ಪ್ರಮುಖ ಸುದ್ದಿ
ಯಕ್ಷಗಾನ ಕಲಾವಿದ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ವಿಧಿವಶ
ಯಕ್ಷಗಾನ ಕಲೆಯ ದಂತಕಥೆ, ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ವಿಧಿವಶರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಚಿಟ್ಟಾಣಿಯಲ್ಲಿ 1933ರ ಜನೇವರಿ 01ರಂದು ಜನಿಸಿದ್ದ ಅವರು ಲೆಕ್ಕವಿಲ್ಲದಷ್ಟು ಕಡೆ ಯಕ್ಷಗಾನ ಕಲೆ ಪ್ರದರ್ಶನ ನೀಡಿದ್ದರು. ಯಕ್ಷಗಾನ ಕಲೆಯ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಅವರು ಯಕ್ಷಗಾನ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಕಳೆದ ಸೆಪ್ಟೆಂಬರ್ 28 ರಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಗ್ರಾಮದಲ್ಲಿ ಯಕ್ಷಗಾನ ಪ್ರದರ್ಶನದ ವೇಳೆಯೇ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಪಾಶ್ವವಾಯು, ನಿಮೋನಿಯಾದಿಂದ ಅವರು ಬಳಲುತ್ತಿದ್ದರು. ಉಡುಪಿಯ ಮಣಿಪಾಲ್ ನ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆ ಉಸಿರೆಳೆದಿದ್ದಾರೆ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಂತ ಮೇರು ಕಲಾವಿದರನ್ನು ಕಳೆದುಕೊಂಡಿರುವ ಯಕ್ಷಗಾನ ಕಲಾಲೋಕ ನಿಜಕ್ಕೂ ಬಡವಾಗಿದೆ.