ಕಾವ್ಯ
‘ನಾನು ನೀರು ಆಕೆ ನೀರೆ’ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಬರೆದ ಕವಿತೆ
ನಾನು ನೀರು ಆಕೆ ನೀರೆ
ನಾನು ನೀರು
ನೀರೆಯಂತೆಯೇ…
ಹರಿಯುತ್ತೇನೆ ನಾನು
ಕಾರುಣ್ಯ ರಸವಾಗಿ
ನೆಲ ತಣಿಸಲು, ಅನ್ನ ಉಣಿಸಲು
ಆಕೆಯೂ….
ವಾತ್ಸಲ್ಯ ಝರಿಯಾಗಿ
ಜೀವ ಬೆಳೆಯಲು,ತಪ್ಪು ಮನ್ನಿಸಲು.
ಪೂಜಿಸದಿರಿ ನನ್ನನು
ಕುಂಕುಮ,ಹೂ ಕಾಯಿ
ಗಂಧದಕಡ್ಡಿಯಿಂದ….
ಆಕೆಯನ್ನೂ…
ಮಲಿನಗೊಳಿಸದಿರಿ,
ಬೇಡದ ದಿನಸುಗಳಿಂದ.
ಇರುವೆವು ನಾವಿರುವಂತೆ
ದೇವರಾಗುವುದಿಲ್ಲ.
ಆಕೆ ಆಕೆಯಾಗಿ
ನಾನು ನದಿಯಾಗಿ ಮಾತ್ರ…
ಬತ್ತಿ ಹೋಗುತಿದ್ದೇವೆ
ಹಲವು ಒತ್ತಡ, ಹಳವಂಡಗಳ
ಹೊದಿಕೆಯಲಿ
ಪಾತ್ರ ಕಿರಿದಾಗುತ್ತಲೇ ಇದೆ.
ಹಿಗ್ಗಿಸಬಹುದೆ?
ಹಿಚುಕಿಹೋದ ಆಕೆಯ ಹೃದಯವನ್ನು
ಬಿಕ್ಕುಗಳನ್ನು ತುಂಬಿಕೊಂಡಿದ್ದೇವೆ
ಕಣ್ಣೀರಿನ ಪದರಿನಲಿ
ಬದುಕಿನಲಿ ಬೆರೆಯದಂತೆ
ಪಹರೆ ಕಾಯುತ್ತೇವೆ.
–ಸಂಧ್ಯಾ ಹೊನಗುಂಟಿಕರ್.
ಹಿರಿಯ ಸಾಹಿತಿ, ಕಲಬುರಗಿ.
ಉತ್ತಮ ಕಾವ್ಯ
Thank u sir..
ಕವಿತೆ ರಚನಾಕಾರರ ಪರವಾಗಿ.
ಧನ್ಯವಾದಗಳು.ಸರ್.