ಕಾವ್ಯ

ಓದುಗರಿಗಾಗಿ-ಖ್ಯಾತ ಕವಿ ಸಿದ್ಧರಾಮ ಹೊನ್ಕಲ್ ಶ್ರವಣಬೆಳಗೋಳದಲ್ಲಿ ವಾಚಿಸಿದ ಕಾವ್ಯ

ಬಾಹುಬಲಿಯೇ ನೀನೀಗ ಒಮ್ಮೆ ಕೆಳಗಿಳಿದು ಬಾರಯ್ಯ…

ರತ ಭೂಮಿಯಿದು
ಭಾತೃತ್ವಕ್ಕೆ ಸಂಕೇತ
ತ್ಯಾಗದಲ್ಲಿ ಸುಖವಿದೆ
ಭೋಗದಲ್ಲಿ ಮದ ಮತ್ಸರ
ಲೋಭ ಆಶೆ ದು:ಖವಿದೆ
ಎಂದು ತೋರಲು
ಬಯಲೊಳಗೆ ಬಯಲಾಗಿ
ನಿರ್ವಾಣವನೇ ತೊಟ್ಟು ಚಳಿ,ಮಳಿ,
ಬಿಸಿಲಿಗೆ ಮೈಮನ ಒಡ್ಡಿ
ನೀ ಮುಗಿಲೆತ್ತರ ನಿಂತುಬಿಟ್ಟೆ.
ಈಗ ನಿನ್ನ ಮುಂದೆ ಬಟ್ಟೆಯುಟ್ಟ
ಖೊಟ್ಟಿ ಮನದ ನಾವೇ ಬೆತ್ತಲಿಗರು.

ಹುಟ್ಟುತ್ತಲೇ ಸಹೋದರರು
ಬೆಳೆಯುತ್ತ ದಾಯಾದಿಗಳು
ಎಂಬುದನ್ನು ಅಲ್ಲಗಳೆದು
ನೀ ಹೊರಟುಬಂದಿ ;
ತ್ಯಾಗಕ್ಕೆ-ಭಾತೃತ್ವಕ್ಕೆ
ಸಂಕೇತವಾಗಿ.
ಆದರೆ,
ನೀನು ಕಣ್ಣು ತೆರೆದು ನಿಂತಿದ್ದರೆ
ಸರಿಯಿತ್ತು ಬಾಹುಬಲಿ;
ಅಂಡು ಸುಟ್ಟ ರಣಹದ್ದು,ಬಾವಲಿ,
ಗೂಬೆಗಳು ಹಾರಿ ಹೋದವು ನಿನ್ನ ಮೇಲೆ
ಯಾರಿಗೂ ಕಾಯದೆ,ಬೆದರದೆ!
ಇಲ್ಲಿ ದಾಯಾದಿಗಳು ಬಡಿದಾಡುವಾಗ,
ಕೊಚ್ಚಿ ಕೊಂದಾಡುವಾಗ,
ಕಲಬುರ್ಗಿ-ಗೌರಿಯಂತವರನು
ಗುಂಡಿಕ್ಕುವಾಗ
ಬೇಡಿರೋ.. ಎಂದು
ಗದರಲಾದರೂ
ನೀ ಒಮ್ಮೆ ದಿಬ್ಬವ
ಇಳಿದು ಬರಬೇಕಿತ್ತು;

ಹೇ ಮಹಾತಪಸ್ವಿ
ವಿನಯಕ್ಕೆ ಮಣಿವೆ,
ಅಹಂಕಾರವ ಅಳಿವೆ
ಎಂಬುದನ್ನು ತೋರಿಸಿದ ನಿನಗೆ
ಸುತ್ತಲಿನ ದಶದಿಕ್ಕುಗಳೇ
ರಕ್ಷಣಾ ಕೋಟೆಗಳು
ಬೆಳಗುವ ಸೂರ್ಯ ಚಂದ್ರರೇ
ನಿನ್ನೆರಡು ಕಣ್ಣುಗಳು
ಸುರಿವ ಮಳೆಯೇ ನಿನಗೆ
ಸದಾ ಮಹಾ ಮಸ್ತಕಾಭಿಷೇಕದ ಪನ್ನೀರು
ಇನ್ನೂ ಬೀಸುವ ತಂಗಾಳಿಯೇ
ನಿನಗೆ ಚಾಮರವು
ಪಕೃತಿಯಲ್ಲಿಯ ಎಲ್ಲವೂ
ನಿನಗೆ ನಿತ್ಯ ನೈವೇದ್ಯ
ಇಂತಿಪ್ಪ ನೀನು
ಬರೀ ಬಾಹುಬಲಿಯಲ್ಲ
ನಿರಾಕಾರ-ನಿರ್ಗುಣಶಕ್ತಿ…..
ಹಾಗಾಗಿ ನೀ ಒಮ್ಮೆ
ಕೆಳಗಿಳಿದು ಬಾ ಈಗ

ಹೇ ಸಂಯಮದ ಸರೋವರನೇ
ಅಬ್ಬರಿಸಿ ಬಾರೋ,
ಹಬ್ಬಲಿ ಜಗದಗಲ ಮುಗಿಲಗಲ
ನಿನ್ನ ದಯೆ ಕರುಣೆ
ಮಾನವೀಯತೆ ಅಂತ:ಕರಣ
ಅಹಿಂಸೆ, ಪ್ರೀತಿ ತುಂಬಿದ
ಸವಿ ಜೇನಿನಂತಹ ಸಂದೇಶಗಳು…
ಅಳಿಯಲಿ ಸಮಾಜದ
ಮೇಲು ಕೀಳು
ವರ್ಗ- ವರ್ಣ ಜಾತಿ ಧರ್ಮದ
ಮತಾಂಧತೆಯ ವಿಷ ಬೀಜಗಳು
ಬಿತ್ತು ಸಾಮರಸ್ಯದ ಸಹಬಾಳ್ವೆಯನು,
ತುಂಬಿಸು ಕರುಣಾರಸವ ಎಲ್ಲರ
ಕಲ್ಲು ಹೃದಯಗಳಲ್ಲಿ,
ಮನೆ ಮನಗಳಲ್ಲಿ….

ನೀನು ನಿಂತ
ಈ ಗೊಮ್ಮಟ ಗಿರಿಯ ಎತ್ತರಗಳಿಂದ
ಕೆಡವಿ ಬಿಡು ನಮ್ಮ ಮಧ್ಯದ
ಅಸಮಾನತೆಯ ಗೋಡೆಗಳನ್ನು…
ಕಟುಕ ಮನಗಳನ್ನು
ಇದೇ ಈಗ ನಿನ್ನ ಭಾತೃತ್ವದ
ಭರತನ ಭಾರತಕ್ಕೆ-
ವಿಶ್ವಕ್ಕೆ ಬೇಕಿರುವ ದಿವ್ಯ ಸಂದೇಶ,
ಹೇ ಬಾಹುಬಲಿಯೇ..
ಕೇಳುತ್ತಿದೆಯೇ ನನ್ನ ಕೂಗು
ಅರಳಿಸು ಎಲ್ಲರೆದೆಯಲ್ಲಿ
ನಾವೆಲ್ಲ ಒಂದೇ ಎಂಬ
ಬೀಜ ಮಂತ್ರವನ್ನು….
ಹಾಗಾಗಿ
ಆಗಬೇಕಿದೆ ಎಲ್ಲರ
ಮನದೊಳಗೆ ಕ್ರಾಂತಿ,
ಬಿಡಿಸಬೇಕಾಗಿದೆ
ಎಲ್ಲರೊಳಗಿನ ಬ್ರಾಂತಿ
ದಯಮಾಡಿ ಬಾಹುಬಲಿಯೇ
ಈಗೊಮ್ಮೆ ಕೆಳಗಿಳಿದು ಬಂದು
ಬೀದಿ ಬೀದಿ ಸುತ್ತಬೇಕಿದೆ;
ಕೆಳಗಿಳಿದು ಬಾರಯ್ಯ… ಈಗ.

@-ಸಿದ್ಧರಾಮ ಹೊನ್ಕಲ್,
ಕಾವ್ಯಾಲಯ,ಲಕ್ಷ್ಮೀನಗರ,
ಶ್ರೀ ಅಲ್ಲಮಪ್ರಭು ಪ್ರಕಾಶನ,
ಅಂಚೆ: ಶಹಾಪುರ, ಜಿಲ್ಲಾ:ಯಾದಗೀರ
9945922151.

Related Articles

One Comment

Leave a Reply

Your email address will not be published. Required fields are marked *

Back to top button