ಭಾಗ್ಯವಂತಿದೇವಿಗೆ 101 ಟೆಂಗಿನಕಾಯಿ ಒಡೆದು ಹರಕೆ ತೀರಿಸಿದ ಪೊಲೀಸರು.! ಯಾಕೀ ಹರಕೆ ಗೊತ್ತಾ.?
ಭಾಗ್ಯವಂತಿದೇವಿಗೆ 101 ಟೆಂಗಿನಕಾಯಿ ಒಡೆದು ಹರಕೆ ತೀರಿಸಿದ ಪೊಲೀಸರು.! ಯಾಕೀ ಹರಕೆ ಗೊತ್ತಾ.?
ಯಾದಗಿರಿಃ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ ಪಂಡಿತ್ ಬಿರೆದಾರ ಅವರು ನಿನ್ನೆ ಪ್ರವಾಹದಲ್ಲಿ ಸಿಲುಕಿಗೊಂಡಾಗ ಸಮರ್ಪಕ ಕಾರ್ಯಾಚರಣೆ ನಡೆಸಿ ಅವರನ್ನು ಬಚಾವ್ ಮಾಡಲಾಗಿತ್ತು.
ಆಗ ಅವರನ್ನು ಪ್ರಾಣಪಾಯದಿಂದ ಪಾರು ಮಾಡಿದ ಯಶಸ್ವಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸಮೀಪದ ಚಿಂಚೋಳಿ ತಾಲೂಕಿನ ಪೋಲಕಪಳ್ಳಿಯ ಭಾಗ್ಯವಂತಿ ದೇವಿಯನ್ನು ಸ್ಮರಿಸಿ ಕಾರ್ಯಚಾರಣೆ ಕೈಗೊಂಡಿದ್ದರು ಎನ್ನಲಾಗಿದೆ.
ದೇವಿ ಮೇಲೆ ಅಪಾರ ಭಕ್ತಿ ಹೊಂದಿರುವ ಮಿರಿಯಾಣ ಠಾಣೆಯ ಪಿಎಸ್ಐ ಸಂತೋಷ ರಾಠೋಡ ಗುರುವಾರ ತಮ್ಮ ಸಿಬ್ಬಂದಿಯೊಂದಿಗೆ ಭಾಗ್ಯವಂತಿದೇವಿ ದೇಗುಲಕ್ಕೆ ತೆರಳಿ 101 ಕಾಯಿಗಳನ್ನು ತಮ್ಮ ಸಂಕಲ್ಪದಂತೆ ದೇವಿ ದೇಗುಲದ ಮುಂದೆ ಒಡೆದು ಹರಕೆ ತೀರಿಸಿದರು.
ತಹಸೀಲ್ದಾರ ಪಂಡಿತ ಬಿರೆದಾರ, ಯಾದಗಿರಿಯಿಂದ ಬೀದರಗೆ ಹೊರಟಿದ್ದಾಗ, ಮಾರ್ಗ ಮದ್ಯ ಹಳ್ಳದ ಪ್ರವಾಹಕ್ಕೆ ಸಿಲುಕಿ ಕಾರಿನಿಂದ ಇಳಿದು ಸೇತುವೆ ದಾಟುವಾಗ, ಪ್ರವಾಹ ನೀರು ಜಾಸ್ತಿಯಾಗಿ ಸಮೀಪದ ಮರದ ಸಹಾಯ ಪಡೆದುಕೊಂಡು ಕುಳಿತಿದ್ದರು. ಕಾಲ್ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರವಾಹದಡಿ ಸಿಲುಕಿದ್ದು ಕೂಡಲೇ ಆಗಮಿಸಿ ಪ್ರಾಣ ಉಳಿಸುವಂತೆ ಕೇಳಿದ್ದರು.
ಆಗ ಅಧಿಕಾರ ವರ್ಗ ದಿಡೀರನೆ ಘಟನಾ ಸ್ಥಳಕ್ಕೆ ತೆರಳಿತ್ತು. ಆಗ ಇದೇ ಪಿಎಸ್ಐ ಸಂತೋಷ ರಾಠೋಡ, ಪಿಐ ಮಹಾಂತೇಶ ಪಾಟೀಲ್ ಹಾಗೂ ಚಿಂಚೋಳಿ ಠಾಣೆಯ ಪಿಎಸ್ಐ ರಾಜಶೇಖರ ರಾಠೋಡ ಅವರು ಭಾಗವಹಿಸಿದ್ದರು.
ಯಶಸ್ವಿ ಕಾರ್ಯಚಾಣೆ ಹಿನ್ನೆಲೆ ದೇವಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ಸಾಮೂಹಿಕವಾಗಿ 101 ಟೆಂಗಿನ ಕಾಯಿ ಅರ್ಪಿಸಲಾಗಿದೆ ಎನ್ನಲಾಗಿದೆ. ಈ ವೇಳೆ ಡಿವೈಎಸ್ಪಿ ಈ.ಎಸ್.ವೀರಭದ್ರಯ್ಯ ನೇತೃತ್ವವಹಿಸಿದ್ದರು. ಪೊಲೀಸ್ ಸಿಬ್ಬಂದಿ ಇತರರಿದ್ದರು.