದ ಕಲಾತಂಡಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ವಿವಿಧ ಭಾಗಗಳಿಂದ ಬಂದು ಭಾಗವಹಿಸಿ ಪ್ರೇಕ್ಷಕರ ಕಣ್ಮನ ತಣಿಸುವರು.

ಒಟ್ಟಿನಲ್ಲಿ ನಮ್ಮ ಮೈಸೂರು ದಸರಾವನ್ನು ಎಷ್ಟು ಹೊಗಳಿದರೂ ಸಾಲದು ಎಲ್ಲಿ ನೋಡಿರತ್ತ ಕಂಗೊಳಿಸುತ್ತದೆ ವಿಶ್ವಕ್ಕೆ ಒಂದು ವಿಶೇಷ ಮಾದರಿಯಾಗಿರುವ ಸಂಸ್ಕೃತಿ. ಅತೀ ಸುಂದರವಾದ ಮೈಸೂರು ದಸರಾ ಸಂಭ್ರಮ ಎಲ್ಲರಿಗೂ ಹರ್ಷವನ್ನು ತಂದುಕೊಡುತ್ತದೆ.ನಮ್ಮೆಲ್ಲರ ನಾಡ ಹಬ್ಬವಾಗಿ ವಿಜೃಂಭಣೆ, ಸಂಭ್ರಮ, ಸಡಗರ ಇಂದಿಗೂ ಸಾಂಗೋಪವಾಗಿ ನೆಡೆಯುತ್ತಿರುವುದು ನಮ್ಮ ಹೆಮ್ಮೆಯ ವಿಷಯ

ಚ.ಸು.ಹ.ಕನ್ನಡತಿ
ಲೇಖಕಿ, ಉಪನ್ಯಾಸಕಿ
ಚಿಕ್ಕಬಳ್ಳಾಪುರ
9902037117

Related Articles

Leave a Reply

Your email address will not be published. Required fields are marked *

Back to top button