ಪ್ರಮುಖ ಸುದ್ದಿ

ರಾಯಚೂರಃ ಕರೆಂಟ್ಗಾಗಿ ಡೋಂಟ್ವರಿ ಎಂದ ಡಿಕೆಶಿ

ವಿದ್ಯುತ್ ಸಮಸ್ಯೆ ನೀಗಿಸಲು ಅಗತ್ಯ ಕ್ರಮ: ಡಿಕೆಶಿ

ಬಿಟಿಪಿಎಸ್‍ಗೆ 1 ಸಾವಿರ ಕೋಟಿ ರೂ.ವೆಚ್ಚದಲ್ಲಿ ನೀರು ಪೂರೈಸುವ ಕಾಮಗಾರಿ ಶೀಘ್ರ ಪ್ರಾರಂಭ

ರಾಯಚೂರಃ ನಗರದಲ್ಲಿರುವ ಆರ್‍ಟಿಪಿಎಸ್ ಮತ್ತು ವೈಟಿಪಿಎಸ್‍ಗೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಇಲ್ಲ. ಆದ್ರೇ ಪಕ್ಕದ ಬಳ್ಳಾರಿ ಜಿಲ್ಲೆಯಲ್ಲಿರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್) ಪದೇ ಪದೇ ನೀರಿನ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಕಾಣಿಸುವ ಉದ್ದೇಶದಿಂದ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ 500 ಕಿ.ಮೀ ದೂರದ ಕೃಷ್ಣಾ ನದಿಯಿಂದ ನಿರಂತರವಾಗಿ ನೀರು ಪೂರೈಸುವುದಕ್ಕೆ ಉದ್ದೇಶಿಸಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.

ನಗರದ ಆರ್‍ಟಿಪಿಎಸ್‍ನ ಶಕ್ತಿಕೇಂದ್ರ ಅತಿಥಿಗೃಹದಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ನೀರು ಪೂರೈಕೆ ಕಾಮಗಾರಿ ಶಿಘ್ರ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದ, ಅವರು ತೊರಣಗಲ್‍ನಲ್ಲಿರುವ ಜಿಂದಾಲ್‍ಗೆ ಪೂರೈಸಲಾಗುತ್ತಿರುವ ನೀರಿನ ಪೈಪ್‍ನ ಮಾದರಿಯಲ್ಲಿಯೇ ಬಿಟಿಪಿಎಸ್‍ಗೂ ಪೂರೈಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಬರಗಾಲದ ಪರಿಣಾಮವನ್ನು ನಾವೆಲ್ಲ ಅನುಭವಿಸುತ್ತಿದ್ದು, ಬಹುತೇಕ ಜಲಾಶಯಗಳ ಒಳಹರಿವುಗಳು ಕಡಿಮೆಯಾಗಿವೆ.
ಈ ತಿಂಗಳಲ್ಲಿ ಮಳೆ ಬಂದ್ರೇ ಮಾತ್ರ ಪರಿಸ್ಥಿತಿ ಸುಧಾರಣೆಯಾಗಲು ಸಾಧ್ಯ. ಇಲ್ಲದಿದ್ದಲ್ಲಿ ಕಳೆದ ವರ್ಷಕ್ಕಿಂತಲೂ ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ. ಆದ್ರೂ ವಿದ್ಯುತ್(ಕರೆಂಟ್) ವಿಷಯದಲ್ಲಿ ಯಾವುದೇ ರೀತಿಯಲ್ಲಿ ಉದ್ಯಮಿಗಳು, ಜನರು, ರೈತಾಪಿ ವರ್ಗದವರು ಮತ್ತು ವಿದ್ಯಾರ್ಥಿಗಳು ಚಿಂತೆ ಮಾಡದಿರಿ, ವಿದ್ಯುತ್ ಸಮಸ್ಯೆ ನೀಗಿಸಲು ಮತ್ತು ನಿರಂತರವಾಗಿ ವಿದ್ಯುತ್ ಪೂರೈಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಬರಗಾಲದ ತೊಂದರೆ ನಿವಾರಿಸಲು ತುರ್ತಾಗಿ 1 ಸಾವಿರ ಮೆಗಾ ವ್ಯಾಟ್ ಖರೀದಿಗೆ ಅಲ್ಪಾವಧಿ ಟೆಂಡರ್ ಕರೆಯಲು ಅಗತ್ಯಕ್ರಮಕೈಗೊಂಡಿದ್ದೇವೆ. ರಾಜ್ಯದಲ್ಲಿ 10 ಸಾವಿರ ಮೆಗಾವ್ಯಾಟ್‍ಗಿಂತಲೂ ಹೆಚ್ಚಿನ ಬೇಡಿಕೆ ಇದ್ದು, ನಾವು ಈಗಾಗಲೇ 8ರಿಂದ 8.5 ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಮೂಲಕ ಸಮಸ್ಯೆ ನಿಭಾಯಿಸುತ್ತಿದ್ದೇವೆ, ಇನ್ನೂಳಿದ ವಿದ್ಯುತ್ ಒದಗಿಸಲು ವಿವಿಧ ರೀತಿಯಲ್ಲಿ ಇಲಾಖೆ ಪ್ರಯತ್ನಿಸಲಿದೆ ಎಂದರು.

ಆರ್‍ಟಿಪಿಎಸ್ ಕಳೆದ 4 ವರ್ಷಗಳಿಂದ ಶೇ.80ರಷ್ಟು ಉತ್ತಮವಾಗಿ ಕಾರ್ಯನಿರ್ವಹಣೆ ತೋರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವೈಟಿಪಿಎಸ್‍ನಲ್ಲಿ ಕೆಲ ಸಮಸ್ಯೆಗಳಿದ್ದು, ಸ್ಥಳ ಪರಿಶೀಲಿಸಿ ಅವುಗಳ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದ ಸಚಿವರು, ಈ ಮುಂಚೆ ಒಂದು ಅಥವಾ ಎರಡು ದಿನಗಳಿಗಾಗುವಷ್ಟು ಮಾತ್ರ ಕಲ್ಲಿದ್ದಲ್ಲು ಸಂಗ್ರಹ ಮಾಡಲಾಗುತ್ತಿತ್ತು, ಈಗ ಐದು ದಿನಗಳಿಗಾಗುವಷ್ಟು ಸಂಗ್ರಹ ಮಾಡಲಾತ್ತಿದೆ.

ಬೆಂಗಳೂರು ನಗರಕ್ಕಾಗಿಯೇ ಯಲಹಂಕದ ಬಳಿ 300 ಮೆಗಾವ್ಯಾಟ್ ಸಾಮರ್ಥ್ಯದ ಗ್ಯಾಸ್ ಯೂನಿಟ್ ಆರಂಭಿಸಲಾಗುತ್ತಿದ್ದು, 2018ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ ಸಚಿವರು, ಇದನ್ನು ಬಿಎಚ್‍ಇಎಲ್ ಸಹಕಾರದೊಂದಿಗೆ ಕೈಗೊಳ್ಳಲಾಗುತ್ತಿದೆ ಎಂದರು.
ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದಂತೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲ ತಾಲೂಕುಗಳಲ್ಲಿ ವಿದ್ಯುತ್ ಪರಿವರ್ತಕಗಳ ಬ್ಯಾಂಕ್‍ಗಳನ್ನು ಆರಂಭಿಸಲಾಗಿದ್ದು, ಯಾವುದೇ ಕಡೆ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆರ್‍ಟಿಪಿಎಸ್ ಮತ್ತು ವೈಟಿಪಿಎಸ್‍ಗೆ ಭೇಟಿ ಪರಿಶೀಲನೆ
ಇಂಧನ ಸಚಿವ ಡಿ.ಕೆ.ಶಿವಕುಮಾರ ಅವರು ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲಿಗೆ ಆರ್‍ಟಿಪಿಎಸ್‍ಗೆ ಭೇಟಿ ನೀಡಿ ಕೋಲ್(ಕಲ್ಲಿದ್ದಲ್ಲು) ಸ್ಯಾಂಪಲಿಂಗ್ ಟೆಸ್ಟ್ ಮಾಡುವ ಕೇಂದ್ರ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಕಾರ್ಮಿಕರ ಹಾಗೂ ಉದ್ಯೋಗಿಗಳ ಅಹವಾಲುಗಳನ್ನು ಈ ಸಂದರ್ಭದಲ್ಲಿ ಆಲಿಸಿದರು.

ಇದಾದ ನಂತರ ಕಲ್ಲಿದ್ದಲು ಡಂಪ್ ಮಾಡುವ ಸ್ಥಳವನ್ನು ಅವರು ಪರಿಶೀಲಿಸಿದರು. ಅದೇ ರೀತಿ ವೈಟಿಪಿಎಸ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ ಅಲ್ಲಿನ ಕೆಲ ತೊಡಕುಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಿವಾರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.ನಗರದ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button