ಪತ್ರಿಕೋದ್ಯಮ ಬಗ್ಗೆ ಮೈಸೂರು ಸಂಸದ ಪ್ರತಾಪ ಸಿಂಹ ಫೇಸ್ ಬುಕ್ ಪಾಠ!
ಐ ಸಪೋರ್ಟ್ ಪ್ರತಾಪ ಸಿಂಹ್ ಹೆಸರಿನಲ್ಲಿ ಫೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿಕೊಂಡಿರುವವರು ಪದ್ಮಾವತಿ ಸಿನೆಮಾ ಬಗ್ಗೆ ಏನೋ ಹೇಳಲು ಹೋಗಿ ರಾಣಿ ಚನ್ನಮ್ಮ ಮತ್ತು ಒನಕೆ ಓಬವ್ವ ಅವರ ಹೆಸರನ್ನು ಕೀಳುಮಟ್ಟದಲ್ಲಿ ಬಳಸಿಕೊಂಡಿದ್ದಾರೆ. ಅದನ್ನು ನಾನೂ ಖಂಡಿಸುತ್ತೇನೆ. ತಪ್ಪಿತಸ್ಥರಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಲಿ ಎಂದು ಫೇಸ್ ಬುಕ್ ಲೈವ್ ನಲ್ಲಿ ಹೇಳಿರುವ ಮೈಸೂರು ಸಂಸದ ಪ್ರತಾಪ್ ಸಿಂಹ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು ಫೇಸ್ ಬುಕ್ ಮೂಲಕವೇ ಪತ್ರಿಕೋದ್ಯಮದ ಪಾಠ ಹೇಳಿದ್ದಾರೆ.
ಕೆಲ ಖಾಸಗಿ ವಾಹಿನಿಯವರು ಮಾತ್ರ ನಾನೇ ಈ ಹೇಳಿಕೆ ಪ್ರಕಟಿಸಿದ್ದೇನೆಂದು, ನನ್ನ ಬೆಂಬಲಿಗರು ಪ್ರಕಟಿಸಿದ್ದಾರೆಂದು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ನನ್ನ ಬಳಿ ಈ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆ ಸಹ ಪಡೆಯದೆ ಸುದ್ದಿ ಪ್ರಸಾರ ಮಾಡುವ ಮೂಲಕ ಪತ್ರಿಕೋದ್ಯಮದ ಮೂಲ ತತ್ವವನ್ನೇ ಗಾಳಿಗೆ ತೂರಿದ್ದಾರೆ . ರಾಣಿ ಚನ್ನಮ್ಮ, ಒನಕೆ ಓಬವ್ವ ಅವರನ್ನು ಅವಹೇಳನ ಮಾಡಿದ್ದು ನನ್ನ ಬೆಂಬಲಿಗರು ಎನ್ನುತ್ತೀರಿ. ಇಂಟರನೆಟ್ ಒಂದು ಫ್ರೀ ಮೀಡಿಯಾ, ಅದು ಯಾರ ಕಂಟ್ರೋಲ್ ನಲ್ಲೂ ಇಲ್ಲ. ಇಂಟರನೆಟ್ ನಲ್ಲಿ ಯಾರು ಯಾವ ಹೆಸರಿನಲ್ಲಿ ಬೇಕಾದರು ಪೇಜ್ ಮಾಡಬಹುದು ಅದಕ್ಕೆ ಕಡಿವಾಣ ಹಾಕೋಕೆ ಆಗೋದಿಲ್ಲ. ಎಂಪಿ ಪ್ರತಾಪ ಸಿಂಹ ಅಂತ ಒಂದು ಪೇಜ್, ಪ್ರತಾಪ ಸಿಂಹ ಅಂತ ಒಂದು ನನ್ನ ವಯಕ್ತಿಕ ಪೇಜ್ ಇದೆ. ಟ್ವೀಟರ್ ಮತ್ತು ಫೇಸ್ ಬುಕ್ ಅಕೌಂಟ್ ಗಳಲ್ಲಿ ನಾನು ನನ್ನ ಅಭಿಪ್ರಾಯ ದಾಖಲಿಸುತ್ತೇನೆ.
ಪುಂಖಾನುಪುಂಖವಾಗಿ ನನ್ನ ವಿರುದ್ಧ ಸುದ್ದಿ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿಯೊಂದರ ವರದಿಗಾರನಿಗೆ ಫೋನ್ ಮಾಡಿ ಈ ಬಗ್ಗೆ ಹೇಳಿದ್ದೇನೆ. ಆದರೆ, ಈವರೆಗೆ ಅವರು ನನ್ನ ಪ್ರತಿಕ್ರಿಯೆಯನ್ನೇ ಪಡೆದಿಲ್ಲ. ಈಗಾಗಲೇ ಬದನಾಮಿ ಮಾಡಿದ್ದಾರೆ. ಮತ್ಯಾರೋ ಐ ಸಪೋರ್ಟ್ ಅಂತ ನಿಮ್ಮ ಟಿವಿ ಹೆಸರಲ್ಲಿ ಪೇಜ್ ಮಾಡಿ ಏನು ಬೇಕಾದರು ಬರೆಯಬಹುದು ಆಗ ಏನು ಹೇಳುತ್ತೀರಿ.. ಚಾನಲ್ಗಳ ಬಗ್ಗೆನೂ ಜನ ಏನು ಮಾತನಾಡಿಕೊಳ್ಳುತ್ತಾರೆ ಅಂತ ನೀವೂ ತಿಳ್ಕೊಳ್ಳಿ ಆಗ ಅರ್ಥವಾಗುತ್ತದೆ.
ನಾನೂ ಪತ್ರಿಕೋದ್ಯಮದಲ್ಲಿದ್ದವನು. ಮದಕರಿ ನಾಯಕ, ಒನಕೆ ಓಬವ್ವ, ಚನ್ನಮ್ಮ ಅಂಥವರ ಬಗ್ಗೆ ಹದಿಮೂರುವರೆ ವರ್ಷ ಅಭಿಮಾನ ಮೂಡುವ ರೀತಿಯಲ್ಲಿ ಬರೆದುಕೊಂಡು ಬಂದಿದ್ದೇನೆ. ಹೀಗಾಗಿ, ನನ್ನ ಅಭಿಮಾನಿಗಳು ಸಹ ಹೀಗೆ ಚನ್ನಮ್ಮ, ಓಬವ್ವನ ಬಗ್ಗೆ ಕೀಳುಮಟ್ಟದ ಪೋಸ್ಟ್ ಮಾಡಲು ಸಾಧ್ಯವಿಲ್ಲ. ಮೂರು ದಿನಗಳ ಹಿಂದೆಯೇ ಹಾಕಿದ್ದರಂತಲ್ಲ ಈ ಪೋಸ್ಟ್. ನೀವು ನೋಡಿಕೊಂಡಿರಲಿಲ್ಲವಾ. ಈವತ್ತು ನೋಡಿಕೊಂಡು ಇದರಿಂದ ಟಿಆರ್ ಪಿ ಬರುತ್ತದೆ ಅಂತ ಸುದ್ದಿ ಪ್ರಕಟಿಸಿದ್ರಾ. ಇದು ಪತ್ರಿಕಾ ಧರ್ಮ ಅಲ್ಲ.
ನನ್ನ ಪತ್ರಿಕಾ ಜೀವನದಲ್ಲಿ ಯಾರ ತೇಜೋವಧೆಯನ್ನೂ ನಾನು ಮಾಡಿಲ್ಲ. ರಾಣಿ ಬಗ್ಗೆ ಅನುಮಾನ ಇರಕೂಡದು ಎಂದು ಹೇಳುವವನು ನಾನು. ಇಂಥ ವಿಚಾರ ಬಂದಾಗ ಸಂಭಂಧಿತರ ಒಂದು ಪ್ರತಿಕ್ರಿಯೆ ಪಡೆದು ಸುದ್ದಿ ಪ್ರಸಾರ ಮಾಡಿ. ಯಾರು ನನ್ನ ಬೆಂಬಲಿಗರು, ನಮ್ಮ ಜೊತೆಗೆ ಸೆಲ್ಫಿ ತೆಗೆದುಕೊಂಡ ಫೋಟೋ ತೋರಿಸಿ ಲೆಫ್ಟ್ ಹ್ಯಾಂಡ್, ರೈಟ್ ಹ್ಯಾಂಡ್ ಎಂದು ಹೇಳಿಬಿಡುತ್ತೀರಾ. ಅನೇಕರ ಬಗ್ಗೆ ಬದನಾಮಿ ಮಾಡಿದ್ದೀರಿ. ಆಮೇಲೆ ನೀವು ಪ್ರಸಾರ ಮಾಡಿದ ಸುದ್ದಿಯೇ ತಪ್ಪು ಎಂದು ಸಾಬೀತಾಗಿದೆ. ಅದನ್ನು ನೀವು ತೋರಿಸಿದ್ದೀರಾ. ತೋರಿಸಿ ಕ್ಷಮೆ ಕೇಳಿದರೂ ಏನು ಪ್ರಯೋಜನ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನನ್ನ ಮೇಲೆ ದ್ವೇಷವಿದ್ದರೆ ನೇರವಾಗಿಯೇ ಹೊಡೆದಾಡಿಬಿಡಿ. ನಾಡಿನ ಜನರಿಗೆ ವಾಸ್ತವದ ಪರಿಚಯ ಆಗಲಿ. ನಾನು ಎದೆಮೇಲೆ ಕೈ ಇಟ್ಟುಕೊಂಡು ಹೇಳ್ತೀನಿ. ನಾನು ಮೋದಿ ಭಕ್ತನಾಗಿ ಬಂದವನು. ಅವರು ಹೇಳಿದ್ರು ನಾ ಖಾವುಂಗಾ, ನಾ ಖಾನೇ ದುಂಗಾ ಅಂತ. ಎದೆಮುಟ್ಟಿ ಹೇಳುತ್ತೇನೆ. ನಾನು ಯಾರ ಬಳಿಯೂ ಒಂದು ಕಪ್ ಚಹಾ ಕುಡಿದಿಲ್ಲ, ಬಿಸ್ಕತ್ ತಿಂದಿಲ್ಲ. ಪತ್ರಕರ್ತ ಮಿತ್ರರಲ್ಲಿ ಕೇಳುವುದಿಷ್ಟೇ ಅನಗತ್ಯವಾಗಿ ನನ್ನನ್ನು ಈ ರೀತಿ ಚಿತ್ರಿಸುವುದು ಸರಿಯಲ್ಲ. ಪೋಸ್ಟ್ ಹಾಕಿದವರ ಮೇಲೆ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಲಿ ಎಂದು ನಾನು ಆಗ್ರಹಿಸುತ್ತೇನೆ.
ದುರ್ಗಕ್ಕೆ ಹೋಗಿ ಒನಕೆ ಓಬವ್ವ ಓರ್ವ ಛಲವಾದಿ ಮಹಿಳೆ. ಅಂತ ವೀರ ಮಹಿಳೆಯನ್ನು ಹೈದರಾಲಿ ಮತ್ತು ಟಿಪ್ಪು ಕಡೆಯವರು ಚೂರಿ ಹಾಕಿದರು. ಅಂಥವರ ಜಯಂತಿ ಮಾಡಲು ಹೊರಟಿದ್ದೀರಲ್ಲ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿ ಬಂದವನು ನಾನು. ನಾನು ಅಂತ ವೀರ ನಾರಿಯರ ಬಗ್ಗೆ ಕೀಳಾಗಿ ಮಾತನಾಡುವುದು ಉಂಟೆ.
ನನ್ನ ಬರವಣಿಗೆ ಒಪ್ಪಿ ನನ್ನನ್ನು ಇಷ್ಟಪಟ್ಟವರು ಯಾರೂ ಸಹ ರೀತಿಯ ನಾಲಾಯಕ್ ಕೆಲಸ ಮಾಡೋದಿಲ್ಲ. ನಿಮ್ಮ ವೃತ್ತಿ ಅನಿವಾರ್ಯತೆ ಇರುತ್ತದೆ. ಯಾರಿಗೋ ಮಸಿಬಳಿಯುವ ಮೂಲಕ ನಿಮ್ಮ ಚಾನಲ್ ಟಿಆರ್ ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಬೇಡ. ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ಎಂದು ಜನ ನಂಬಬೇಕಾದರೆ ಸಮಾಜಕ್ಕೆ ಗಟ್ಟಿಯಾಗಿ ಸತ್ಯಾಸತ್ಯತೆ ತಿಳಿಸಬೇಕಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಮಾದ್ಯಮಗಳಿಗೆ ಪತ್ರಿಕೋದ್ಯಮದ ಪಾಠ ಮಾಡಿದ್ದಾರೆ ಸಂಸದ ಪ್ರತಾಪ್ ಸಿಂಹ.