ಪ್ರಮುಖ ಸುದ್ದಿ

ಮತ ಮಾರಿಕೊಂಡವರಿಗೆ ಪಾಠ ಕಲಿಸಿ- ಪ್ರಿಯಾಂಕ್ ಖರ್ಗೆ 

ಉಮೇಶ ಜಾಧವ ವಿರುದ್ಧ ಗುಡುಗಿದ ಪ್ರಿಯಾಂಕ್ ಖರ್ಗೆ 

ಕಲಬುರಗಿಃ ಇತಿಹಾಸದಲ್ಲಿಯೇ ಶಾಸಕ‌ರೊಬ್ಬರು
ಮತಗಳನ್ನು ಮಾರಿಕೊಂಡಿದ್ದು ಇದೇ ಮೊದಲು. ಹಾಗಾಗಿ ಮತ ಮಾರಿಕೊಂಡವರಿಗೆ ತಕ್ಕ ಪಾಠ‌ಕಲಿಸಿ ಎಂದು
ಸಮಾಜಕಲ್ಯಾಣ ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಕರೆ‌ನೀಡಿದರು.

ಚಿಂಚೋಳಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿ ಸುಭಾಷ್ ರಾಠೋಡ್ ಅವರ ಪರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಜಾತಂತ್ರ ಎಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂದು ಎಲ್ಲರಿಗೂ ಗೊತ್ತು ಆದರೆ ಜಾಧವ ಪ್ರಕಾರ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎನ್ನುವುದಾಗಿದೆ. ಜನರಿಗೆ ದ್ರೋಹ ಬಗೆದ ಜಾಧವ್ ಮೋದಿ ಹೆಸರಲ್ಲಿ ಮತ ಕೇಳಲು ಬರುತ್ತಿದ್ದಾರೆ. ಶಾಸಕರಾಗಿದ್ದಾಗ ಅವರ ಸಾಧನೆ ಏನು? ರೈತರ ಬಡವರ ಪರ ಅವರ ಅಭಿವೃದ್ದಿ ಏನು ? ಎನ್ನುವುದನ್ನು ಅವರೇ ಹೇಳಬೇಕು ಎಂದು ಟೀಕಿಸಿದರು.

ಮೋದಿ‌ ಸರಕಾರದ ವೈಫಲ್ಯಗಳ ಪಟ್ಟಿ ಮಾಡಿದ ಸಚಿವರು ಚುನಾವಣೆ ಸಂದರ್ಭದಲ್ಲಿ ಈಗ ಶೌಚಾಲಯ ಕಟ್ಟಿಸುವ ಅವರ ವಾದ ಮರೆಯಾಗಿ ರಾಮಮಂದಿರ ವಿಷಯ ಮುಂದೆ ಬಂದಿದೆ ಎಂದರು.

ದೇಶದ ಇತಿಹಾಸದಲ್ಲಿಯೇ ಅತ್ಯಂತ ಫಾಲ್ತು ಸರಕಾರವೆಂದರೆ ಅದು‌ ಮೋದಿ ಸರಕಾರ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯವರು ತಮ್ಮ ಸರಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಕೇಳದೇ ಸೈನಿಕರ ಹೆಸರೇಳಿಕೊಂಡು ಮತ ಕೇಳುತ್ತಿದ್ದಾರೆ ಅವರಿಗೆ ನಾಚಿಕೆಯಾಗಬೇಕು ಎಂದರು.

ಬಿಜೆಪಿ ಕಾರ್ಯದರ್ಶಿ ರವಿಕುಮಾರ ಹೇಳುತ್ತಾರೆ ಬಿಜೆಪಿಯವರಿಗೆ ದೇಶಭಕ್ತಿ ಇದೆ ಎನ್ನುತ್ತಾರೆ, ದೇಶಕ್ಕೆ‌ ಸ್ವಾತಂತ್ರ್ಯ ಬಂದಾಗ ಎಲ್ಲಿದ್ದರು? ದಂಡಿನ ಸತ್ಯಾಗ್ರಹ, ಸೈಮನ್ ಕಮಿಷನ್‌ ದಂಗೆ ನಡೆದಾಗ ಎಲ್ಲಿದ್ದರು? ದೇಶಕ್ಕೆ ಸ್ವಾತಂತ್ರ್ಯ ತಂದ ಕಾಂಗ್ರೇಸ ಪಕ್ಷಕ್ಕೆ ದೇಶಭಕ್ತಿಯ ಪಾಠ ಹೇಳುತ್ತಾರೆಯೇ? ಎಂದು ಕುಟುಕಿದರು.

ಜಿಲ್ಲೆಯಿಂದ ಜನ ಗುಳೆ ಹೋಗುತ್ತಿದ್ದಾರೆ ಎಂದು‌ ಜಾಧವ್ ಹೇಳುತ್ತಾರೆ, ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿದವರಿಗೆ‌ ಕೇಂದ್ರ ಕೂಲಿ‌ ಕೊಟ್ಟಿಲ್ಲ ತಾಕತ್ತಿದ್ದರೆ ಜಾಧವ್ ಮೋದಿಗೆ ಹೇಳಿಸಿ ಕೂಲಿ ಬಿಡುಗಡೆ ಮಾಡಸಲಿ ಎಂದರು.

ನಾನು ಇಪ್ಪತ್ತು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ತಳಮಟ್ಟದಿಂದ ಕೆಲಸ ಮಾಡಿಕೊಂಡು ಬಂದು ಶಾಸಕ ಸ್ಥಾನಕ್ಕೆ‌ ಸ್ಪರ್ಧಿಸಿ ಸೋತೆ. ಆದರೆ‌ ನೀವು ಎಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದೀರಿ? ಎಂದು ಪ್ರಶ್ನೆ ಮಾಡಿದರು.

ಡಿಎನ್‌ಎ ನೋಡಿ ಟಿಕೇಟ್ ಕೊಡಕ್ಕಾಗಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ, ಕಲಬುರಗಿ ದಕ್ಷಿಣ, ಗುತ್ತೇದಾರ್ ಕುಟುಂಬ, ಚಿಂಚನಸೂರು ಕುಟುಂಬ, ಬಿ.ಜಿ.ಪಾಟೀಲ್ ಅವರು ಕಲಬುರಗಿ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಂತ ಬೇರೆ ಬೇರೆ ಕಡೆಯಲ್ಲಿಯೂ ಬಿಜೆಪಿಯ ಒಂದೇ ಕುಟುಂಬದವರು ರಾಜಕೀಯದಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ‌ ಖರ್ಗೆ ಅವರು ಯಡಿಯೂರಪ್ಪನವರ ಕೈಕಾಲು ಹಿಡಿದು ನೀವು ನಾಮಿನೇಟೆಡ್ ಆಗಿದ್ದೀರಿ ಆದರೆ ನಾನು ಜನರಿಂದ ಆಯ್ಕೆಯಾಗಿದ್ದೇನೆ. ನನ್ನ ಬಗ್ಗೆ ಮಾತನಾಡುವ ಮುನ್ನ ಯೋಚಿಸಿ ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಯೋಚಿಸಿ ಎಂದು ತರಾಟೆಗೆ ತೆಗೆದುಕೊಂಡರು.

ನಮ್ಮ ಕಾರ್ಯಕರ್ತರು, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ‌ ಸುಭಾಷ್ ರಾಠೋಡ್ ಅವರನ್ನು ಗೆಲ್ಲಿಸಲು ಶ್ರಮಿಸಬೇಕು. ಅವರು ರಾಜಕೀಯದಲ್ಲಿ ಹೊಸಬರಲ್ಲ ಜನಪರ ಹೋರಾಟಗಳಿಂದ ಹಂತಹಂತವಾಗಿ ಮೇಲೆ ಬಂದವರು ಹಾಗೂ ವಿದ್ಯಾವಂತರು ಅವರಿಗೆ ನೀವೆಲ್ಲ ಮತ ನೀಡಿ ಬಹುಮತದೊಂದಿಗೆ ಆರಿಸಿ ತರಬೇಕು ಎಂದು ಮನವಿ ಮಾಡಿದರು.

” ಸಣ್ಣಗೆ ಮಳೆ‌ ಬರುತ್ತಿದೆ. ಇದು ಶುಭ ಸೂಚನೆಯಾಗಿದೆ.‌ಮೇ ೨೩ ರಂದು ನಿಮ್ಮ ಪರವಾಗಿ ಬರುವ ಫಲಿತಾಂಶದ ದಿನ ಇನ್ನೂ ಹೆಚ್ಚಿನ ಮಳೆ ಬಂದು ಕೆರೆಕಟ್ಟೆಗಳು ತುಂಬಿ ಜನರಿಗೆ ಒಳ್ಳೆಯದು ಮಾಡಲಿ” ಎಂದು ಆಶಿಸಿದರು.

ಅಭ್ಯರ್ಥಿ ಸುಭಾಷ್ ರಾಠೋಡ್ ಮಾತನಾಡಿ, ಚಿಂಚೋಳಿಯಲ್ಲಿ ರಾಠೋಡ್ ಹಾಗೂ ಜಾಧವ್ ನಡುವಿನ ಹೋರಾಟವಲ್ಲ. ಇದು ಜಾಧವ್ ಹಾಗೂ ಮತಕ್ಷೇತ್ರದ ಲಕ್ಷಾಂತರ ಮತದಾರರ ನಡುವಿನ‌ ಹೋರಾಟವಾಗಿದೆ‌ ಎಂದರು.

ಮಕ್ಕಳ‌ ಮಾರಾಟ, ರೈತರ ಸಮಸ್ಯೆ, ಅರಣ್ಯ‌ ಸಂರಕ್ಷಣೆ ವಿಚಾರದಲ್ಲಿ ಕಳೆದ ಎರಡು‌ ದಶಕಗಳಿಂದ ಹೋರಾಟ ಮಾಡಿಕೊಂಡು ಜನರ ಸೇವೆ ಮಾಡಿಕೊಂಡಿದ್ದೇನೆ. ನಾನು ಸ್ಥಳೀಯನಲ್ಲ ಎಂದು ನನ್ನ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಿಯೇ ಹೋರಾಟ ಮಾಡಿಕೊಂಡಿರುವ ನಾನು ಹೊರಗಿನು ಹೇಗಾಗುತ್ತೇನೆ ಎಂದು ಪ್ರಶ್ನಿಸಿ, ಶ್ರೀಮಂತ ಜಾಧವ್ ಹಾಗೂ ಬಡವ ರಾಠೋಡ್ ಅವರ ನಡುವಿನ ಹೋರಾಟಕ್ಕೆ‌ ನೀವು ಬೆಂಬಲಿಸಬೇಕೆಂದು ಬಸವಣ್ಣನವರ ” ಎಲ್ಲ ವಾಮ ಕ್ಷೇಮ ನಿಮ್ಮದಯ್ಯ ಎಲ್ಲ ಹಾನಿ ವೃದ್ದಿ ನಿಮ್ಮದಯ್ಯ ಬಳ್ಳಿಗೆ ಕಾಯಿ‌ ದಿಮ್ಮಿತ್ತೇ ಕೂಡಲಸಂಗಮದೇವಾ” ವಚನ ಹೇಳುವ ಮೂಲಕ ಮತಯಾಚಿಸಿದರು.

ಜಾಧವ್ ಮುಂಬೈ‌ನಿಂದ ತಂದ ಗಂಟು ತಂದು ಹಂಚುತ್ತಿದ್ದಾರೆ ಅವರ ಗಂಟು ನಮ್ಮ‌ಸ್ವಾಭಿಮಾನಿ ಮತದಾರರ ಮೇಲೆ ಯಾವ ಪ್ರಭಾವ ಬೀರುವುದಿಲ್ಲ ಎಂದು ಹೇಳಿ ರಾಠೋಡ್,‌ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆಂದು ನಾನು ಹಾಕುವುದಿಲ್ಲ, ಚಿಂಚೋಳಿ ಸಂಸ್ಕ್ರತಿಗೆ ನಾನು ಸಾಷ್ಟಾಂಗ ಹಾಕುತ್ತೇನೆ ಎಂದು ಸಾಷ್ಟಾಂಗ ಹಾಕಿದರು.

ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಚಿಂಚೋಳಿ ಉಪ ಚುನಾವಣೆ ನಡೆಯಲು ಜಾಧವ್ ಕಾರಣ. ನಿಮ್ಮೆಲ್ಲರ ನಂಬಿಕೆಗೆ ದ್ರೋಹ ಬಗೆದು ಬಿಜೆಪಿ ಆಮಿಷಕ್ಕೆ ಬಲಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಈಗ ಮತ್ತೆ ಅವರ ಮಗನಿಗೆ ಬಿಜೆಪಿ ಟಿಕೇಟು ಕೊಡಿಸಿ ದ್ದಾರೆ. ಇದು ವಂಶಪಾರಂಪರ್ಯವಲ್ಲವೇ? ಎಂದು ಟೀಕಿಸಿದರು.

ಯಡಿಯೂರಪ್ಪ ಕತೆ ಮುಗೀತು.‌ಮೇ ೨೩ ರ‌ ನಂತರ ನೀವೆ ನೋಡಿ ಕನಿಷ್ಟ ೨೦ ಕ್ಕೂ ಹೆಚ್ಚು ಸೀಟು‌ಗಳನ್ನು ಮೈತ್ರಿ ಅಭ್ಯರ್ಥಿಗಳು ಗೆಲುವು‌ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಜಾಧವ್ ಮತದಾರರಿಗೆ ಮೋಸ ಮಾಡಿದ್ದಲ್ಲದೇ ಸ್ವತಃ ಅವರ ಸಹೋದರನಿಗೆ ಮೋಸ ಮಾಡಿದ್ದಾರೆ. ಸಹೋದರನ ಬದಲಿಗೆ ಮಗನಿಗೆ ಟಿಕೇಟು ಕೊಡಿಸಿದ್ದಾರೆ. ಅವರ ಮಗ ಯಾವ ರಾಜಕೀಯ ಅನುಭವ ಹೊಂದಿದ್ದಾರೆಯೇ? ಎಂದು ಪ್ರಶ್ನಿಸಿದ ಪಾಟೀಲ್, ಜಾಧವ್ ಕೇಳಿದ ತಕ್ಷಣ ಮತನೀಡಲು ಮತದಾರರೇನು ಅವರ ಆಳುಗಳೇ? ಎಂದರು.

ವೇದಿಕೆಯ ಮೇಲೆ ಸಚಿವರಾದ ರಾಜಶೇಖರ್ ಪಾಟೀಲ್, ರಹೀಂ ಖಾನ್,‌ಮಾಜಿ‌ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಬಸಯ್ಯ ಗುತ್ತೇದಾರ, ಜಗದೇವ ಗುತ್ತೇದಾರ್ ಸೇರಿದಂತೆ ಮತ್ತಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button