ಸಾಮರಸ್ಯ ನಡಿಗೆಗೆ ಬಂದಿರುವ ಮನುಷ್ಯರಿಗೆ ಸ್ವಾಗತ… -ನಟ ಪ್ರಕಾಶ್ ರೈ ಸ್ಪೀಚ್
ಮಂಗಳೂರು: ಸಾಮರಸ್ಯ ನಡಿಗೆಗೆ ಬಂದಿರುವ ಎಲ್ಲಾ ಮನುಷ್ಯರಿಗೂ ಸ್ವಾಗತ ಎಂದು ಹೇಳುವ ಮೂಲಕ ವಿಭಿನ್ನ ಶೈಲಿಯ ಭಾಷಣ ಆರಂಭಿಸಿದ ಬಹುಭಾಷಾ ನಟ ಪ್ರಕಾಶ ರೈ ದೇಶದ ಪ್ರಜೆಯಾಗಿ ಸಾಮರಸ್ಯ ನಡಿಗೆಯಲ್ಲಿ ಭಾಗಿಯಾಗಿದ್ದೇನೆಂದರು. ಬಂಟ್ವಾಳದ ಸಾಮರಸ್ಯ ನಡಿಗೆ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಕಶ ರೈ ಮನುಷ್ಯನ ಹತ್ಯೆಗೆ ಹತ್ಯೆ ಎಂಬ ರಾಜಕೀಯದ ವಿರುದ್ಧ ನಮ್ಮ ಸಾಮರಸ್ಯ ನಡಿಗೆ ಸಾಗಲಿದೆ. ಒಬ್ಬ ಕಲಾವಿದ ಪ್ರತಿಭೆಯಿಂದ ಮಾತ್ರ ಬೆಳೆಯುವುದಿಲ್ಲ. ಜನರ ಪ್ರೀತಿಯಿಂದ ಬೆಳೆಯುತ್ತಾನೆ. ಹೀಗಾಗಿ, ನಾನು ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾದಾಗ ಜನರ ಜೊತೆಗೆ ನಿಲ್ಲುತ್ತೇನೆಂದರು.
ಮನುಷ್ಯನ ಹತ್ಯೆ ಬಹುದೊಡ್ಡ ತಪ್ಪು. ಮನುಷ್ಯ ಹತ್ಯೆಯಲ್ಲೂ ರಾಜಕೀಯ ಮಾಡುವವರು ಮಹಾನ್ ರಾಕ್ಷಸರು. ಜಾತಿ, ಧರ್ಮ ಮನುಷ್ಯನಿಂದ ಹುಟ್ಟಿದೆ ಹೊರತು ಮನುಷ್ಯನನ್ನು ಹುಟ್ಟಿಸಿದ್ದಲ್ಲ. ಕೊಲ್ಲು ಎನ್ನು ಧರ್ಮ ಅದ್ಹೇಗೆ ಧರ್ಮವಾಗುತ್ತೆ, ಅದು ಧರ್ಮವೇ ಅಲ್ಲ. ಹುಲ್ಲು ಕಡ್ಡಿಯನ್ನೂ ಸೃಷ್ಠಿಸಲು ಶಕ್ತಿ ಇಲ್ಲದ ನಮಗೆ ಕೊಲ್ಲುವ ಹಕ್ಕಿಲ್ಲ. ಕೋಮು ಗಲಭೆಗೆ ಪ್ರಚೋದನೆ ನೀಡುವವರನ್ನು ದೂರವಿಟ್ಟು ನಮ್ಮ ಮನೆಯನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳೋಣ ಎಂದು ಪ್ರಕಾಶ ರೈ ಅಭಿಪ್ರಾಯ ಪಟ್ಟರು.