ಪ್ರಮುಖ ಸುದ್ದಿ

ಖಾಯಂ ಜನತಾ ನ್ಯಾಯಾಲಯದ ಸದುಪಯೋಗ ಪಡೆಯಿರಿ-ನ್ಯಾ.ಹಂಚಾಟೆ

ಬೆಂಗಳೂರಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದಾದ್ಯಂತ ಪತ್ರಿಕಾಗೋಷ್ಠಿ

ಯಾದಗಿರಿಃ ಸಾರ್ವಜನಿಕರು ಖಾಯಂ ಜನತಾ ನ್ಯಾಯಾಲಯದ ಸೌಲಭ್ಯಗಳ ಅರಿವು ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಂಜೀವಕುಮಾರ ಹಂಚಾಟೆ ಅವರು ಸಲಹೆ ನೀಡಿದರು.

ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯ ಸಂಯೋಗ ಕಾನೂನು ಸಹಾಯ ಘಟಕದಿಂದ ರಾಜ್ಯದಾದ್ಯಂತ ಜಿಲ್ಲಾ ನ್ಯಾಯಾಲಯಗಳಲ್ಲಿ ಮಂಗಳವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಖಾಯಂ ಜನತಾ ನ್ಯಾಯಾಲಯ (Peramnent lok adalat) ಎಂದರೆ–ಸೆಕ್ಷನ್ 22 ಬಿ ಉಪ-ವಿಭಾಗ (1)ರ ಅಡಿಯಲ್ಲಿ ಸ್ಥಾಪಿತವಾದ ಖಾಯಂ ಜನತಾ ನ್ಯಾಯಾಲಯವಾಗಿದೆ. ಕಲಂ 22 ಎ (ಬಿ)ರಲ್ಲಿ ವಿವರಿಸಿರುವಂತೆ ಸಾರ್ವಜನಿಕ ಉಪಯುಕ್ತತಾ ಸೇವೆಗಳಾದ,

1)ಪ್ರಯಾಣಿಕರನ್ನು ಅಥವಾ ಸರಕುಗಳನ್ನು ವಾಯುಮಾರ್ಗ, ರಸ್ತೆ ಅಥವಾ ಜಲಮಾರ್ಗ ಮೂಲಕ ಸಾಗಿಸುವ ಸಾಗಣಿಕೆಯ ಸೇವೆ 2) ಅಂಚೆ, ಟೆಲಿಗ್ರಾಫ್ ಅಥವಾ ದೂರವಾಣಿ ಸೇವೆ 3) ಸಾರ್ವಜನಿಕರಿಗೆ ವಿದ್ಯುತ್, ಬೆಳಕು ಅಥವಾ ನೀರಿನ ಸರಬರಾಜು ಮಾಡುವ ಯಾವುದೇ ಸಂಸ್ಥೆ 4) ಸಾರ್ವಜನಿಕ ಸಂರಕ್ಷಣೆ ಅಥವಾ ನೈರ್ಮಲ್ಯ ವ್ಯವಸ್ಥೆ 5) ಆಸ್ಪತ್ರೆ ಅಥವಾ ವಿತರಣೆ ಅಥವಾ ಸೇವೆ 6) ವಿಮೆ ಸೇವೆ 7) ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳು 8) ವಸತಿ ಮತ್ತು ರೀಯಲ್ ಎಸ್ಟೇಟ್ ಸೇವೆ 9) ಶಿಕ್ಷಣ ಸೇವೆ ಇವುಗಳು ಖಾಯಂ ಜನತಾ ನ್ಯಾಯಾಲಯ ವ್ಯಾಪ್ತಿಗೆ ಒಳಪಡುತ್ತವೆ.

ಈ ಅದಾಲತ್‍ಗಳಿಗೆ ಬರುವ ಪ್ರಕರಣಗಳಲ್ಲಿ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ ಹಾಗೂ ಹಣಕಾಸು ಸಂಸ್ಥೆಗಳ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೌಲ್ಯ 1 ಕೋಟಿ ರೂಪಾಯಿಗಳನ್ನು ಮೀರಿರಬಾರದು ಎಂದು ಅವರು ತಿಳಿಸಿದರು.
ಖಾಯಂ ಜನತಾ ನ್ಯಾಯಾಲಯಗಳಲ್ಲಿ ವಿವಾದಾಸ್ಪದ ಪಕ್ಷಕಾರರ ತೃಪ್ತಿಯೊಂದಿಗೆ ಸಾರ್ವಜನಿಕ ಉಪಯುಕ್ತತೆಗಳ ವಿವಾದಗಳನ್ನು ಶೀಘ್ರವಾಗಿ ನಿರ್ಧರಿಸುವಲ್ಲಿ ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ.

ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ವಿವಾದದ ಸೌಹಾರ್ದಯುತವಾಗಿ ನೆಲೆಸುವ ಪ್ರಯತ್ನದಲ್ಲಿ ಪಕ್ಷಕಾರರಿಗೆ ಸಹಾಯ ಮಾಡುತ್ತದೆ. ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲಬುರಗಿ ಸೇರಿದಂತೆ 6 ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಕಲಬುರಗಿ ವ್ಯಾಪ್ತಿಗೆ ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳು ಬರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಖಾಯಂ ಜನತಾ ನ್ಯಾಯಾಲಯವು ಜಿಲ್ಲಾ ನ್ಯಾಯಾಧೀಶರಾಗಿರುವ ಅಥವಾ ಜಿಲ್ಲಾ ನ್ಯಾಯಾಧೀಶರಾಗಿದ್ದ ಅಥವಾ ಜಿಲ್ಲಾ ನ್ಯಾಯಾಧೀಶರಿಗಿಂತ ಹೆಚ್ಚಿನ ಶ್ರೇಣಿಯ ನ್ಯಾಯಿಕ ಅಧಿಕಾರಿಯಾಗಿರುವ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಅನುಭವ ಇರುವ ಇಬ್ಬರು ವ್ಯಕ್ತಿಗಳನ್ನು ಸದಸ್ಯರನ್ನಾಗಿ ಹೊಂದಿರುತ್ತದೆ.

ವಿವಾದ ಹೊಂದಿರುವ ಯಾವುದೇ ಪಕ್ಷಕಾರನು ಸಾರ್ವಜನಿಕ ಉಪಯುಕ್ತತಾ ಸೇವೆಗಳ ಕುರಿತಂತೆ ಆ ವಿವಾದವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದಕ್ಕೆ ಮೊದಲು ವಿವಾದದ ಇತ್ಯರ್ಥಕ್ಕಾಗಿ ಖಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಯಾವುದೇ ಕಾನೂನಿನಡಿ ರಾಜೀ ಮಾಡಿಕೊಳ್ಳುವ ಅವಕಾಶವಿರದ ಅಪರಾಧಕ್ಕೆ ಸಂಬಂಧಿಸಿದ ವಿಷಯವನ್ನು ಇತ್ಯರ್ಥಗೊಳಿಸಲು ಖಾಯಂ ಜನತಾ ನ್ಯಾಯಾಲಯಕ್ಕೆ ಅಧಿಕಾರವಿರುವುದಿಲ್ಲ ಎಂದು ಅವರು ತಿಳಿಸಿದರು.

ಕಾರ್ಯನಿರ್ವಹಣೆ: ಈ ಅಧಿನಿಯಮದ ಕಲಂ 22 ಸಿ ಇದರ ಮೇರೆಗೆ ವಿವಾದ ಹೊಂದಿರುವ ಯಾವುದೇ ವ್ಯಕ್ತಿಯು ಆ ವಿವಾದವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ಯುವ ಮೊದಲು ಆ ವಿವಾದದ ಇತ್ಯರ್ಥ ಕೋರಿ ಖಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಮೇಲೆ ಹೇಳಿದಂತೆ ಖಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ಅದೇ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷಕಾರನು ನ್ಯಾಯಾಲಯಕ್ಕೆ ಹೋಗುವಂತಿಲ್ಲ.

ಈ ಅಧಿನಿಯಮದ ಕಲಂ 22 ಸಿ ಇದರ ಮೇರೆಗೆ ಅರ್ಜಿ ಸಲ್ಲಿಸಿದ ನಂತರ ಖಾಯಂ ಜನತಾ ನ್ಯಾಯಾಲಯವು ವಿವಾದದ ಸಂಗತಿಗಳು ಹಾಗೂ ಸ್ವರೂಪ, ವಿವಾದದ ಸಮರ್ಥನೆಗೆ ಅಥವಾ ಅದರ ವಿರುದ್ಧ ಇರಬಹುದಾದ ಅಂಶಗಳು, ಆಧಾರಗಳು, ಇವುಗಳನ್ನೊಳಗೊಂಡ ಅಂಶಗಳಿಂದ ಪ್ರತಿವಾದ ಪತ್ರವನ್ನು ತನ್ನ ಮುಂದೆ ದಾಖಲಿಸುವಂತೆ ಪ್ರತಿ ಪಕ್ಷಕಾರನಿಗೂ ನಿರ್ದೇಶನ ನೀಡುತ್ತದೆ.

ಆಗ ಆ ಪಕ್ಷಕಾರನು ಪ್ರತಿವಾದ ಪತ್ರದಲ್ಲಿನ ಸಂಗತಿಗಳು ಮತ್ತು ಆಧಾರಗಳನ್ನು ಸಾಬೀತುಪಡಿಸಲು ನೆರವಾಗಬಹುದಾದ ಯಾವುದೇ ದಸ್ತಾವೇಜು ಅಥವಾ ಇತರ ಸಾಕ್ಷ್ಯವನ್ನು ಅಂತಹ ಹೇಳಿಕೆಯ ಪ್ರತಿಯನ್ನು ಅಂತಹ ದಸ್ತಾವೇಜು ಮತ್ತು ಸಾಕ್ಷ್ಯದ ಪ್ರತಿಯೊಡನೆ ಪ್ರತಿಯೊಬ್ಬ ಪಕ್ಷಕಾರನಿಗೂ ಕಳುಹಿಸತಕ್ಕದ್ದು.

ರಾಜೀ ಸಂಧಾನದ ವ್ಯವಹರಣೆಗಳ ಸಮಯದಲ್ಲಿ ವಿವಾದಕ್ಕೆ ಸಂಬಂಧಿಸಿದ ಯಾವುದೇ ಪಕ್ಷಕಾರನಿಗೆ ಹೆಚ್ಚಿನ ಹೇಳಿಕೆಯನ್ನು ದಾಖಲಿಸುವಂತೆ ಖಾಯಂ ಜನತಾ ನ್ಯಾಯಾಲಯವು ಆದೇಶಿಸಬಹುದಾಗಿದೆ ಎಂದು ಅವರು ವಿವರಿಸಿದರು.

ಅರ್ಜಿಯ ಯಾವುದೇ ಪಕ್ಷಕಾರನಿಂದ ತಾನು ಸ್ವೀಕರಿಸಿದ ಯಾವುದೇ ದಸ್ತಾವೇಜು ಅಥವಾ ಹೇಳಿಕೆಯ ಪ್ರತಿಯನ್ನು ಮತ್ತೊಬ್ಬ ಪಕ್ಷಕಾರನಿಗೆ ಆತ ಅದಕ್ಕೆ ಉತ್ತರ ನೀಡುವ ಸಲುವಾಗಿ ಕಳುಹಿಸಿಕೊಡುತ್ತದೆ. ಖಾಯಂ ಜನತಾ ನ್ಯಾಯಾಲಯಕ್ಕೆ ತೃಪ್ತಿಯಾಗುವಂತೆ ಹೇಳಿಕೆಗಳನ್ನು ದಾಖಲಿಸಿದ ಮೇಲೆ ಮತ್ತು ದಸ್ತಾವೇಜುಗಳನ್ನು ಸಲ್ಲಿಸಿದ ನಂತರ ವಿವಾದದ ಸಂದರ್ಭಗಳನ್ನು ಪರಿಗಣಿಸಿ ಅರ್ಜಿಯ ಪಕ್ಷಕಾರರ ನಡುವೆ ತನಗೆ ಯುಕ್ತವೆನಿಸುವ ರೀತಿಯಲ್ಲಿ ಅದು ಸಂಧಾನ ವ್ಯವಹರಣೆಯನ್ನು ನಡೆಸುತ್ತದೆ.

ಖಾಯಂ ಜನತಾ ನ್ಯಾಯಾಲಯವು ಸಂಧಾನ ವ್ಯವಹರಣೆಯ ಸಮಯದಲ್ಲಿ ವಿವಾದವನ್ನು ಪಕ್ಷಕಾರರು ಸೌಹಾರ್ದಯುತವಾಗಿ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾದ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅವರಿಗೆ ನೆರವಾಗುತ್ತದೆ. ಅರ್ಜಿಯಲ್ಲಿನ ವಿವಾದದ ಸಂಧಾನಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಮತ್ತು ಇತರ ಸಂಬಂಧಿತ ದಸ್ತಾವೇಜುಗಳನ್ನು ಹಾಜರುಪಡಿಸುವುದಕ್ಕೆ ಸಂಬಂಧಿಸಿದಂತೆ ಖಾಯಂ ಜನತಾ ನ್ಯಾಯಾಲಯದ ಆದೇಶಗಳನ್ನು ಪಾಲಿಸುವುದರ ಮೂಲಕ ಅದರ ಜೊತೆ ಸಹಕರಿಸುವುದು ಅರ್ಜಿಯಲ್ಲಿನ ಪ್ರತಿ ಪಕ್ಷಕಾರನ ಕರ್ತವ್ಯವಾಗಿರುತ್ತದೆ ಎಂದು ಅವರು ಹೇಳಿದರು.

ರಾಜೀ ಸಂಧಾನ ವ್ಯವಹರಣೆಗಳು: ವಿವಾದಕ್ಕೆ ಸಂಬಂಧಿಸಿದ ಪಕ್ಷಕಾರರು ಒಪ್ಪಿಕೊಳ್ಳಬಹುದಾದ ಇತ್ಯರ್ಥದ ಅಂಶಗಳು ಪ್ರಕರಣದಲ್ಲಿ ಇದೆಯೆಂಬುದು ಖಾಯಂ ಜನತಾ ನ್ಯಾಯಾಲಯಕ್ಕೆ ಮನವರಿಕೆಯಾದಲ್ಲಿ ಸಾಧ್ಯವಾಗಬಹುದಾದ ಇತ್ಯರ್ಥದ ನಿಬಂಧನೆಗಳನ್ನು ಅದು ರೂಪಿಸಬಹುದಾಗಿದೆ. ಅದನ್ನು ಸಂಬಂಧಿಸಿದ ಪಕ್ಷಕಾರರಿಗೆ, ಅವರ ಪರಿಶೀಲನೆಗಾಗಿ ಕಳುಹಿಸಿಕೊಡುತ್ತದೆ.

ಒಂದು ವೇಳೆ ಪಕ್ಷಕಾರರು ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಒಪ್ಪಂದವೊಂದಕ್ಕೆ ಬಂದರೆ ಅವರು ಇತ್ಯರ್ಥದ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಮತ್ತು ಖಾಯಂ ಜನತಾ ನ್ಯಾಯಾಲಯವು ಐತೀರ್ಪನ್ನು ಹೊರಡಿಸಿ ಅದರ ಒಂದೊಂದು ಪ್ರತಿಯನ್ನು ಸಂಬಂಧಪಟ್ಟ ಪಕ್ಷಕಾರರಿಗೆ ಕಳುಹಿಸಿಕೊಡುತ್ತದೆ.

ಒಂದು ವೇಳೆ ಪಕ್ಷಕಾರರು ಸಂಧಾನಕ್ಕೆ ಒಪ್ಪದಿದ್ದರೆ ಅಂದರೆ ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದರೆ ಖಾಯಂ ಜನತಾ ನ್ಯಾಯಾಲಯವು ಪ್ರಕರಣದ ಗುಣಾವಗುಣಗಳಿಗೆ ಅನುಗುಣವಾಗಿ ವಿವಾದವನ್ನು ಇತ್ಯರ್ಥಗೊಳಿಸುತ್ತದೆ. ಖಾಯಂ ಜನತಾ ನ್ಯಾಯಾಲಯವು ಈ ಅಧಿನಿಯಮದಡಿ ಸಂಧಾನ ವ್ಯವಹರಣೆ ನಡೆಸುವಾಗ ಅಥವಾ ವಿವಾದವೊಂದನ್ನು ಇತ್ಯರ್ಥಗೊಳಿಸುವಾಗ ಸಹಜ ನ್ಯಾಯತತ್ವ, ಉದ್ದೇಶ ಹಾಗೂ ಸಮನ್ಯಾಯತತ್ವ ಮತ್ತು ಇತರ ನ್ಯಾಯಿಕ ತತ್ವಗಳನ್ನು ಅನುಸರಿಸುತ್ತದೆ.

ಖಾಯಂ ಜನತಾ ನ್ಯಾಯಾಲಯಕ್ಕೆ 1908ರ ಸಿವಿಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷ್ಯ ಅಧಿನಿಯಮವು ಬಂಧನಕಾರಿಯಾಗಿರುವುದಿಲ್ಲ.

ಐತೀರ್ಪು: ಖಾಯಂ ಜನತಾ ನ್ಯಾಯಾಲಯವು ಹೊರಡಿಸುವ ಪ್ರತಿಯೊಂದು ಐತೀರ್ಪನ್ನೂ ಸಿವಿಲ್ ನ್ಯಾಯಾಲಯದ ಡಿಕ್ರಿಯೆಂದೇ ಪರಿಭಾವಿಸಲಾಗುವುದು. ಈ ಅಧಿನಿಯಮದಡಿ ಪ್ರಕರಣದ ಗುಣಾವಗುಣಗಳ ಮೇರೆಗೆ ಅಥವಾ ಇತ್ಯರ್ಥದ ಒಪ್ಪಂದದಿಂದ ಹೊರಡಿಸಲಾದ ಖಾಯಂ ಜನತಾ ನ್ಯಾಯಾಲಯದ ಪತ್ರಿಯೊಂದು ಐತೀರ್ಪು ಅಂತಿಮವಾದುದಾಗಿದ್ದು ಸಂಬಂಧಿಸಿದ ಪಕ್ಷಕಾರರು ಮತ್ತು ಅವರ ಮೂಲಕ ಕ್ಲೇಮು ಮಾಡುವ ಪ್ರತಿಯೊಬ್ಬರಿಗೂ ಬಂಧನಕಾರಿಯಾಗಿರುತ್ತದೆ.

ಈ ಅಧಿನಿಯಮದಡಿ ಹೊರಡಿಸಲಾದ ಐತೀರ್ಪು ಅಂತಿಮವಾದುದಾಗಿದ್ದು, ಅದನ್ನು ಯಾವುದೇ ಮೂಲ ದಾವೆಯಲ್ಲಿ, ಅರ್ಜಿಯಲ್ಲಿ ಅಥವಾ ಅಮಲ್ಜಾರಿ ವ್ಯವಹರಣೆಯಲ್ಲಿ ಪ್ರಶ್ನಿಸುವಂತಿಲ್ಲ ಎಂದು ಅವರು ತಿಳಿಸಿದರು.
ಖಾಯಂ ಜನತಾ ನ್ಯಾಯಾಲಯವು ತಾನು ಹೊರಡಿಸಿದ ಯಾವುದೇ ಐತೀರ್ಪನ್ನು ಸ್ಥಳೀಯ ಅಧಿಕಾರವ್ಯಾಪ್ತಿ ಹೊಂದಿರುವ ಯಾವುದೇ ಸಿವಿಲ್ ನ್ಯಾಯಾಲಯಕ್ಕೆ ಕಳುಹಿಸಿಕೊಡಬಹುದಾಗಿದೆ. ಆ ಸಿವಿಲ್ ನ್ಯಾಯಾಲಯವು ಆ ಐತೀರ್ಪನ್ನು ನ್ಯಾಯಾಲಯವು ಹೊರಡಿಸಿದ ಡಿಕ್ರಿಯಂತೆ ಅಮಲ್ಜಾರಿಗೊಳಿಸಬಹುದಾಗಿದೆ. ಖಾಯಂ ಜನತಾ ನ್ಯಾಯಾಲಯದ ಐತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅರ್ಜುನ ಬನಸೊಡೆ ಅವರು ಮತ್ತು ಯಾದಗಿರಿ ಜಿಲ್ಲೆಯ ಪತ್ರಕರ್ತರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button